×
Ad

ಉಪ್ಪಿನಂಗಡಿ: ಶಾಂತಿಯುತವಾಗಿ ಪೂರ್ಣಗೊಂಡ ಮತದಾನ

Update: 2023-05-10 21:23 IST

ಉಪ್ಪಿನಂಗಡಿ: ಪುತ್ತೂರು ವಿಧಾನ ಸಭಾ ಕ್ಷೇತ್ರದ ಚುನಾವಣೆಯು ಉಪ್ಪಿನಂಗಡಿ, 34 ನೆಕ್ಕಿಲಾಡಿ, ಪೆರ್ನೆ, ಹಿರೇಬಂಡಾಡಿ ಹಾಗೂ ಬಜತ್ತೂರಿನಲ್ಲಿ ಯಾವುದೇ ಸಂಘರ್ಷಕ್ಕೆ ಎಡೆ ಮಾಡಿಕೊಡದೆ ಶಾಂತಿಯುತವಾಗಿ ನಡೆಯಿತು.

ಇಲ್ಲಿನ ಮತಗಟ್ಟೆಗಳ ಹೊರಗಡೆ ಪಕ್ಷದವರಿಂದ ತೆರೆಯಲಾಗುವ ಚುನಾವಣಾ ಬೂತ್‍ಗಳಲ್ಲಿ ಈ ಭಾಗದಲ್ಲಿ ಹೆಚ್ಚಿನ ಮತಗಟ್ಟೆಗಳಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಯಾದ ಅರುಣ್ ಕುಮಾರ್ ಪುತ್ತಿಲರವರ ಬೆಂಬಲಿಗರ ಚುನಾವಣಾ ಬೂತ್‍ಗಳು ಮಾತ್ರ ಕಂಡು ಬಂತು. ಇನ್ನು ಜೆಡಿಎಸ್, ಎಸ್‍ಡಿಪಿಐ, ಆಮ್ ಆದ್ಮಿ ಬೆಂಬಲಿಗರ ಚುನಾವಣಾ ಬೂತ್‍ಗಳು ಕೆಲವೆಡೆ ಮಾತ್ರ ತೆರೆಯಲಾಗಿತ್ತು. ಇನ್ನುಳಿದ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರ ಚುನಾವಣಾ ಬೂತ್‍ಗಳು ಎಲ್ಲೂ ಕಂಡು ಬರಲಿಲ್ಲ. ಪುತ್ತೂರು ವಿಧಾನ ಸಭಾ ಕ್ಷೇತ್ರದ ಈ ಐದು ಗ್ರಾಮಗಳ ಕೆಲವು ಮತಗಟ್ಟೆಗಳಲ್ಲಿ ಕಾಂಗ್ರೆಸ್ ಮತದಾರರು ಹೆಚ್ಚಿದ್ದರೆ, ಇನ್ನು ಕೆಲವು ಕಡೆ ಬಿಜೆಪಿ ಮತದಾರರು ಅಧಿಕವಿದ್ದಾರೆ. ಇನ್ನು ಕೆಲವು ಕಡೆ ಎರಡೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯ ಮತದಾರರು ಸಮಾನ ಸಂಖ್ಯೆಯಲ್ಲಿದ್ದಾರೆ. ಆದರೆ ಈ ಭಾಗದಲ್ಲಿ ಈ ಬಾರಿ ಹಲವು ಕಡೆ ಬಿಜೆಪಿ ಮತಗಳು ಇಬ್ಭಾಗವಾಗಿದ್ದು, ಪಕ್ಷೇತರ ಅಭ್ಯರ್ಥಿಯಾದ ಅರುಣ್ ಕುಮಾರ್ ಪುತ್ತಿಲರಿಗೆ ಜಾಸ್ತಿ ಹೋಗಿರುವ ಸಾಧ್ಯತೆ ಇಲ್ಲಿನ ವಿದ್ಯಮಾನ ಗಳನ್ನು ಗಮನಿಸುವಾಗ ಕಂಡು ಬರುತ್ತಿದೆ. ಆದರೆ ಕಾಂಗ್ರೆಸ್ ಮತಗಳನ್ನು ಕಸಿದುಕೊಳ್ಳುವಲ್ಲಿ ಎಸ್‍ಡಿಪಿಐ ಹಾಗೂ ಜೆಡಿಎಸ್ ಪಕ್ಷಗಳು ವಿಫಲವಾಗಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿತ್ತು.

