×
Ad

ದ್ವಿಪಕ್ಷೀಯ ಸಂಬಂಧ ಹದಗೆಡಲು ಅಮೆರಿಕದ ಸರಣಿ ಪ್ರಮಾದ ಕಾರಣ: ಚೀನಾ

Update: 2023-05-08 23:00 IST

ಬೀಜಿಂಗ್, ಮೇ 8: ಅಮೆರಿಕದ ತಪ್ಪು ಮಾತುಗಳು ಹಾಗೂ ತಪ್ಪು ಕಾರ್ಯಗಳ ಸರಣಿಯು ಅಮೆರಿಕ- ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ದುರ್ಬಲಗೊಳಿಸಿದೆ ಎಂದು ಚೀನಾ ಸೋಮವಾರ ಆರೋಪಿಸಿದೆ.

`ತೈವಾನ್ ಸಮಸ್ಯೆಯ ನಿರ್ವಹಣೆಯನ್ನು ಅಮೆರಿಕ ಸರಿಪಡಿಸಬೇಕು ಮತ್ತು ಒಂದು ಚೀನಾ ನೀತಿ ಟೊಳ್ಳಾಗುವುದಕ್ಕೆ ಆಸ್ಪದ ನೀಡಬಾರದು ಎಂದು  ಚೀನಾಕ್ಕೆ ಅಮೆರಿಕದ ರಾಯಭಾರಿ ನಿಕೊಲಸ್ ಬನ್ರ್ ನ ಜತೆ ನಡೆಸಿದ ಮಾತುಕತೆ ಸಂದರ್ಭ ಚೀನಾದ ವಿದೇಶಾಂಗ ಸಚಿವ ಕ್ವಿನ್ ಗಾಂಗ್ ಸ್ಪಷ್ಟಪಡಿಸಿದರು. ಫೆಬ್ರವರಿಯಲ್ಲಿ ಚೀನಾದ ಬಲೂನನ್ನು ಅಮೆರಿಕದ ಸೇನೆ ಕೆಳಗಿಳಿಸಿದ ಘಟನೆಯ ಬಳಿಕ ಉಭಯ ದೇಶಗಳ ನಡುವೆ ನಡೆಯುತ್ತಿರುವ ಪ್ರಥಮ ಉನ್ನತ ಮಟ್ಟದ ಸಭೆ ಇದಾಗಿದೆ.

ಕಳೆದ ನವೆಂಬರ್ ನಲ್ಲಿ ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ಮತ್ತು ಅಮೆರಿಕದ ಅಧ್ಯಕ್ಷ ಜೋ ಬೈಡನ್ ನಡುವೆ ಜಿ20 ಶೃಂಗಸಭೆಯಲ್ಲಿ ನಡೆದ ಮಾತುಕತೆಯನ್ನು ಉಲ್ಲೇಖಿಸಿದ ಕ್ವಿನ್ ಗಾಂಗ್ ` ಎರಡೂ ದೇಶಗಳ ನಡುವೆ ಕಷ್ಟಪಟ್ಟು ಗಳಿಸಿದ ಧನಾತ್ಮಕ ಅಭಿವೃದ್ಧಿ ಆವೇಗವನ್ನು ಅಮೆರಿಕದ ಸರಣಿ ಪ್ರಮಾದ ಹಾಗೂ ತಪ್ಪು ಮಾತುಗಳು ನಾಶಗೊಳಿಸಿದೆ. ಒಪ್ಪಿದ ಮಾತುಕತೆಗಳು ಮತ್ತು ಸಹಕಾರ ಕಾರ್ಯಸೂಚಿಗೆ ಅಡ್ಡಿಯಾಗಿರುವುದರಿಂದ ಅಮೆರಿಕ-ಚೀನಾ ಸಂಬಂಧವನ್ನು ಸ್ಥಿರಗೊಳಿಸುವುದು ಮತ್ತು ಉಭಯ ದೇಶಗಳ ನಡುವಿನ ಅನಿರೀಕ್ಷಿತ ಘಟನೆಯನ್ನು ತಡೆಯುವುದು ಅನಿವಾರ್ಯವಾಗಿದೆ' ಎಂದರು.

ಅಮೆರಿಕವು ಚೀನಾದ ಕುರಿತ ತನ್ನ ಗ್ರಹಿಕೆಯನ್ನು ಸರಿಪಡಿಸಬೇಕು, ವೈಚಾರಿಕತೆಗೆ ಮರಳಬೇಕು ಮತ್ತು ಎರಡೂ ದೇಶದ ಉತ್ತಮ ಅಭಿವೃದ್ಧಿಯಲ್ಲಿ ಪರಸ್ಪರ ಯಶಸ್ಸನ್ನು ಕಾಣಬೇಕು. ಒಂದೆಡೆ ಸಂವಹನದ ಬಗ್ಗೆ ಮಾತನಾಡುತ್ತಾ, ಇನ್ನೊಂದೆಡೆ ಚೀನಾವನ್ನು ನಿರಂತರ ಹತ್ತಿಕ್ಕುವ  ಮತ್ತು ನಿಗ್ರಹಿಸುವ ಕೆಲಸ ಮಾಡಬಾರದು ಎಂದವರು ಆಗ್ರಹಿಸಿದ್ದಾರೆ. ತೈವಾನ್ ವಿಷಯವನ್ನು ಉಲ್ಲೇಖಿಸಿದ ಕ್ವಿನ್ `ಚೀನಾದ ಕೆಂಪುಗೆರೆಯನ್ನು ಅಮೆರಿಕ ಗೌರವಿಸಬೇಕು. 

ಚೀನಾದ ಸಾರ್ವಭೌಮತ್ವ, ಭದ್ರತೆ ಮತ್ತು ಅಭಿವೃದ್ಧಿ ಹಿತಾಸಕ್ತಿಗೆ ಹಾನಿಯುಂಟು ಮಾಡುವುದನ್ನು ನಿಲ್ಲಿಸಬೇಕು. ಅಮೆರಿಕ-ಚೀನಾ ಸಂಬಂಧಗಳ ಮೇಲೆ ಹೆಚ್ಚಿನ ಪರಿಣಾಮವಾಗುವುದನ್ನು ತಪ್ಪಿಸಲು ನಾವು ದ್ವಿಪಕ್ಷೀಯ ಸಂಬಂಧಗಳಲ್ಲಿ ಅನಿರೀಕ್ಷಿತ ಘಟನೆಗಳನ್ನು ಶಾಂತ, ವೃತ್ತಿಪರ ಮತ್ತು ಪ್ರಾಯೋಗಿಕ ರೀತಿಯಲ್ಲಿ ನಿಭಾಯಿಸುವುದನ್ನು ಮುಂದುವರಿಸಬೇಕು' ಎಂದು ಹೇಳಿರುವುದಾಗಿ ಸಿಜಿಟಿನ್ ಸುದ್ಧಿಸಂಸ್ಥೆ ವರದಿ ಮಾಡಿದೆ.

Similar News