ಪ್ರಜಾಸತ್ತೆಯನ್ನು ಗೆಲ್ಲಿಸೋಣ

Update: 2023-05-11 04:15 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

 ‘ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ, ಯಾರು ಸರಕಾರ ರಚನೆ ಮಾಡುತ್ತಾರೆ, ಯಾವ ಪಕ್ಷ ಎಷ್ಟು ಸ್ಥಾನಗಳನ್ನು ತನ್ನದಾಗಿಸಿಕೊಳ್ಳುತ್ತದೆ’ ಎನ್ನುವುದನ್ನೇ ನಾವು ಚುನಾವಣೆಯ ಫಲಿತಾಂಶವೆಂದು ನಂಬಿಕೊಂಡು ಬಂದಿದ್ದೇವೆ. ಆದರೆ ಒಂದು ಚುನಾವಣೆಯ ನಿಜವಾದ ಫಲಿತಾಂಶ ಮತದಾನ ಮುಗಿದಾಕ್ಷಣವೇ ಬಹಿರಂಗವಾಗಿ ಬಿಡುತ್ತದೆ. ಚುನಾವಣೆ ಅಕ್ರಮ ರಹಿತವಾಗಿ, ಪಾರದರ್ಶಕವಾಗಿ ನಡೆದಾಗ ಮತ್ತು ಚುನಾವಣೆಯಲ್ಲಿ ಗರಿಷ್ಠ ಸಂಖ್ಯೆಯ ಮತದಾರರು ಪಾಲುಗೊಂಡಾಗ ‘ನಿಜವಾದ ಫಲಿತಾಂಶ’ ಹೊರ ಬಿದ್ದಂತೆ. ಚುನಾವಣೆಯಲ್ಲಿ ಯಾವ ಪಕ್ಷವೇ ಗೆದ್ದು ಬರಲಿ, ಅವರು ಅಕ್ರಮ ರಹಿತವಾದ ಚುನಾವಣೆಯ ಪಕ್ರಿಯೆಯ ಮೂಲಕ, ಗರಿಷ್ಠ ಮತದಾರರ ಪಾಲ್ಗೊಳ್ಳುವಿಕೆಯ ಮೂಲಕ ಆಯ್ಕೆಯಾಗುವುದು ಇಂದಿನ ಅಗತ್ಯ. ಹಣ, ಹೆಂಡ, ಹಿಂಸಾಚಾರಗಳು ನಿಯಂತ್ರಿಸಿ ಹೊರ ಬೀಳುವ ಫಲಿತಾಂಶ ಚುನಾವಣೆಯ ಉದ್ದೇಶವನ್ನು ಈಡೇರಿಸಲಾರದು. ಆದುದರಿಂದಲೇ, ಚುನಾವಣೆಯಲ್ಲಿ ಯಾರು ಆಯ್ಕೆಯಾದರು ಎನ್ನುವುದಕ್ಕಿಂತ, ಚುನಾವಣೆಯಲ್ಲಿ ಮತದಾರರ ಪಾಲ್ಗೊಳ್ಳುವಿಕೆ ಹೇಗಿತ್ತು ಎನ್ನುವುದು ಚುನಾವಣೆಯ ಸೋಲು ಗೆಲುವನ್ನು ಹೇಳುತ್ತದೆ. ಈ ಕಾರಣದಿಂದಲೇ, ಮತದಾನವನ್ನು ‘ಬಹು ಮುಖ್ಯ ಹೊಣೆಗಾರಿಕೆ’ಯಾಗಿ ಸ್ವೀಕರಿಸಿ ಮತ ಚಲಾಯಿಸಿ ಪ್ರಜಾಸತ್ತೆಯನ್ನು ಗೆಲ್ಲಿಸುವುದು ನಮ್ಮ ಆದ್ಯತೆಯಾಗಬೇಕಾಗಿದೆ.

