ವಿಟ್ಲ: ಮತದಾನಕ್ಕೆ ಸಕಲ ಸಿದ್ಧತೆ; ಗಡಿಭಾಗದಲ್ಲಿ ಬಿಗಿ ಭದ್ರತೆ
ವಿಟ್ಲ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪುತ್ತೂರು ಮತ್ತು ಬಂಟ್ವಾಳ ವಿಧಾನ ಸಭಾ ವ್ಯಾಪ್ತಿಯ ವಿಟ್ಲ ಭಾಗದಲ್ಲಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದೆ.
ವಿಟ್ಲ ಹೋಬಳಿ ಬಂಟ್ವಾಳ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ 58 ಮತ್ತು ಪುತ್ತೂರು ವಿಧಾನ ಸಭಾ ಕ್ಷೇತ್ರ 51 ಮತಗಟ್ಟೆಗಳನ್ನು ಒಳಗೊಂಡಿದೆ.
ವಿಟ್ಲ ಹೋಬಳಿ ಬಹುತೇಕ ಭಾಗಗಳು ಕರ್ನಾಟಕ-ಕೇರಳ ಗಡಿಭಾಗವಾಗಿರುವುದರಿಂದ ಒಟ್ಟು 10 ಪೊಲೀಸ್ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಗಡಿಭಾಗದಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಬಿಗಿ ತಪಾಸಣೆ ನಡೆಸಲಾಗುತ್ತಿತ್ತು. ವಿಟ್ಲ-ಕಾಸರಗೋಡು ಹೆದ್ದಾರಿಯ ಸಾರಡ್ಕ ಪೊಲೀಸ್ ಚೆಕ್ ಪೋಸ್ಟ್ ಶಾಶ್ವತ ಚೆಕ್ ಪೋಸ್ಟ್ ಆಗಿದ್ದು, ಇಲ್ಲಿ ಪ್ರತಿನಿತ್ಯ ಪೊಲೀಸರು ಕರ್ತವ್ಯದಲ್ಲಿದ್ದಾರೆ. ವಿಟ್ಲ ಠಾಣಾ ವ್ಯಾಪ್ತಿಯ ವಿವಿಧೆಡೆ ಅಂದಾಜು 100 ಮಂದಿ ಸಿಐಎಸ್‍ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 500 ರಷ್ಟು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮಂಗಳವಾರ ಮಧ್ಯಾಹ್ನವೇ ಅಧಿಕಾರಿಗಳು ಮತಗಟ್ಟೆಗೆ ಆಗಮಿಸಿ, ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ.