×
Ad

ಚಾಟ್‌ಜಿಪಿಟಿಯ ದುರ್ಬಳಕೆ: ಚೀನಾದಲ್ಲಿ ಓರ್ವನ ಬಂಧನ

Update: 2023-05-08 23:19 IST

ಬೀಜಿಂಗ್, ಮೇ 8: ರೈಲು ಅಪಘಾತದ ಬಗ್ಗೆ ನಕಲಿ ಸುದ್ಧಿಯನ್ನು ಸೃಷ್ಟಿಸಿದ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು  ಅದನ್ನು ಆನ್ಲೈನ್ನಲ್ಲಿ ಪ್ರಸಾರ ಮಾಡಿದ ಆರೋಪದ ಮೇಲೆ ಚೀನಾದ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಚಾಟ್ಜಿಪಿಟಿಯ ದುರ್ಬಳಕೆಗೆ ಸಂಬಂಧಿಸಿ ಚೀನಾದಲ್ಲಿ ನಡೆದಿರುವ ಪ್ರಥಮ ಬಂಧನ ಪ್ರಕರಣ ಇದಾಗಿದೆ. `ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಸುಳ್ಳು ಮತ್ತು ಅಸತ್ಯವಾದ ಮಾಹಿತಿಯನ್ನು ಸಂಯೋಜಿಸಿದ್ದ ಹಾಂಗ್ ಎಂಬ ಉಪನಾಮ ಹೊಂದಿರುವ ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ ಎಂದು ವಾಯವ್ಯ ಗನ್ಸು ಪ್ರಾಂತದ ಪೊಲೀಸರ ಹೇಳಿಕೆ ತಿಳಿಸಿದೆ.

ಎಪ್ರಿಲ್ 25ರಂದು ಹಾಂಕಾಂಗ್ ಕೌಂಟಿಯಲ್ಲಿ ನಡೆದ ರೈಲು ದುರಂತದಲ್ಲಿ 9 ಮಂದಿ ಮೃತಪಟ್ಟಿರುವುದಾಗಿ ಪ್ರಸಾರವಾದ ಸುಳ್ಳುಸುದ್ಧಿಯನ್ನು ಗಮನಿಸಿದ ಸೈಬರ್ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ಬೈಜಿಯಾಹೊ ಎಂಬ ಬ್ಲಾಗ್ವೇದಿಕೆಯಲ್ಲಿ ಇದೇ ರೀತಿಯ 20ಕ್ಕೂ ಅಧಿಕ ಖಾತೆಗಳಲ್ಲಿ ಈ ಸುದ್ಧಿ ಪ್ರಸಾರವಾಗಿರುವುದು ಬೆಳಕಿಗೆ ಬಂದಿದೆ. ಈ ವರದಿಗೆ 15,000ಕ್ಕೂ ಅಧಿಕ ಕ್ಲಿಕ್ಗಳು ಬಂದಿತ್ತು. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಹಾಂಗ್ ಎಂಬಾತ `ಜಗಳ ಹುಟ್ಟಿಸುವ ಮತ್ತು ತೊಂದರೆಯನ್ನು ಪ್ರಚೋದಿಸುವ ಉದ್ದೇಶದಿಂದ ಚಾಟ್ಜಿಪಿಟಿ ತಂತ್ರಜ್ಞಾನ ಬಳಸಿ ಕೃತ್ಯ ಎಸಗಿರುವುದು ದೃಢಪಟ್ಟಿದೆ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Similar News