ಚುನಾವಣೆಯ ಬಗ್ಗೆ ಸಿನಿಕತನದ ಮಾತನಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ‘ಸಜ್ಜನರಿಗೆ ರಾಜಕೀಯ ಹೇಳಿದ ವಿಷಯವಲ್ಲ’ ಎಂದು ರಾಜಕೀಯವನ್ನು ಸಜ್ಜನರು ಅಸ್ಪಶ್ಯವನ್ನಾಗಿಸಿಕೊಂಡ ಪರಿಣಾಮವಾಗಿ ರಾಜಕೀಯದಲ್ಲಿ ದುರ್ಜನರು ವಿಜೃಂಭಿಸುತ್ತಿದ್ದಾರೆ. ವಿದ್ಯಾವಂತರು ಇತರೆಲ್ಲ ಕ್ಷೇತ್ರಗಳಲ್ಲಿ ಆಸಕ್ತಿ ತೋರಿಸಿದಂತೆ, ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿಯನ್ನು ತೋರಿಸುತ್ತಿಲ್ಲ. ತೋಳ್ಬಲ, ಹಣಬಲದ ಮೂಲಕ ರಾಜಕಾರಣಿಗಳಾಗುವವರ ಸಂಖ್ಯೆ ಹೆಚ್ಚುತ್ತಿವೆ. ಹಿಂದೆಲ್ಲ ರಾಜಕೀಯ ನಾಯಕನಾಗಿ ಮೂಡಿ ಬರಬೇಕಾದರೆ ಆತ ತಳಸ್ತರದಲ್ಲಿ ಜನಸಾಮಾನ್ಯರ ನಡುವೆ ಓಡಾಡುವುದು ಅತ್ಯಗತ್ಯವಾಗಿತ್ತು. ರೈತರು, ಕಾರ್ಮಿಕರನ್ನು ಸಂಘಟಿಸಿ, ಅವರ ಹಕ್ಕುಗಳ ಬಗ್ಗೆ ಮಾತನಾಡುತ್ತಾ ಹಂತ ಹಂತವಾಗಿ ನಾಯಕನಾಗಿ ಬೆಳೆಯಬೇಕಾಗಿತ್ತು. ಆದರೆ ಇಂದು ಹಾಗಿಲ್ಲ.

‘ವಾಟ್ಸ್‌ಆ್ಯಪ್, ಫೇಸ್‌ಬುಕ್’ ಮೂಲಕ ರಾತ್ರೋ ರಾತ್ರಿ ನಾಯಕರಾಗಿ ಹೊರಹೊಮ್ಮುವವರ ಸಂಖ್ಯೆ ಹೆಚ್ಚುತ್ತಿವೆ. ಯಾವುದೋ ಒಂದು ಸಭೆಯಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ನಿಂದಿಸಿ, ಗಲಭೆಗೆ ಪ್ರಚೋದನೆ ನೀಡಿದರೆ ಮರುದಿನದಿಂದ ಆತ ರಾಜಕೀಯ ಪಕ್ಷದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆಯನ್ನು ಪಡೆದುಕೊಳ್ಳುತ್ತಾನೆ. ಜೊತೆಗೆ ಹಣವಿದ್ದರೆ ‘ಗೆಲ್ಲುವ ಅಭ್ಯರ್ಥಿ’ಯಾಗಿ ಬಿಂಬಿತನಾಗುತ್ತಾನೆ. ಸಲೀಸಾಗಿ ಚುನಾವಣೆ ಗೆದ್ದು ಸಚಿವನಾಗಿ ಈ ನಾಡನ್ನು ಆಳುತ್ತಾನೆ. ವರ್ತಮಾನದಲ್ಲಿ ಇಂತಹ ನಾಯಕರೇ ತುಂಬಿ ತುಳುಕುತ್ತಿರುವುದರಿಂದ, ವಿದ್ಯಾವಂತರು, ಸಜ್ಜನರು ರಾಜಕೀಯದಿಂದ ದೂರವಿದ್ದಾರೆ ಮಾತ್ರವಲ್ಲ, ಮತದಾನದ ಬಗ್ಗೆಯೂ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ‘ಎಲ್ಲ ಅಭ್ಯರ್ಥಿಗಳೂ ಅನರ್ಹರೇ ಆಗಿರುವುದರಿಂದ’ ಯಾರಿಗೆ ಮತ ಹಾಕಿದರೂ ಒಂದೇ ಎನ್ನುವ ಮನಸ್ಥಿತಿ ಅವರಲ್ಲಿ ಹೆಚ್ಚುತ್ತಿದೆ. ಈ ಕಾರಣದಿಂದ ಭ್ರಷ್ಟ ಮತದಾರರು ಆಯ್ಕೆ ಮಾಡಿದ ಭ್ರಷ್ಟ ನಾಯಕರ ಮೂಲಕ ಆಳಿಸಿಕೊಳ್ಳುವುದು ದೇಶದ ಪಾಲಿಗೆ ಅನಿವಾರ್ಯವಾಗಿ ಬಿಟ್ಟಿದೆ.