ಪೆರ್ನೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಒಟ್ಟು 4,938 ಮತಗಳಿವೆ. ಇದಕ್ಕಾಗಿ ಐದು ಮತಗಟ್ಟೆಗಳನ್ನು ತೆರೆಯಲಾಗಿತ್ತು. 34 ನೆಕ್ಕಿಲಾಡಿ ಗ್ರಾಮದಲ್ಲಿ ಒಟ್ಟು 3,398 ಮತದಾರರಿದ್ದು, ಇಲ್ಲಿ 4 ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದೆ. ಉಪ್ಪಿನಂಗಡಿ ಗ್ರಾಮದಲ್ಲಿ 6864 ಮತದಾರರಿದ್ದು, ಇಲ್ಲಿ ಆರು ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಹಿರೇಬಂಡಾಡಿ ಗ್ರಾಮದಲ್ಲಿ 4,930 ಮತದಾರರಿದ್ದು, ಇಲ್ಲಿ ತೆರೆಯಲಾಗಿದ್ದ ನಾಲ್ಕು ಮತಗಟ್ಟೆ ಕೇಂದ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಬಜತ್ತೂರು ಗ್ರಾಮದಲ್ಲಿ ಒಟ್ಟು 4,728 ಮತದಾರರಿದ್ದು, ಇಲ್ಲಿ ಮತದಾನಕ್ಕೆಂದು ನಾಲ್ಕು ಮತಗಟ್ಟೆಗಳನ್ನು ತೆರೆಯಲಾಗಿತ್ತು.

ಸಮಸ್ಯೆಗಳು: ಹಿರೇಬಂಡಾಡಿ ಗ್ರಾಮದ ಮತಗಟ್ಟೆ ಸಂಖ್ಯೆ 48ರಲ್ಲಿ ಒಟ್ಟು 1351 ಮತದಾರರಿದ್ದು, ಇವರಿಗೆ ಗ್ರಾ.ಪಂ.ನ ಸಮುದಾಯ ಭವನದಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು.  ಇಲ್ಲಿ ನಿಧಾನಗತಿಯಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಇದರಿಂದ ಇಲ್ಲಿ ಮತದಾನಕ್ಕೆ ಸರತಿ ಸಾಲು ಕಂಡು ಬಂದಿತ್ತು. ಇದನ್ನು ಕಂಡ ಪಕ್ಷದ ಏಜೆಂಟ್ ಓರ್ವರು ಮತಯಂತ್ರದ ಬಗ್ಗೆ ಚುನಾವಣಾಧಿಕಾರಿಗಳಿಗೆ ಮೌಖಿಕವಾಗಿ ದೂರು ಸಲ್ಲಿಸಿದ ಘಟನೆಯೂ ನಡೆಯಿತು. ಬಳಿಕ ಮತದಾನ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ನಿಗದಿತ ಸಮಯದಲ್ಲಿ ಈ ಬಾರಿ ಇಲ್ಲಿ ಮತದಾನ ಮುಗಿಯಿತು.  ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿಯೂ ಇಲ್ಲಿ ನಿಧಾನಗತಿಯಲ್ಲಿ ಮತದಾನದ ಪ್ರಕ್ರಿಯೆ ನಡೆದಿದ್ದು, ರಾತ್ರಿ ಎಂಟು ಗಂಟೆಯವರೆಗೂ ಮತದಾನ ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದು. ಉಪ್ಪಿನಂಗಡಿ ಗ್ರಾಮದ ಮತಗಟ್ಟೆ ಸಂಖ್ಯೆ 36ನ್ನು ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡದಲ್ಲಿ ತೆರೆಯಲಾಗಿದ್ದು, ಇಲ್ಲಿ ಮಹಿಳಾ ಮತದಾರರೋರ್ವರು ಮತದಾನ ಮಾಡುವಾಗ ಬಟನ್ ಅನ್ನು ಒತ್ತಿ ಅದರಿಂದ ಕೈ ತೆಗೆಯದೇ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವಾಗ ಬರುವ ಶಬ್ದಕ್ಕೆ ಕಾದಿದ್ದರಿಂದ ಮತದಾನ ಯಂತ್ರದ ಬಟನ್ ಜಾಮ್ ಆಗಿ ಸುಮಾರು ಮುಕ್ಕಾಲು ಗಂಟೆ ಮತದಾನ ಪ್ರಕ್ರಿಯೆ ಸ್ಥಗಿತಗೊಳ್ಳುವಂತಾಯಿತು. ಮತದಾನ ಯಂತ್ರದ ದುರಸ್ತಿಯ ಬಳಿಕ ಮತ್ತೆ ಮತದಾನ ನಡೆಯಿತು. ಬಜತ್ತೂರು ಗ್ರಾಮದ ಮತಗಟ್ಟೆ ಸಂಖ್ಯೆ 45ರ ಮತದಾನ ಕೇಂದ್ರವನ್ನು ಹೊಸಗದ್ದೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿದ್ದು, ಇಲ್ಲಿ ಕೂಡಾ ಮತದಾನ ಯಂತ್ರದ ತಾಂತ್ರಿಕ ಸಮಸ್ಯೆಯಿಂದ ಸುಮಾರು ಮುಕ್ಕಾಲು ಗಂಟೆಯಷ್ಟು ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತು. ಬಳಿಕ ತಾಂತ್ರಿಕ ತಜ್ಞರು ಆಗಮಿಸಿ, ದುರಸ್ತಿಗೊಳಿಸಿದ ಬಳಿಕ ಮತದಾನ ಪ್ರಕ್ರಿಯೆ ಮುಂದುವರಿಯಿತು.

