×
Ad

ಮೋದಿ, ಬಜರಂಗದಳಕ್ಕೆ ಮಾಡಿರುವ ಅಪಮಾನಕ್ಕೆ ಚುನಾವಣೆಯಲ್ಲಿ ತಕ್ಕ ಉತ್ತರ: ಏಕನಾಥ ಶಿಂಧೆ

Update: 2023-05-08 20:23 IST

ಉಡುಪಿ, ಮೇ 8: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಜರಂಗದಳಕ್ಕೆ ಕಾಂಗ್ರೆಸ್‌ನವರು ಮಾಡಿರುವ ಅವಮಾನಕ್ಕೆ ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ದಿ ಈ ಚುನಾವಣೆಯ ಪ್ರಮುಖ ವಿಷಯ. ಕಾಂಗ್ರೇಸಿಗರು ಮೋದಿ ಅವರನ್ನು ವಿಷ ಸರ್ಪ ಎಂದು ಕರೆದಿದ್ದಾರೆ. ಗುಜರಾತ್ ಚುನಾವಣೆ ಕಾಲದಲ್ಲೂ ಮೌತ್ ಕ ಸೌದಾಗರ್, ಚೌಕಿದಾರ್ ಎಂದು ಹೇಳಿದರು. ಮೋದಿ ಯಾವುದಕ್ಕೂ ಸೇಡು ತೀರಿಸಿಕೊಂಡಿಲ್ಲ. ಜನರು ಸೇಡು ತೀರಿಸಿಕೊಂಡು ತಕ್ಕ ಪಾಠ ಕಲಿಸಿದ್ದಾರೆ. ಕರ್ನಾಟಕದ ಜನರು ಮೋದಿಗೆ ಮಾಡಿದ ಅವಮಾನ ಸಹಿಸುವುದಿಲ್ಲ ಎಂದರು.

ಕಾಪು ಮತ್ತು ಉಡುಪಿಯ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಬಂದಿದ್ದೇನೆ. ಬಿಜೆಪಿ ಜೊತೆ ನಮ್ಮ ಸಹಭಾಗಿತ್ವ ಇರುವ ಕಾರಣ ಬಂದಿದ್ದೇನೆ. ಕರಾವಳಿ ಭಾಗದಲ್ಲಿ ಅನೇಕ ಮಂದಿ ಮಹಾರಾಷ್ಟ್ರ ಮೂಲದ ಜನರು ನೆಲೆಸಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಗೆ ಅನುಕೂಲಕರ ಸ್ಥಿತಿಯಿದೆ. ಮೋದಿ  ಅವರ ರೋಡ್ ಶೋ ಲಕ್ಷಾಂತರ ಜನರ ಮೇಲೆ ಪ್ರಭಾವ ಬೀರಿದೆ. ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿತ್ರಣ ಸಂಪೂರ್ಣ ಬದಲಾಗಿದೆ ಎಂದು ಅವರು ತಿಳಿಸಿದರು.

ಈ ಬಾರಿ ಕರ್ನಾಟಕದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಸಿಗುವ ವಿಶ್ವಾಸ ಇದೆ. ಇದು ಕೇವಲ ಕರ್ನಾಟಕ ಚುನಾವಣೆ ಅಲ್ಲ, ದೇಶದ ಚುನಾವಣೆ. ಇದು ಒಂದು ರಾಜ್ಯಕ್ಕೆ ಸೀಮಿತ ಚುನಾವಣೆ ಅಲ್ಲ. ಮೋದಿ ಅವರ ಚುನಾವಣೆ. ದೇಶದ ಆರ್ಥಿಕ ವ್ಯವಸ್ಥೆ 11ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಬಂದಿದೆ. ಪ್ರಪಂಚದ ಬೇರೆ ದೇಶಗಳ ಆರ್ಥಿಕ ಸ್ಥಿತಿ ಹದಗಟ್ಟಿದೆ. ಆದರೆ ಭಾರತದ ಆರ್ಥಿಕ ಸ್ಥಿತಿ ಸದೃಢವಾಗಿದ್ದು ಹೆಮ್ಮೆಯಿಂದ ಭಾರತದ ಹೆಸರು ಹೇಳುತ್ತಿದ್ದಾರೆ ಎಂದು ಅವರು ಹೇಳಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರಕಾರ ಇದ್ದಾಗ ಜನರಿಗೆ ಅನುಕೂಲ ವಾಗುತ್ತದೆ. ನಮ್ಮ ಸರಕಾರ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ನಮ್ಮ ಸರಕಾರ ಬಂದ ಬಳಿಕ ಮಹಾರಾಷ್ಟ್ರದ ಅಭಿವೃದ್ಧಿ ಮತ್ತೆ ಸಹಜವಾಗಿದೆ. ಕರ್ನಾಟಕಕ್ಕೂ ಕೇಂದ್ರ ಸರಕಾರ ಸಾವಿರಾರು ಕೋಟಿ ಅನುದಾನ ನೀಡಿದೆ. ಮತ್ತೊಮ್ಮೆ ಡಬಲ್ ಇಂಜಿನ್ ಸರಕಾರ ಬರಲಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಪ್ರತ್ಯೇಕ ಸರಕಾರಗಳಿದ್ದರೆ ವಿಕಾಸಕ್ಕೆ ಹಿನ್ನಡೆಯಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉದಯ ಕುಮಾರ್ ಶೆಟ್ಟಿ, ಕುಯಿಲಾಡಿ ಮಟ್ಟಾರು, ರಾಘವೇಂದ್ರ ಕಿಣಿ, ಮಹೇಶ್ ಠಾಕೂರು, ಮಹಾರಾಷ್ಟ್ರದ ಸಂಸದ ರಾಹುಲ್ ಶೆಹುಡೆ, ಮೀನಾಕ್ಷಿ ಶಿಂಧೆ, ಸಂತೋಷ್ ಎಂ.ಶೆಟ್ಟಿ, ನರೇಶ್ ಮಸ್ತಿ ಉಪಸ್ಥಿತರಿದ್ದರು.

Similar News