ದುರ್ಜನರು ತುಂಬಿಕೊಂಡಿರುವುದರಿಂದ ರಾಜಕೀಯದಿಂದ ಸಜ್ಜನರು ದೂರವಾಗುತ್ತಿದ್ದಾರೆ ಎನ್ನುವುದಕ್ಕಿಂತ, ಸಜ್ಜನರು ದೂರವಾಗುತ್ತಿರುವುದರ ಲಾಭವನ್ನು ದುರ್ಜನರು ಪಡೆದುಕೊಳ್ಳುತ್ತಿದ್ದಾರೆ ಎನ್ನುವುದು ಹೆಚ್ಚು ಸರಿ. ಚುನಾವಣೆಯಲ್ಲಿ ಭ್ರಷ್ಟರು, ಕ್ರಿಮಿನಲ್‌ಗಳು ಭಾಗವಹಿಸುತ್ತಿದ್ದಾರೆ ನಿಜ. ಅದನ್ನು ಪ್ರತಿಭಟಿಸುವುದಕ್ಕೆ ಸಜ್ಜನರಿಗಿರುವ ಅತ್ಯುತ್ತಮ ಅವಕಾಶ ಮತದಾನವಾಗಿದೆ. ಸಜ್ಜನರು ಹೆಚ್ಚು ಹೆಚ್ಚು ಮತದಾನದಲ್ಲಿ ಭಾಗವಹಿಸಿದಂತೆಯೇ ದುರ್ಜನರು ಚುನಾವಣೆಯಲ್ಲಿ ಗೆಲ್ಲುವ ಮತಗಳ ಅಂತರ ಕಡಿಮೆಯಾಗುತ್ತಾ ಹೋಗುತ್ತದೆ. ಮತದಾನದಿಂದ ದೂರ ಉಳಿದು, ಈ ದೇಶದ ಭ್ರಷ್ಟ ವ್ಯವಸ್ಥೆಯ ಬಗ್ಗೆ, ಹೆಚ್ಚುತ್ತಿರುವ ಹಿಂಸಾಚಾರ, ಅಪರಾಧಗಳ ಬಗ್ಗೆ ಚರ್ಚಿಸುವುದು ಹೊಣೆಗೇಡಿತನವಾಗಿದೆ. ವಿದ್ಯಾವಂತರು ರಾಜಕೀಯವನ್ನು ಅಸ್ಪಶ್ಯವಾಗಿಸಿಕೊಂಡಿರುವುದು ಕೂಡ ದೇಶದ ಇಂದಿನ ಸ್ಥಿತಿಗೆ ಮುಖ್ಯ ಕಾರಣವಾಗಿದೆ. ಒಬ್ಬ ವಿದ್ಯಾವಂತ, ಪ್ರಜ್ಞಾವಂತ ಪ್ರಜೆ ಪ್ರಜಾಸತ್ತೆಗೆ ನೀಡಬಹುದಾದ ಕನಿಷ್ಠ ಕೊಡುಗೆ ‘ಮತದಾನ’ ಮಾಡುವುದಾಗಿದೆ.

