ಕರ್ನಾಟಕ ಚುನಾವಣೆ ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿ: ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚೌಹಾಣ್
ಉಡುಪಿ, ಮೇ 6: ಕರ್ನಾಟಕದಲ್ಲಿ ಮೇ 10ರಂದು ನಡೆಯುವ ಚುನಾವಣೆ ಮುಂಬರುವ ಮಧ್ಯಪ್ರದೇಶ, ಛತ್ತೀಸ್ ಗಢ ಹಾಗೂ 2024ರ ಲೋಕಸಭಾ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಭವಿಷ್ಯ ನುಡಿದಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್‌ಗೆ ಬಿಜೆಪಿಗಿಂತಲೂ ಅಧಿಕ ಪ್ರಮಾಣದ ಮತಗಳನ್ನು ನೀಡಿದ್ದರೂ, ಒಂದು ವರ್ಷದ ಬಳಿಕ ಪ್ರತಿಪಕ್ಷ ಗಳಿಂದ ಶಾಸಕರನ್ನು ಕದ್ದು, ಬಿಜೆಪಿ ಅಕ್ರಮವಾಗಿ ಆಡಳಿತ ನಡೆಸಿತ್ತು. ಬಿಜೆಪಿಯ ಈ ಕಳ್ಳತನಕ್ಕೆ ರಾಜ್ಯದ ಜನತೆ ಸರಿಯಾದ ಉತ್ತರ ನೀಡಬೇಕಿದೆ ಎಂದರು.
ಕಳೆದ ನಾಲ್ಕು ವರ್ಷಗಳ ಬಿಜೆಪಿಯ ಆಡಳಿತ ವೈಖರಿಯನ್ನು ನೀವು ನೋಡಿದ್ದೀರಿ. ಬಿ.ಎಸ್.ಯಡಿಯೂರಪ್ಪ ಅವರನ್ನು ಹಠಾತ್ತನೆ ಬದಲಿಸಿ ನರೇಂದ್ರ ಮೋದಿ ಅವರು ಎಸ್.ಆರ್.ಬೊಮ್ಮಾಯಿ ಅವರನ್ನು ಸಿಎಂ ಮಾಡಿರುವುದು ಯಾಕೆ ಎಂಬುದು ರಾಜ್ಯದ ಜನತೆಗೀಗ ಅರ್ಥವಾಗಿರಬಹುದು ಎಂದು ಚೌಹಾಣ್ ಹೇಳಿದರು.
‘ನಾ ಖಾವೂಂಗಾ.. ನಾ ಖಾನೆ ದೂಂಗಾ..’ ಎಂದು ದೇಶದ ಜನತೆಗೆ ಭರವಸೆ ನೀಡಿ 2014ರಲ್ಲಿ ಆಡಳಿತಕ್ಕೆ ಬಂದ ನರೇಂದ್ರ ಮೋದಿಯವರ ಸ್ಲೋಗನ್ ಎಷ್ಟರ ಮಟ್ಟಿಗೆ ಪಾಲನೆಯಾಗಿದೆ ಎಂಬುದನ್ನು ದೇಶದ ಜನತೆ ಚೆನ್ನಾಗಿ ಮನದಟ್ಟಾಗಿದೆ. ಕಳೆದ 9 ವರ್ಷಗಳಲ್ಲಿ ಆಡಳಿತದ ಅರಾಜಕತೆಯನ್ನೇ ನಾವು ನೋಡಿದ್ದೇವೆ ಎಂದು ಮೋದಿ ಸರಕಾರವನ್ನು ಟೀಕಿಸಿದರು.
ಈ ದೇಶ ಕಂಡ ಅತ್ಯಂತ ಭ್ರಷ್ಟ ರಾಜ್ಯ ಸರಕಾರ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಎಂದು ಬಣ್ಣಿಸಿದ ಚೌಹಾಣ್, ಬೆಲೆ ಏರಿಕೆ, ನಿರುದ್ಯೋಗ ದೊಂದಿಗೆ ಜನರ ಬದುಕನ್ನೇ ಸಂಕಷ್ಟಕ್ಕೆ ನೂಕಿದ ಈ ಸರಕಾರ, ಆರ್ಥಿಕತೆಯನ್ನು ಸಂಪೂರ್ಣ ಹದಗೆಡಿಸಿದೆ ಎಂದು ಆರೋಪಿಸಿದರು.
ಇಂಥ ಭ್ರಷ್ಟ ಸರಕಾರವನ್ನು ಒದ್ದೋಡಿಸಲು ಕರ್ನಾಟಕದ ಜನತೆ ದೃಢ ನಿರ್ಧಾರ ಮಾಡಿದ್ದಾರೆ ಎಂಬುದು ನನಗೆ ಮನದಟ್ಟಾಗಿದೆ ಎಂದ ಅವರು, ಉತ್ತಮ ಆಡಳಿತವನ್ನು ನರೇಂದ್ರ ಮೋದಿ ಅವರಿಗೆ ನೀಡಲು ಸಾಧ್ಯವಿಲ್ಲ ಎಂಬುದು 9 ವರ್ಷಗಳ ಅವರ ಆಡಳಿತ ವೈಖರಿಯೇ ಹೇಳುತ್ತದೆ. 2014ರಲ್ಲಿದ್ದ ದೇಶದ ಸಾಲದ ಮೊತ್ತ 53ಲಕ್ಷ ಕೋಟಿ ಇದೀಗ 153 ಲಕ್ಷ ಕೋಟಿಯಷ್ಟು ಅಗಾಧವಾಗಿ ಬೆಳೆದಿದೆ ಎಂದರು.
ಮೇ 10ರ ಚುನಾವಣೆಯಲ್ಲಿ ಅತ್ಯಂತ ಭ್ರಷ್ಟ ಬಿಜೆಪಿ ಸರಕಾರವನ್ನು ಒದ್ದೋಡಿಸಿ ಎಂದು ಪೃಥ್ವಿರಾಜ್ ಚೌಹಾಣ್ ರಾಜ್ಯದ ಜನತೆಗೆ ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಂಎಲ್‌ಸಿ ಮಂಜುನಾಥ ಭಂಡಾರಿ, ಅಶೋಕ ಕುಮಾರ್ ಕೊಡವೂರು, ಕಿಶನ್ ಹೆಗ್ಡೆ ಕೊಳ್ಕೆ ಬೈಲ್, ಪದ್ಮರಾಜ್, ಹರೀಶ್ ಕಿಣಿ, ಭಾಸ್ಕರರಾವ್ ಕಿದಿಯೂರು, ನರಸಿಂಹ ಮೂರ್ತಿ, ದಿನೇಶ್ ಪುತ್ರನ್, ಅಣ್ಣಯ್ಯ ಶೇರಿಗಾರ್ ಮುಂತಾದವರು ಉಪಸ್ಥಿತರಿದ್ದರು.