ವಿಧಾನಸಭಾ ಚುನಾವಣೆ: ದ.ಕ.ಜಿಲ್ಲೆಯಲ್ಲಿ ಮತದಾನ ಆರಂಭ

Update: 2023-05-10 01:53 GMT

ಮಂಗಳೂರು: ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಇಂದು ಬೆಳಗ್ಗೆ  ಅರಂಭಗೊಂಡಿತು.

ಬೆಳಗ್ಗೆಯೇ ಕೆಲವು ಮತಗಟ್ಟೆಗಳ ಮುಂದೆ ಮತದಾರರು ಸಾಲುಗಟ್ಟಿರುವುದು ಕಂಡು ಬಂತು. ಮತದಾನವು ಸುಸೂತ್ರವಾಗಿ ನಡೆಯಲು ಜಿಲ್ಲೆಯಲ್ಲಿ ಪೊಲೀಸ್/ಅರೆಸೇನಾ ಪಡೆಯ ಅಧಿಕಾರಿ, ಸಿಬ್ಬಂದಿ ಸಹಿತ 4,500ಕ್ಕೂ ಮಂದಿಯನ್ನು ನಿಯೋಜಿಸಲಾಗಿದೆ.

ಜಿಲ್ಲೆಯಲ್ಲಿ 8,70,991 ಪುರುಷ ಮತ್ತು 9,10,314 ಮಹಿಳಾ ಹಾಗೂ 84 ತೃತೀಯ ಲಿಂಗಿಗಳ ಸಹಿತ 17,81,389 ಮಂದಿ ತಮ್ಮ ಹಕ್ಕು ಚಲಾಯಿಸಲು ಹೆಸರು ನೋಂದಾಯಿಸಿದ್ದಾರೆ. ಅದಕ್ಕಾಗಿ ಜಿಲ್ಲೆಯಲ್ಲಿ 1,860 ಮತಗಟ್ಟೆಗಳನ್ನು ತೆರೆಯಲಾಗಿದೆ. ಅದರಲ್ಲಿ ಗ್ರಾಮೀಣ ವ್ಯಾಪ್ತಿಯಲ್ಲಿ 1,184 ಮತ್ತು ನಗರ, ಪಟ್ಟಣ ಪ್ರದೇಶದಲ್ಲಿ 676 ಮತಗಟ್ಟೆ ಕೇಂದ್ರಗಳು ಸೇರಿವೆ.

ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯ 939 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. 164 ಮತಗಟ್ಟೆಗಳಲ್ಲಿ ಮೈಕ್ರೋ ವೀಕ್ಷಕರನ್ನು, ಉಳಿದ ಮತಗಟ್ಟೆಗಳಲ್ಲಿ ಸಿಪಿಎಂಎಫ್‌ಗಳನ್ನು ನಿಯೋಜಿಸಲಾಗಿದೆ. ಶಾಂತಿಯುತವಾಗಿ ಮತದಾನ ಜರುಗಿಸಲು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿವೆ. ಸಂಜೆ 6ರವರೆಗೆ ಮತದಾನಕ್ಕೆ ಅವಕಾಶವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.

Similar News