​ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಷರತ್ತು

Update: 2023-05-07 04:03 GMT

ಕರಾಚಿ: ಈ ವರ್ಷ ಅಕ್ಟೋಬರ್ 5ರಿಂದ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಭಾಗವಹಿಸುವ ಬಗ್ಗೆ ಇದ್ದ ಅನುಮಾನಗಳಿಗೆ ಅಲ್ಲಿನ ಕ್ರಿಕೆಟ್ ನಿಯಂತ್ರಣ ಮಂಡಳಿ ತೆರೆ ಎಳೆದಿದೆ. 2025ರಲ್ಲಿ ಪಾಕಿಸ್ತಾನದಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಭಾಗವಹಿಸುವ ಬಗ್ಗೆ ಬಿಸಿಸಿಐ ಅಧ್ಯಕ್ಷ ಜಯ್ ಶಾ "ಲಿಖಿತ ಖಾತರಿ" ನೀಡಿದಲ್ಲಿ ತಮ್ಮ ತಂಡ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿದೆ ಎಂದು ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಸ್ಪಷ್ಟಪಡಿಸಿದ್ದಾರೆ.

ವಿಶ್ವಕಪ್ ಪಂದ್ಯಾವಳಿಯ ಪಾಕಿಸ್ತಾನ ತಂಡದ ಪಂದ್ಯಗಳಿಗೆ ಅಹ್ಮದಾಬಾದ್ (ಭಾರತ ವಿರುದ್ಧದ ಪಂದ್ಯ), ಚೆನ್ನೈ, ಬೆಂಗಳೂರು ಹಾಗೂ ಕೊಲ್ಕತ್ತಾ ಕ್ರೀಡಾಂಗಣಗಳನ್ನು ಆಯ್ಕೆ ಮಾಡಲಾಗಿದೆ. ಅದಾಗ್ಯೂ ಜಯ್ ಶಾ ಅಧ್ಯಕ್ಷತೆಯ ಏಷ್ಯನ್ ಕ್ರಿಕೆಟ್ ಸಮಿತಿ ಮುಂಬರುವ ಏಷ್ಯಾಕಪ್ ಪಂದ್ಯಾವಳಿಯ ’ಹೈಬ್ರೀಡ್ ಮಾದರಿ’’ಯನ್ನು ಇನ್ನೂ ಅಂತಿಮಪಡಿಸಿಲ್ಲ. ಈ ಮಾದರಿಯ ಅನ್ವಯ ಭಾರತ ತನ್ನ ಪಂದ್ಯಗಳನ್ನು ಯುಎಇಯಲ್ಲಿ ಆಡಲಿದೆ ಹಾಗೂ ಬಾಬರ್ ಅಝಂ ನೇತೃತ್ವದ ಪಾಕಿಸ್ತಾನ ತಂಡ ತವರು ನೆಲದಲ್ಲಿ ತಮ್ಮ ಪಂದ್ಯಗಳನ್ನು ಆಡಲಿದೆ.

ಎಸಿಸಿ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧಿಕಾರಿಗಳ ಜತೆ ಮಾತುಕತೆ ನಡೆಸುವ ಸಲುವಾಗಿ ಸೇಥಿ ಈ ತಿಂಗಳ 8ರಂದು ದುಬೈಗೆ ತೆರಳಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಪಾಕಿಸ್ತಾನದಲ್ಲಿ 2025ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಭಾಗವಹಿಸುವುದಾಗಿ ಲಿಖಿತ ಭರವಸೆ ನೀಡಿದಲ್ಲಿ ಮಾತ್ರ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಭಾಗವಹಿಸುತ್ತದೆ ಎಂಬ ತಮ್ಮ ನಿಲುವಿಗೆ ಬೆಂಬಲ ಕ್ರೋಢೀಕರಿಸಲು ಲಾಬಿ ನಡೆಸಲಿದ್ದಾರೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ.

Similar News