ಸೌಹಾರ್ದತೆ ಮೆರೆದರು: ಸಾಮಾಜಿಕ ಜಾಲತಾಣಗಳಲ್ಲಿ, ಭಾಷಣಗಳಲ್ಲಿ, ಪ್ರಚಾರದ ಸಂದರ್ಭ ರಾಜಕೀಯ ಪಕ್ಷಗಳ ಪರಸ್ಪರ ಆರೋಪ- ಪ್ರತ್ಯಾರೋಪಗಳ ರಾಜಕೀಯ ಕೆಸರಾಟಗಳು ನಡೆದರೆ, ಮತಗಟ್ಟೆ ಕೇಂದ್ರಗಳ ಬಳಿ ಮಾತ್ರ ಎಲ್ಲಾ ಕಾರ್ಯಕರ್ತರು ಸೌಹಾರ್ದತೆಯನ್ನು ಕಾಯ್ದುಕೊಂಡು ಶಾಂತಿಯುತ ಚುನಾವಣೆಗೆ ಅವಕಾಶ ಕೊಟ್ಟರು. ಮುಖ್ಯವಾಗಿ ಒಂದೇ ಗುಂಪಿನಿಂದ ಈ ಬಾರಿ ದೂರಾದವರು ಹಾಗೂ ಆ ಗುಂಪಿನಲ್ಲೇ ಇರುವವರು ಕೂಡಾ ಮತಗಟ್ಟೆಯ ಹೊರಗಡೆ ಅನ್ಯೋನ್ಯವಾಗಿಯೇ ಕಂಡು ಬಂದರು. ಮತಯಾಚನೆ ಸಂದರ್ಭದಲ್ಲಿಯೂ ಒಬ್ಬರಿಗೊಬ್ಬರು ತಮ್ಮ ತಮ್ಮವರನ್ನು ಹೊಗಳುತ್ತಾ ತಮಾಷೆಯಾಗಿಯೇ ವರ್ತಿಸುತ್ತಿರುವುದು ಕಂಡು ಬಂತು. ಹಿರೇಬಂಡಾಡಿ ಶಾಲೆಯಲ್ಲಿರುವ ಮತಗಟ್ಟೆಯ ಬಳಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಆಗಮಿಸಿದ್ದು, ಕಾರಿನಿಂದಿಳಿದು ರಸ್ತೆಯಲ್ಲಿ ನಡೆದುಕೊಂಡು ಬಂದ ಅವರನ್ನು ಈ ಸಂದರ್ಭ ಬಿಜೆಪಿಯ ಚುನಾವಣಾ ಬೂತ್‍ನಲ್ಲಿದ್ದವರು ಎದ್ದು ಬಂದು ಸ್ವಾಗತಿಸಿ, ಮಾತನಾಡಿಸಿದ ಘಟನೆಯೂ ಕಂಡು ಬಂತು.

ಮೊದಲ ಮತ ಚಲಾಯಿಸಿದ ಸಂಭ್ರಮ: 18 ವರ್ಷ ಪೂರ್ತಿಗೊಂಡ ಬಳಿಕ ಮತದಾನದ ಹಕ್ಕು ಪಡೆದ ಉಪ್ಪಿನಂಗಡಿಯ ಕಾರ್ತಿಕ್, ಹಿರೇಬಂಡಾಡಿಯ ಶ್ರಾವ್ಯ ಕನ್ಯಾನ, ಪೆರ್ನೆಯ ರಕ್ಷಾ, 34 ನೆಕ್ಕಿಲಾಡಿಯ ನಿಜಾಂ ಸೇರಿದಂತೆ  ಹಲವರು ತಮ್ಮ ಮೊದಲ ಮತವನ್ನು ಚಲಾಯಿಸಿ ಸಂಭ್ರಮಿಸಿದರು. ವಿಕಲಚೇತನರನ್ನು ವ್ಹೀಲ್ ಚೇರ್‍ಗಳ ಸಹಾಯದಿಂದ ಮತದಾನ ಕೇಂದ್ರಕ್ಕೆ ಕರೆತರಲಾಯಿತು.

Similar News