ಸುಡಾನ್ ನಿರಾಶ್ರಿತರಿಗೆ ಆಸರೆ ಒದಗಿಸಲು ವಿಶ್ವಸಂಸ್ಥೆ ಕರೆ
ವಿಶ್ವಸಂಸ್ಥೆ, ಮೇ 10: ಯುದ್ಧದಿಂದ ಜರ್ಜರಿತಗೊಂಡಿರುವ ಸುಡಾನ್ನಿಂದ ಓಡಿಹೋಗುತ್ತಿರುವ ನಿರಾಶ್ರಿತರನ್ನು ಇತರ ದೇಶಗಳು ಮರಳಿ ಕಳಿಸದೆ ಅವರಿಗೆ ಆಸರೆ ಕಲ್ಪಿಸುವ ಅಗತ್ಯವಿದೆ ಎಂದು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಏಜೆನ್ಸಿ(ಯುಎನ್ಎಚ್ಸಿಆರ್) ಕರೆ ನೀಡಿದೆ.
ಸಂಘರ್ಷದಿಂದ ಕಂಗೆಟ್ಟು ಓಡಿ ಬರುವ ಸುಡಾನ್ ನಿರಾಶ್ರಿತರನ್ನು ಮರಳಿ ಸ್ವದೇಶಕ್ಕೆ ಗಡೀಪಾರು ಮಾಡಬಾರದು. ಅವರಿಗೆ ಮಾನವೀಯ ನೆಲೆಯಲ್ಲಿ ಆಶ್ರಯ ಕಲ್ಪಿಸಬೇಕು ಎಂದು ಜಿನೆವಾದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಯುಎನ್ಎಚ್ಸಿಆರ್ ನಿರ್ದೇಶಕಿ ಎಲಿಝಬೆತ್ ಟ್ಯಾನ್ ಒತ್ತಾಯಿಸಿದ್ದಾರೆ.
ದೇಶದಿಂದ ಓಡಿಬಂದಿರುವ ಸುಡಾನ್ ಪ್ರಜೆಗಳು, ವಿದೇಶಿ ಪ್ರಜೆಗಳು, ಸುಡಾನ್ನಲ್ಲಿ ಆಶ್ರಯ ಕಂಡುಕೊಂಡಿರುವ ನಿರಾಶ್ರಿತರು, ದೇಶಭ್ರಷ್ಟ ಜನರು, ಪಾಸ್ಪೋರ್ಟ್ ಅಥವಾ ಇತರ ಯಾವುದೇ ಗುರುತು ಪತ್ರವಿಲ್ಲದ ಜನರಿಗೆ ಇದು ಅನ್ವಯಿಸುತ್ತದೆ ಎಂದವರು ಹೇಳಿದ್ದಾರೆ.
ಸುಡಾನ್ನಲ್ಲಿನ ಸಂಘರ್ಷದಿಂದ ಸುಮಾರು 1 ಲಕ್ಷದಷ್ಟು ಮಂದಿ ನೆರೆದೇಶಕ್ಕೆ ಓಡಿಹೋಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಅಲ್ಲದೆ, ಮೂರನೇ ಒಂದು ಭಾಗದಷ್ಟು ಜನರಿಗೆ ಮಾನವೀಯ ನೆರವಿನ ಅಗತ್ಯದಲ್ಲಿರುವ ಸುಡಾನ್ನಲ್ಲಿ ನೆರವು ವಿತರಣಾ ಕಾರ್ಯಕ್ಕೆ ಅಲ್ಲಿ ನಡೆಯುತ್ತಿರುವ ಸಂಘರ್ಷ ಅಡ್ಡಿಯಾಗುತ್ತಿದೆ. ಸುಡಾನ್ನ ನೆರೆಹೊರೆಯ ದೇಶಗಳಲ್ಲಿ ವಲಸಿಗರ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಸುಡಾನ್ನಿಂದ ಓಡಿಹೋಗುತ್ತಿರುವ ಜನರಿಗೆ ಅಂತರಾಷ್ಟ್ರೀಯ ರಕ್ಷಣೆ ಇನ್ನಷ್ಟು ಹೆಚ್ಚಬೇಕಾಗಿದೆ ಎಂದು ಎಲಿಝಬೆತ್ ಟ್ಯಾನ್ ಹೇಳಿದ್ದಾರೆ.