ಗಾಝಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 3 ಮಕ್ಕಳ ಸಹಿತ 12 ಮಂದಿ ಮೃತ್ಯು
ಜೆರುಸಲೇಂ, ಮೇ 9: ಮಂಗಳವಾರ ಬೆಳಿಗ್ಗೆ ಗಾಝಾದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಮಕ್ಕಳು, ಮೂವರು ಫೆಲೆಸ್ತೀನ್ ಸಶಸ್ತ್ರ ಹೋರಾಟಗಾರರ ಸಹಿತ 12 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
`ಬಾಣ ಮತ್ತು ಗುರಾಣಿ' ಎಂಬ ಹೆಸರಿನ ಕಾರ್ಯಾಚರಣೆ ಆರಂಭವಾಗಿದ್ದು ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕ ಸಂಘಟನೆಯ ಮೂವರು ಸದಸ್ಯರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ನ ರಕ್ಷಣಾ ಪಡೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಗಾಝಾದ ಕಡೆಯಿಂದ ಇಸ್ರೇಲ್ ಪ್ರದೇಶದತ್ತ ನಡೆದಿರುವ ಹಲವು ದಾಳಿಗೆ ಇದು ಉತ್ತರವಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ವೈಮಾನಿಕ ದಾಳಿಯಲ್ಲಿ ಮೂವರು ಮಕ್ಕಳ ಸಹಿತ 9 ನಾಗರಿಕರು ಮೃತಪಟ್ಟಿದ್ದು ಹಲವರು ಗಾಯಗೊಂಡಿರುವುದಾಗಿ ಫೆಲೆಸ್ತೀನ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ಭಯೋತ್ಪಾದಕ ದಾಳಿಯಿಂದ ಇಸ್ರೇಲ್ ನಾಗರಿಕರನ್ನು ರಕ್ಷಿಸಲು ಈ ಕಾರ್ಯಾಚರಣೆ ಅತ್ಯಗತ್ಯವಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿದೆ. ಈ ಮಧ್ಯೆ, ಗಾಝಾದ 2 ಗಡಿದಾಟು(ಬೋರ್ಡರ್ ಕ್ರಾಸಿಂಗ್)ಗಳನ್ನು ಮುಂದಿನ ಸೂಚನೆಯವರೆಗೆ ಮುಚ್ಚಲಾಗಿದೆ ಎಂದು ಇಸ್ರೇಲ್ ಘೋಷಿಸಿದೆ.