ಉತ್ತರ ಪ್ರದೇಶ: 10ನೇ ತರಗತಿ ಪರೀಕ್ಷೆಯಲ್ಲಿ ಶೇ. 95ರಷ್ಟು ಕೈದಿಗಳು ಉತ್ತೀರ್ಣ

Update: 2023-05-07 08:57 GMT

ಲಕ್ನೊ: ಉತ್ತರ ಪ್ರದೇಶದ 10ನೇ ತರಗತಿ ಮಂಡಳಿ ಪರೀಕ್ಷೆಯಲ್ಲಿ ಶೇ. 95ರಷ್ಟು ಕೈದಿಗಳು ಉತ್ತೀರ್ಣರಾಗಿದ್ದರೆ, 12ನೇ ತರಗತಿ ಪರೀಕ್ಷೆಯಲ್ಲಿ ಶೇ. 70ರಷ್ಟು ಕೈದಿಗಳು ಉತ್ತೀರ್ಣರಾಗುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

ಎಪ್ರಿಲ್ 25ರಂದು ಪ್ರಯಾಗ್‌ರಾಜ್‌ನ ಉತ್ತರ ಪ್ರದೇಶ ಮಾಧ್ಯಮಿಕ ಶಿಕ್ಷಣ ಪರಿಷತ್ 10 ಮತ್ತು 12ನೇ ತರಗತಿಗಳ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿತ್ತು.

ಬಂದೀಖಾನೆ ಇಲಾಖೆಯ ಪ್ರಕಾರ, 10ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದ 60 ಮಂದಿ ಕೈದಿಗಳ ಪೈಕಿ 57 ಮಂದಿ ಕೈದಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರುವ ಕೈದಿಗಳ ಪ್ರಮಾಣ ಶೇ. 82.40ರಷ್ಟಿದೆ.

ಇದೇ ವೇಳೆ, 12ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದ 64 ಕೈದಿಗಳ ಪೈಕಿ 45 ಕೈದಿಗಳು ಉತ್ತೀರ್ಣರಾಗಿದ್ದು, ಉತ್ತೀರ್ಣತೆಯ ಶೇಕಡಾವಾರು ಪ್ರಮಾಣ ಶೇ. 70.30ರಷ್ಟಿದೆ. ಈ ಪೈಕಿ ಆರು ಮಂದಿ ಕೈದಿಗಳು (ಶೇ. 13.30) ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

10ನೇ ತರಗತಿಯ ಪರೀಕ್ಷೆಗೆ ಹಾಜರಾಗಿದ್ದ ಫಿರೋಝಾಬಾದ್ ಜಿಲ್ಲೆಯ ಎಲ್ಲ ಆರು ಕೈದಿಗಳು, ಲಕ್ನೊ ಜಿಲ್ಲಾ ಕಾರಾಗೃಹದ ಎಲ್ಲ ಐದು ಕೈದಿಗಳು ಹಾಗೂ ಶಹಜಹಾನ್‌ಪುರ ಜಿಲ್ಲಾ ಕಾರಾಗೃಹದ ಎಲ್ಲ ನಾಲ್ಕು ಕೈದಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

Similar News