ಚುನಾವಣಾ ಅಕ್ರಮ ಆರೋಪ: ಸಮಗ್ರ ತನಿಖೆಗೆ ಮುತಾಲಿಕ್ ಆಗ್ರಹ
ಉಡುಪಿ, ಮೇ 11: ಚುನಾವಣೆ ಸಂದರ್ಭದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ವ್ಯಾಪಕ ಅಕ್ರಮ ಮತದಾನದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಮುಖ್ಯಸ್ಥ ಹಾಗೂ ಕಾರ್ಕಳ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಕಾರ್ಕಳ ವಿಧಾನಸಭಾ ಕ್ಷೇತ್ರದ ಮಿಯಾರು ಎಂಬಲ್ಲಿ ಬಾಲಕನೊಬ್ಬ ವಿದೇಶ ದಲ್ಲಿದ್ದ ವ್ಯಕ್ತಿಯ ಹೆಸರಿನಲ್ಲಿ ನಕಲಿ ಮತದಾನ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಆದರೂ ಆರ್.ಓ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಸಚಿವರ ಕುಮ್ಮಕ್ಕಿನಿಂದ ಇಂತಹ ಹಲವು ಅಕ್ರಮಗಳು ಕಾರ್ಕಳದಲ್ಲಿ ನಡೆದಿವೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಮೃತ ವ್ಯಕ್ತಿಯ ಹೆಸರಿನಲ್ಲೂ ಮತದಾನ ಮಾಡಿರುವುದು ತಿಳಿದುಬಂದಿದೆ. ಮತಯಂತ್ರದಲ್ಲಿ ಚಿಹ್ನೆಯನ್ನು ಮಬ್ಬಾಗಿ ಮುದ್ರಿಸಲಾಗಿದೆ. ಬಹಿರಂಗವಾಗಿ ಹಣ ಹೆಂಡ, ಮಾಂಸದ ಊಟ ಹಂಚಿಕೆ ಮಾಡಲಾಗಿದೆ. ಮತಗಟ್ಟೆ ಬಳಿಯೇ ಪೆಂಡಾಲು, ಟೇಬಲ್ ಹಾಕುವ ಮೂಲಕ ನಿಯಮ ಉಲ್ಲಂಘಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿ ಕಾರಿಯಾಗಿರುವ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸುಭಾಷ್ ಹೆಗ್ಡೆ, ಪ್ರವೀಣ್ ಕಂತಾರಗೋಳಿ, ವಿವೇಕಾನಂದ ಶೆಣೈ, ದಿವ್ಯಾ ನಾಯಕ್, ಚಿತ್ತರಂಜನ್ ಶೆಟ್ಟಿ, ಗಂಗಾಧರ್ ಕುಲಕರ್ಣಿ, ಶ್ರೀನಿವಾಸ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.