ಮತದಾನದಿಂದ ವಿಮುಖನಾಗಿ ಪ್ರಜಾಸತ್ತೆಯ ಬಗ್ಗೆ ಆತಂಕ ಪಡುವುದರಲ್ಲಿ ಯಾವ ಅರ್ಥವೂ ಇಲ್ಲ. ಆದುದರಿಂದ, ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾವು ಯಾವುದೇ ಪಕ್ಷವನ್ನು ಗೆಲ್ಲಿಸುವ ಮೊದಲು ಪ್ರಜಾಸತ್ತೆಯನ್ನು ಗೆಲ್ಲಿಸುವ ಕಡೆಗೆ ಮನ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ, ಪ್ರತಿಯೊಬ್ಬರು ಮತದಾನದಲ್ಲಿ ಭಾಗವಹಿಸುವುದು ಮಾತ್ರವಲ್ಲ, ಇತರರನ್ನು ಮತದಾನದಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವುದು ಅತ್ಯಗತ್ಯವಾಗಿದೆ. ಮತದಾನದ ಸಂದರ್ಭದಲ್ಲಿ ಯಾರಿಗೆ ಮತ ಚಲಾಯಿಸಬೇಕು? ಎಂಬುದು ಪ್ರಜ್ಞಾವಂತರಿಗೆ ಎದುರಾಗುವ ಇನ್ನೊಂದು ಜಟಿಲ ಪ್ರಶ್ನೆ. ಈ ಸಂದರ್ಭದಲ್ಲಿ ಹಲವರು ‘ನೋಟಾ’ವನ್ನು ಬಳಸುವುದಿದೆ. ಭಾರತದಂತಹ ದೇಶದಲ್ಲಿ ನೋಟಾದ ಸಕಲ ಪ್ರಯೋಜನವನ್ನು ಭ್ರಷ್ಟರೇ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಮರೆಯಬಾರದು. ನೋಟಾವನ್ನು ಬಳಸುವ ಹೆಚ್ಚಿನ ಜನರು ಪ್ರಜ್ಞಾವಂತರು ಮತ್ತು ವಿದ್ಯಾವಂತರು. ಇರುವ ಅಭ್ಯರ್ಥಿಗಳಲ್ಲಿ ಯಾರು ಕಡಿಮೆ ಭ್ರಷ್ಟರು, ಕಡಿಮೆ ಅಪಾಯಕಾರಿಗಳು ಎನ್ನುವುದನ್ನು ಗುರುತಿಸುವ ಶಕ್ತಿಯಿರುವವರು. ಇವರ ಮತಗಳೆಲ್ಲವೂ ನೋಟಾ ಪಾಲಾದರೆ, ಭ್ರಷ್ಟ, ಅಪಾಯಕಾರಿ ಅಭ್ಯರ್ಥಿಯ ದಾರಿ ಇನ್ನಷ್ಟು ಸುಗಮವಾಗುತ್ತದೆ. ಆದುದರಿಂದ, ಸದ್ಯಕ್ಕೆ ನಮಗಿರುವ ಒಂದೇ ಒಂದು ದಾರಿಯೆಂದರೆ, ಕಡಿಮೆ ಭ್ರಷ್ಟರು, ಕಡಿಮೆ ಅಪಾಯಕಾರಿಗಳನ್ನು ಗುರುತಿಸಿ ಅವರಿಗೆ ಮತ ಚಲಾಯಿಸುವುದು.

