×
Ad

ಸಿಎಂ ಬೊಮ್ಮಾಯಿ,ಸಚಿವ ಸುಧಾಕರ್, ಹಣ ಪಡೆಯುತ್ತಿರುವ ಅಧಿಕಾರಿಯ ಫೋಟೊ ಸಹಿತ ಲೋಕಾಯುಕ್ತಕ್ಕೆ ದೂರು ದಾಖಲಿಸಿದ ಕಾಂಗ್ರೆಸ್

108 ಆರೋಗ್ಯ ಕವಚ ಸೇವೆ ಒದಗಿಸುವ ಟೆಂಡರ್‌ನಲ್ಲಿ ಭ್ರಷ್ಟಾಚಾರ ಆರೋಪ

Update: 2023-05-10 10:51 IST

ಬೆಂಗಳೂರು: ಶೈಕ್ಷಣಿಕ ಸೇವೆಗಳನ್ನು ಒದಗಿಸುವ ಹಿನ್ನೆಲೆ ಹೊಂದಿರುವ ಖಾಸಗಿ ಕಂಪೆನಿಯೊಂದಕ್ಕೆ 1,260 ಕೋಟಿ ರೂ. ಮೊತ್ತದ 108 ಆರೋಗ್ಯ ಕವಚ ಆ್ಯಂಬುಲೆನ್ಸ್ ಸೇವೆ ಪಡೆಯಲು ಟೆಂಡರ್ ನೀಡಲು ಸಿದ್ಧತೆ ನಡೆಸಿದೆ ಮತ್ತು ಸದಾಶಿವನಗರದಲ್ಲಿರುವ ಸಚಿವರೊಬ್ಬರ ನಿವಾಸದ ನೆಲಮಹಡಿಯ ಕೊಠಡಿಯಲ್ಲಿ ಲಂಚದ ಹಣವನ್ನು ಖಾಸಗಿ ಕಂಪೆನಿಯೊಂದರಿಂದ ಉಪ ನಿರ್ದೇಶಕರೊಬ್ಬರು ಸ್ವೀಕರಿಸಿದ್ದಾರೆ ಎಂಬ ಆರೋಪ ಕುರಿತು "the-file.in" ವರದಿ ಪ್ರಕಟಿಸುತ್ತಿದ್ದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ಹಾಗೂ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್‌ಬಾಬು ಅವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಶಾಖೆಯ ಉಪನಿರ್ದೇಶಕ ಡಾ. ಆರ್.ನಾರಾಯಣ್ ಎಂಬವರು ಈ ಹಗರಣದಲ್ಲಿ ಮಧ್ಯವರ್ತಿಗಳಾಗಿದ್ದಾರೆ. ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿರುವುದಿಲ್ಲ. ಚುನಾವಣಾ ಸಮಯದಲ್ಲಿ ತರಾತುರಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಟೆಂಡರ್ ಹಂಚಿಕೆ ಮಾಡಿರುವ ಕ್ರಮದ ಹಿಂದೆ ಭ್ರಷ್ಟಾಚಾರದ ವಾಸನೆ ಬಡಿದಿದೆ ಎಂದು ರಮೇಶ್ ಬಾಬು ಅವರು ದೂರಿದ್ದಾರೆ.

 ಡಾ.ಆರ್.ನಾರಾಯಣ್ ಎಂಬವರು ಮಧ್ಯವರ್ತಿಯಾಗಿ ಹಣ ಪಡೆದಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಈ ಸಂಬಂಧ ಡಾ.ನಾರಾಯಣ್ ಅವರು ಹಣ ಪಡೆದಿದ್ದಾರೆ ಎಂಬುವುದಕ್ಕೆ ಸಾಕ್ಷ್ಯವಾಗಿ ಕೆಲವು ಫೋಟೊಗಳನ್ನೂ ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರಿನೊಂದಿಗೇ ಸಲ್ಲಿಸಿದ್ದಾರೆ. ದೂರಿನ ಪ್ರತಿ ಮತ್ತು ಫೋಟೋಗಳು "the-file.in" ಗೆ ಲಭ್ಯವಾಗಿದೆ.

ಈ ದೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಕೆ ಸುಧಾಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಟಿ ಕೆ ಅನಿಲ್‌ಕುಮಾರ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ. ನವೀನ್ ಭಟ್, ಇಲಾಖೆಯ ಆಯುಕ್ತ ಡಿ.ರಂದೀಪ್ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ಉಪ ನಿರ್ದೇಶಕ (ಇಎಂಆರ್‌ಐರ)ನ ಡಾ.ನಾರಾಯಣ್ ಅವರನ್ನು ಪ್ರತಿವಾದಿಯನ್ನಾಗಿಸಿರುವುದು ದೂರಿನಿಂದ ಗೊತ್ತಾಗಿದೆ.

‘ಬಹಳ ಪ್ರಮುಖವಾಗಿ ಈ ಹಗರಣಕ್ಕೆ ಸಂಬಂಧಪಟ್ಟಂತೆ ಮಧ್ಯವರ್ತಿಯಾಗಿ ಸಚಿವರ ಪರವಾಗಿ ಅವರ ಮನೆಯಲ್ಲೇ ಹಣ ಪಡೆದಿರುವ ಅನುಮಾನಗಳಿರುತ್ತವೆ. ಕರ್ನಾಟಕ ರಾಜ್ಯ ಸರಕಾರದ ಪೊಲೀಸ್ ಇಲಾಖೆಯ ಬೆಂಗಳೂರಿನ ಕ್ರೈಂ ಬ್ರಾಂಚ್‌ನವರಿಗೂ ಈ ಹಗರಣ ಸಂಬಂಧ ಮಾಹಿತಿ ಇರುವುದಾಗಿ ತಿಳಿದುಬಂದಿರುತ್ತದೆ. ಆದರೆ ಇಲ್ಲಿಯವರೆಗೆ ಪ್ರಕರಣದ ಆರೋಪಿತರ ಮೇಲೆ ಯಾವುದೇ ಕ್ರಮ ಜರುಗಿರುವುದಿಲ್ಲ,’ ಎಂದು ರಮೇಶ್‌ಬಾಬು ಅವರು ದೂರಿನಲ್ಲಿ ಆಪಾದಿಸಿದ್ದಾರೆ.

‘ಹಾಗೆಯೇ ಈ ಟೆಂಡರ್ ಹಗರಣದಲ್ಲಿ ಕರ್ನಾಟಕ ರಾಜ್ಯ ಸರಕಾರದ ಮುಖ್ಯಮಂತ್ರಿ ಮತ್ತು ಸಚಿವರು ಭಾಗಿಯಾಗಿರುವ ಆರೋಪದ ಸಂಬಂಧ ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಾವಳಿಗಳನ್ನು ಮೀರಿ ಟೆಂಡರ್ ಹಂಚಿಕೆಯಾಗಿರುವ ಸಂಬಂಧ ಮಾನ್ಯ ಲೋಕಾಯುಕ್ತರು ಸಾರ್ವಜನಿಕ ಹಿತದೃಷ್ಟಿಯಿಂದ ತನಿಖೆಯನ್ನು ಮಾಡಬೇಕಾಗಿರುತ್ತದೆ’ ಎಂದೂ ದೂರಿನಲ್ಲಿ ಒತ್ತಾಯಿಸಿದ್ದಾರೆ.

Similar News