ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೊರಗ ವಿದ್ಯಾರ್ಥಿಗಳ ಸಾಧನೆ
ಉಡುಪಿ, ಮೇ 8: ಕುಟುಂಬದ ಆರ್ಥಿಕ ಸಮಸ್ಯೆಗಳ ನಡುವೆಯೂ ಯಾವುದೇ ಟ್ಯೂಷನ್ ಹೋಗದೆ ಮನೆ ಯಲ್ಲಿಯೇ ಓದಿ ಹಕ್ಲಾಡಿ ಗ್ರಾಮದ ಬಗ್ವಾಡಿ ವಾಸಿ ಕೂಲಿ ಕಾರ್ಮಿಕರಾದ ಮಾಸ್ತಿ ಕೊರಗ ಮತ್ತು ಬುಡ್ಡು ದಂಪತಿ ಪುತ್ರಿ ಶ್ಯಾಮಲ, ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 526 ಅಂಕಗಳನ್ನು ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಹಕ್ಲಾಡಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ಯಾಮಲ ವಿದ್ಯಾಭ್ಯಾಸದ ಜೊತೆಗೆ ರಂಗ ಚಟುವಟಿಕೆಯಲ್ಲಿ ತೊಡಗಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿ. ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಪಂಚವಟಿ ನಾಟಕದಲ್ಲಿ ಸೂರ್ಪನಖಿ ಪಾತ್ರದಲ್ಲಿ ಅದ್ಭುತ ನಟನೆಯಲ್ಲಿ ಇವರು ಎಲ್ಲರ ಗಮನ ಸೆಳೆದಿದ್ದರು.
ಅದೇ ರೀತಿ ಗಣೇಶ ಮತ್ತು ಮಾಲತಿ ದಂಪತಿ ಪುತ್ರಿ ಆಲೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅಂಕಿತ ಎಸೆಸೆಲ್ಸಿ ಪರೀಕ್ಷೆಯಲ್ಲಿ 463ಅಂಕವನ್ನು ಪಡೆದು ಶೈಕ್ಷಣಿಕ ಸಾಧನೆಯನ್ನು ಮಾಡಿದ್ದಾರೆ. ಈಕೆ ಅಂಕಿತ ಆಲೂರು ಶಾಲೆಯ ಮಕ್ಕಳ ತ್ರೋಬಾಲ್ ತಂಡದ ನಾಯಕಿ. ತ್ರೋಬಾಲ್ ಆಟದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಮೈಸೂರು ವಿಭಾಗ ಮಟ್ಟದಲ್ಲಿ ಭಾಗವಹಿಸಿದ್ದಾಳೆ.
ಪ್ರತಿಭಾನ್ವಿತ ಕೊರಗ ಸಮುದಾಯದ ವಿದ್ಯಾರ್ಥಿನಿಯರಿಗೆ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಘಟನಾ ಸಮಿತಿ ಅಭಿನಂದನೆ ಸಲ್ಲಿಸಿದೆ.