ಅಭ್ಯರ್ಥಿಗಳಲ್ಲಿ ಕಡಿಮೆ ಅಪಾಯಕಾರಿಗಳು ಯಾರು ಎಂದು ಗುರುತಿಸುವುದು ಕೂಡ ಇಂದಿನ ದಿನಗಳಲ್ಲಿ ಸುಲಭವಿಲ್ಲ. ಆದರೂ, ಯಾವ ಅಭ್ಯರ್ಥಿ ‘ಅಭಿವೃದ್ಧಿಯ ಹೆಸರಿನಲ್ಲಿ’ ಮತ ಯಾಚಿಸುತ್ತಾನೆಯೋ ಅವನ ಆಯ್ಕೆಗೆ ಆದ್ಯತೆ ನೀಡಬೇಕಾಗಿದೆ. ತಾನು ನೀಡಿದ ಭರವಸೆಯನ್ನು ಈಡೇರಿಸುತ್ತಾನೋ ಇಲ್ಲವೋ ಎನ್ನುವುದು ಆನಂತರದ ಮಾತು. ಕನಿಷ್ಠ ಅಭಿವೃದ್ಧಿಯ ಹೆಸರಿನಲ್ಲಿ ಮತ ಯಾಚನೆಗೂ ಸಿದ್ಧನಿಲ್ಲದ ಅಭ್ಯರ್ಥಿಗಿಂತ ಈತ ವಾಸಿ. ದೇಶದ ಏಳಿಗೆಯಲ್ಲಿ ಎಳ್ಳಷ್ಟೂ ಪಾತ್ರವಹಿಸದ, ಜನರ ಬದುಕಿನಲ್ಲಿ ಯಾವ ಬದಲಾವಣೆಗಳನ್ನು ತರದ ಧರ್ಮ, ಜಾತಿ, ಮಂದಿರ, ಮಸೀದಿ ಮೊದಲಾದವುಗಳನ್ನು ಮತಯಾಚನೆಯ ಸಂದರ್ಭದಲ್ಲಿ ಮಾತನಾಡುವ ಅಭ್ಯರ್ಥಿ ಗೆಲ್ಲದಂತೆ ನೋಡಿಕೊಳ್ಳುವುದು ದೇಶದ ಭವಿ ಷ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ.

ಅಭಿವೃದ್ಧಿಯ ಬಗ್ಗೆ ಮಾತನಾಡಿದ ಅಭ್ಯರ್ಥಿಗಳು ಹೆಚ್ಚು ಮತಗಳನ್ನು ತನ್ನದಾಗಿಸಿಕೊಂಡಂತೆಯೇ ರಾಜಕೀಯ ಪಕ್ಷಗಳು ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಮತಗಳನ್ನು ಕೇಳುವುದು ನಿಲ್ಲಿಸಿ, ಅಭಿವೃದ್ಧಿಯ ವಿಷಯವನ್ನು ಚುನಾವಣಾ ವಿಷಯವಾಗಿಸುತ್ತದೆ. ಜಾತಿ, ಧರ್ಮಗಳನ್ನು ಕಚ್ಚಾಡಿಸುವ ಮೂಲಕವೇ ಚುನಾವಣೆಯನ್ನು ಸುಲಭವಾಗಿ ಗೆಲ್ಲಬಹುದು ಎನ್ನುವುದು ಮನವರಿಕೆಯಾದ ಪಕ್ಷಗಳು ಚುನಾವಣೆಯಲ್ಲಿ ಗೆದ್ದ ಬಳಿಕ ನಾಡಿನ ಅಭಿವೃದಿಗ್ಗೆೆ ಗಮನವನ್ನು ನೀಡಲಾರದು. ಆದುದರಿಂದ, ಅಭಿವೃದ್ಧಿ, ಸಾಕ್ಷರತೆ, ಆರೋಗ್ಯ, ಶಿಕ್ಷಣ ಇತ್ಯಾದಿಗಳ ಬಗ್ಗೆ ಅತಿ ಹೆಚ್ಚು ಮಾತನಾಡಿದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಚುನಾವಣೆಯ ಉದ್ದೇಶವನ್ನು ಅರ್ಥಪೂರ್ಣಗೊಳಿಸೋಣ. ಮೇ 10 ವಿಧಾನಸಭಾ ಚುನಾವಣೆಯಲ್ಲಿ ಪ್ರಜಾಸತ್ತೆ ಗೆಲ್ಲಲಿ, ಸರ್ವಾಧಿಕಾರ ಸೋಲಲಿ.

Similar News