ರಾಜಸ್ಥಾನ ಸರಕಾರ ಉಳಿಸಲು ವಸುಂಧರಾ ರಾಜೆ ನೆರವು: ಹೊಸ ಬಾಂಬ್ ಸಿಡಿಸಿದ ಅಶೋಕ್ ಗೆಹ್ಲೋಟ್

Update: 2023-05-07 17:24 GMT

ಧೋಲ್ಪುರ (ರಾಜಸ್ಥಾನ), ಮೇ 7: 2020ರಲ್ಲಿ ತನ್ನ ಪಕ್ಷ (ಕಾಂಗ್ರೆಸ್)ದ ಶಾಸಕರೇ ಬಂಡಾಯ ಎದ್ದಾಗ ಸರಕಾರ ಉಳಿಸಲು ವಸುಂಧರ ರಾಜೆ ಹಾಗೂ ಬಿಜೆಪಿಯ ಇತರ ಇಬ್ಬರು ನಾಯಕರು ನೆರವು ನೀಡಿದರು ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರವಿವಾರ ಪ್ರತಿಪಾದಿಸಿದ್ದಾರೆ. 

ಕಾಂಗ್ರೆಸ್‌ನ ಬಂಡಾಯ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ ಗೆಹ್ಲೋಟ್, ‘‘ ಸರಕಾರವನ್ನು ಉರುಳಿಸಲು ಅವರು ಬಿಜೆಪಿಯಿಂದ ಪಡೆದುಕೊಂಡಿದ್ದ  ಹಣವನ್ನು ವಾಪಸ್ ಮಾಡಬೇಕಾಗಿದೆ. ಆಗ ಮಾತ್ರ  ಅವರು ತಮ್ಮ ಕೆಲಸವನ್ನು ಯಾವುದೇ ಒತ್ತಡವಿಲ್ಲದೆ ನಿರ್ವಹಿಸಬಹುದಾಗಿದೆ’’ ಎಂದು ವ್ಯಂಗ್ಯವಾಡಿದರು.   
ಆಗ ಉಪ ಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ಹಾಗೂ ಕಾಂಗ್ರೆಸ್‌ನ ಇತರ 18 ಶಾಸಕರು ಗೆಹ್ಲೋಟ್ ನಾಯಕತ್ವದ ವಿರುದ್ಧ  2020 ಜುಲೈಯಲ್ಲಿ ಬಂಡಾಯ ಎದ್ದಿದ್ದರು.  ಒಂದು ತಿಂಗಳು ಕಾಲ ಮುಂದುವರಿದ ಬಿಕ್ಕಟ್ಟು ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿದ ಬಳಿಕ ಶಮನವಾಗಿತ್ತು. ಅನಂತರ ಪೈಲಟ್ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೈಬಿಡಲಾಗಿತ್ತು. 

ಧೋಲ್ಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗೆಹ್ಲೋಟ್, ಮಾಜಿ ಮುಖ್ಯಮಂತ್ರಿ ವಸುಂಧರ ರಾಜೆ,  ವಿಧಾನ ಸಭೆಯ ಮಾಜಿ ಸ್ವೀಕರ್ ಕೈಲಾಸ್ ಮೇಘವಾಲ್ ಹಾಗೂ ಶಾಸಕಿ  ಶೋಭಾರಾಣಿ ಕುಶ್ವಾಹ್ ಅವರ ಬೆಂಬಲ ನೀಡಿರುವುದರಿಂದ ಸರಕಾರವನ್ನು ಉಳಿಸಲು ಸಾಧ್ಯವಾಯಿತು ಎಂದು ಹೇಳಿದರು. 
‘‘ಅಮಿತ್ ಶಾ, ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಧರ್ಮೇಂದ್ರ ಪ್ರಧಾನ್ (ಕೇಂದ್ರ ಸಚಿವರು) ಒಟ್ಟಾಗಿ ನನ್ನ ಸರಕಾರವನ್ನು ಉರುಳಿಸಲು ಸಂಚು ಹೂಡಿದರು. ಅವರು ರಾಜಸ್ಥಾನದಲ್ಲಿ ಹಣ ವಿತರಿಸಿದರು. ಆದರೆ, ಅವರು ಹಣವನ್ನು ಹಿಂದೆ ತೆಗೆದುಕೊಳ್ಳಲಿಲ್ಲ. ಅವರು (ಶಾಸಕರು) ಹಣವನ್ನು ಹಿಂದೆ ನೀಡಬೇಕೆಂದು ಯಾಕೆ ಆಗ್ರಹಿಸಲಿಲ್ಲ ಎಂದು ನನಗೆ ಅಚ್ಚರಿಯಾಗುತ್ತಿದೆ’’ ಎಂದು ಅವರು ಪ್ರತಿಪಾದಿಸಿದರು.

Similar News