ಉಡುಪಿ ಮತ ಎಣಿಕಾ ಕೇಂದ್ರ- ಸ್ಟ್ರಾಂಗ್ ರೂಮಿಗೆ ಬಿಗಿ ಭದ್ರತೆ
ಉಡುಪಿ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮತಯಂತ್ರ ಗಳನ್ನು ಉಡುಪಿ ಬ್ರಹ್ಮಗಿರಿಯ ಸೈಂಟ್ ಸಿಸಿಲೀಸ್ ಶಾಲೆಯಲ್ಲಿರುವ ಮತ ಎಣಿಕೆ ಕೇಂದ್ರದ ಸ್ಟ್ರಾಂಗ್ ರೂಮ್‌ನಲ್ಲಿ ಭದ್ರವಾಗಿ ಇರಿಸಲಾಗಿವೆ. ಈ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರ ಹಾಗೂ ಸ್ಟ್ರಾಂಗ್ ರೂಮ್‌ಗೆ ಬಿಗಿ ಭದ್ರತೆ ಯನ್ನು ಒದಗಿಸಲಾಗಿದೆ.
ಮತದಾನದ ಬಳಿಕ ಮತಗಟ್ಟೆಗಳಿಂದ ತರಲಾದ ಮತಯಂತ್ರಗಳನ್ನು ಆಯಾ ವಿಧಾನಸಭಾ ಕ್ಷೇತ್ರಗಳ ಡಿಮಸ್ಟರಿಂಗ್ ಕೇಂದ್ರಗಳಲ್ಲಿ ಡಿಮಸ್ಟರಿಂಗ್ ಮಾಡ ಲಾಯಿತು. ಅಲ್ಲಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ಉಡುಪಿಯಲ್ಲಿರುವ ಮತ ಎಣಿಕೆ ಕೇಂದ್ರಗಳಿಗೆ ತರಲಾಯಿತು. ಕೆಲವು ಕ್ಷೇತ್ರಗಳ ಮತಯಂತ್ರಗಳು ರಾತ್ರಿಯೇ ತಂದರೆ, ಇನ್ನು ಕೆಲವು ಕ್ಷೇತ್ರಗಳ ಮತಯಂತ್ರಗಳನ್ನು ಭದ್ರತೆ ದೃಷ್ಠಿ ಯಿಂದ ಬೆಳಗ್ಗೆ ತರಲಾಯಿತು.
ಇಂದು ಬೆಳಗ್ಗೆ ಉಡುಪಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಚುನಾವಣಾ ವೀಕ್ಷಕರು, ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಎಂ.ಹಾಕೇ, ಜಿಪಂ ಸಿಇಓ ಪ್ರಸನ್ನ ಎಚ್., ಅಪರ ಜಿಲ್ಲಾಧಿಕಾರಿ ವೀಣಾ ಮತ್ತು ರಾಜಕೀಯ ಪ್ರತಿನಿಧಿಗಳ ಸಮ್ಮುಖದಲ್ಲಿ ಮತಯಂತ್ರಗಳನ್ನು ಸ್ಟ್ರಾಂಗ್ ರೂಮ್‌ನಲ್ಲಿ ಇರಿಸಿ ಭದ್ರ ಪಡಿಸ ಲಾಯಿತು. ಇದಕ್ಕೆ ಮೂರು ಹಂತದಲ್ಲಿ ಭದ್ರತೆಯನ್ನು ಒದಗಿಸಿ ಕಣ್ಗಾವಲು ಇರಿಸಲಾಗಿದೆ.
ಉಡುಪಿ ಡಿವೈಎಸ್ಪಿ ದಿನಕರ ನೇತೃತ್ವದಲ್ಲಿ ಮೊದಲ ಸುತ್ತಿನಲ್ಲಿ ಸಿಆರ್‌ಪಿಎಸ್, ಎರಡನೇ ಸುತ್ತಿನಲ್ಲಿ ಕೆಎಸ್‌ಆರ್‌ಪಿ, ಮೂರನೇ ಸುತ್ತಿನಲ್ಲಿ ಸಿವಿಲ್ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಅದೇ ರೀತಿ ಕೇಂದ್ರದ ಸುತ್ತಮುತ್ತ ಸಿಸಿಟಿವಿ ಗಳನ್ನು ಅಳವಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.
‘ಮತ ಎಣಿಕೆ ಕೇಂದ್ರದಲ್ಲಿರುವ ಸ್ಟ್ರಾಂಗ್ ರೂಮಿಗೆ ಮೂರು ಸುತ್ತಿನಲ್ಲಿ ಭದ್ರತೆಯನ್ನು ಒದಗಿಸಲಾಗಿದೆ. ರಾಜಕೀಯ ಪ್ರತಿನಿಧಿ, ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಮತಯಂತ್ರಗಳನ್ನು ಸ್ಟ್ರಾಂಗ್ ರೂಮಿನಲ್ಲಿ ಸೀಲ್ ಮಾಡಲಾಗಿದೆ. ಕೆಲವು ಕಡೆಗಳ ಮತಯಂತ್ರಗಳು ರಾತ್ರಿಯೇ ಬಂದರೆ, ಇನ್ನು ಕೆಲವು ಕಡೆಗಳ ಮತಯಂತ್ರಗಳು ಬೆಳಗ್ಗೆ ಬಂದಿದೆ’
-ಕೂರ್ಮಾರಾವ್ ಎಂ., ಜಿಲ್ಲಾಧಿಕಾರಿ, ಉಡುಪಿ