×
Ad

ಜನಜಾಗರಣ್ ಧರ್ಮ ಸಭೆಯಲ್ಲಿ ‘ದ್ವೇಷಪೂರಿತ ಭಾಷಣ’:ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾನವಹಕ್ಕು ಸಂಘಟನೆಗಳ ಪತ್ರ

Update: 2023-05-09 22:15 IST

ಹೊಸದಿಲ್ಲಿ, ಮೇ 9: ಸಕಲ್ ಹಿಂದೂ ಸಮಾಜ ಎಂಬ ಸಂಘಟನೆಯು ಮಹಾರಾಷ್ಟ್ರದ ಥಾಣೆಯ ಮುಂಬ್ರಾದಲ್ಲಿ ಎಪ್ರಿಲ್ 30ರಂದು ನಡೆಸಿದ ಹಿಂದೂ ಜನಜಾಗರಣ್ ಧರ್ಮ ಸಭೆಯಲ್ಲಿ ‘‘ಕೋಮುವಾದಿ ಮತ್ತು ದ್ವೇಷ ಕಾರುವ ಭಾಷಣಗಳನ್ನು’’ ಮಾಡಲಾಗಿದೆ ಎಂದು ಮಾನವಹಕ್ಕು ಸಂಘಟನೆಗಳು ಥಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ದೂರಿದ್ದಾರೆ.

‘‘ಆ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್ಚಿನ ಭಾಷಣಕಾರರು, ಬಲಪಂಥೀಯ ಹಾಗೂ ಕೆಲವರನ್ನು ಹೊರಗಿಡಬೇಕೆಂದು ಹೇಳುವ ಸಿದ್ಧಾಂತಗಳನ್ನು ಬೋಧಿಸಿದರು. ಅವರು ಜನರನ್ನು ಪ್ರಚೋದಿಸುವ, ಬೆಂಕಿ ಹಚ್ಚುವ ಮಾತುಗಳನ್ನು ಆಡಿದರು. ಅವರು ತಮ್ಮ ಭಾಷಣಗಳ ಮೂಲಕ ನಮ್ಮ ದೇಶದ ಮುಸ್ಲಿಮ್ ನಾಗರಿಕರು ಮತ್ತು ಸಮುದಾಯದ ಮೇಲೆ ನಿರ್ದಿಷ್ಟವಾಗಿ ದಾಳಿ ನಡೆಸಿದರು’’ ಎಂದು ಸಂಘಟನೆಗಳು ತಮ್ಮ ಪತ್ರದಲ್ಲಿ ಹೇಳಿವೆ.

ಆ ಭಾಷಣಗಳ ವೀಡಿಯೊಗಳು ವೈರಲ್ ಆಗಿವೆ ಹಾಗೂ ಆ ಪೈಕಿ ಐದು ಉದ್ರೇಕಕಾರಿ ಭಾಷಣಗಳು ಇಂಟರ್ನೆಟ್ನಲ್ಲಿ ಲಭ್ಯವಿವೆ ಎಂದು ತಮ್ಮ ಪತ್ರದಲ್ಲಿ ಸಂಘಟನೆಗಳು ಹೇಳಿವೆ.

‘‘ಈ ಪ್ರಚೋದನಾತ್ಮಕ ಭಾಷಣಗಳ ಮೇಲೆ ನಾವು ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇವೆ. ಇಂಥ ಭಾಷಣಗಳನ್ನು ಮಾಡಿದವರ ವಿರುದ್ಧ ಅತ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ. ಈ ದ್ವೇಷಪೂರಿತ ಭಾಷಣಗಳನ್ನು ಹಾಗೆಯೇ ಬಿಟ್ಟರೆ ನಮ್ಮ ದೇಶದ ಶಾಂತಿ ಮತ್ತು ಸೌಹಾರ್ದತೆಯು ನಾಶವಾಗುತ್ತದೆ’’ ಎಂದು ಸಂಘಟನೆಗಳು ಹೇಳಿವೆ.

ನ್ಯಾಶನಲ್ ಅಲಯನ್ಸ್ ಫಾರ್ ಪೀಪಲ್ಸ್ ಮೂವ್ಮೆಂಟ್ಸ್; ಸಂಜೀವನಿ ಕೇಂದ್ರ, ಥಾಣೆ; ಪರ್ಚಮ್, ಮುಂಬ್ರಾ; ಮತ್ತು ಸಿಟಿಝನ್ಸ್ ಫಾರ್ ಜಸ್ಟೀಸ್ ಆ್ಯಂಡ್ ಪೀಸ್, ಮುಂಬೈ ಈ ಪತ್ರಕ್ಕೆ ಸಹಿ ಹಾಕಿವೆ.

Similar News