ಉಳ್ಳಾಲ: ರೂಪದರ್ಶಿಯ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಎದುರಿಸುತ್ತಿದ್ದ ಯುವಕ ಆತ್ಮಹತ್ಯೆ
ಉಳ್ಳಾಲ, ಮೇ 11: ಎರಡು ವರ್ಷಗಳ ಹಿಂದೆ ಕುಂಪಲದ ಆಶ್ರಯ ಕಾಲನಿಯ ಮನೆಯಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ರೂಪದರ್ಶಿಯೊಬ್ಬರ ಸಾವಿಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.
ಕುತ್ತಾರು, ಮುಂಡೋಳಿ ನಿವಾಸಿ ಯತಿರಾಜ್ ಗಟ್ಟಿ(20) ಆತ್ಮ ಹತ್ಯೆಗೈದ ಯುವಕ. ಯತಿರಾಜ್ ಅವರ ಮೃತದೇಹ ತನ್ನ ಮನೆ ಪಕ್ಕದಲ್ಲಿರುವ ಚಿಕ್ಕಮ್ಮ ಮನೆಯ ಸಿಟ್ ಔಟ್ ಹುಕ್ಸ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬುಧವಾರ ರಾತ್ರಿ 11ರ ವೇಳೆ ಮನೆಗೆ ಬಂದಿದ್ದ ಯತಿರಾಜ್ ಚಿಕ್ಕಮ್ಮ ಮನೆಯಲ್ಲಿರದ ವೇಳೆ ಅಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದೆ. ಇಂದು ಬೆಳಗ್ಗೆ ಯತಿರಾಜ್ ನ ಮಾವ ಹುಡುಕಾಡಿದಾಗ ಕೃತ್ಯ ಬೆಳಕಿಗೆ ಬಂದಿದೆ.
2021 ರ ಮಾರ್ಚ್ 10 ರಂದು ಕುಂಪಲದ ಆಶ್ರಯ ಕಾಲನಿ ನಿವಾಸಿ ರೂಪದರ್ಶಿ ಪ್ರೇಕ್ಷಾ ಎಂಬವರು ತನ್ನ ಮನೆಯ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸಂದರ್ಭ ಯುವತಿಯ ಪೋಷಕರ ದೂರಿನಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಡಿ ಉಳ್ಳಾಲ ಪೊಲೀಸರು ಯತಿರಾಜನನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಯತಿರಾಜ್ ನ್ಯಾಯಾಲಯದಲ್ಲಿ ಈಗಲೂ ಪ್ರಕರಣ ಎದುರಿಸುತ್ತಿದ್ದರೆನ್ನಲಾಗಿದೆ.
ಸ್ಥಳಕ್ಕೆ ಉಳ್ಳಾಲ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.