ಮಂಗಳೂರು | ಮತ ಎಣಿಕೆಯ ಕೇಂದ್ರದ ‘ಕೀ’ ಕಾಣೆ: ಬಾಗಿಲು ತೆರೆಯಲು ಬೀಗ ಒಡೆದರು !
ಕೀ ಮಿಸ್ ಆಗಿಲ್ಲ, ತಕ್ಷಣಕ್ಕೆ ಬಾಗಿಲು ತೆರೆಯದೆ ಸಮಸ್ಯೆ: ಜಿಲ್ಲಾಧಿಕಾರಿ ಸ್ಪಷ್ಟನೆ
Update: 2023-05-13 09:03 IST
ಮಂಗಳೂರು, ಮೇ 13: ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಮತ ಯಂತ್ರಗಳನ್ನು ಭದ್ರವಾಗಿಸಿರುವ ಸುರತ್ಕಲ್ ಎನ್‌ಐಟಿಕೆ ಮತ ಎಣಿಕೆ ಕೇಂದ್ರದ ಸ್ಟ್ರಾಂಗ್‌ರೂಮ್‌ನ ‘ಕೀ’ ಕಾಣೆಯಾಗಿರುವುದಾಗಿ ವರದಿಯಾಗಿದೆ.
ಅಧಿಕಾರಿಗಳ ಬೇಜಾವಬ್ದಾರಿಯಿಂದಾದ ಈ ಪ್ರಮಾದಕ್ಕೆ ಸಿಬ್ಬಂದಿ ಸ್ಟ್ರಾಂಗ್ ರೂಮ್‌ನ ಬಾಗಿಲು ತೆರೆಯಲು ಪರದಾಡಿದರು. ಬಳಿಕ ಕೀ ಜನ ಕರೆಯಿಸಿ ಬೀಗ ಒಡೆದು ಸ್ಟ್ರಾಂಗ್ ರೂಮ್‌ನ ಬಾಗಿಲು ತೆರೆಯಲಾಯಿತು ಎಂದು ಹೇಳಲಾಗಿದೆ.
ಜಿಲ್ಲಾಧಿಕಾರಿ ನಿರಾಕರಣೆ: ಆದರೆ ಕೀ ಮಿಸ್ ಆಗಿರುವ ವಿಚಾರವನ್ನು ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ನಿರಾಕರಿಸಿದ್ದಾರೆ. ನಾನೇ ಸ್ಟ್ರಾಂಗ್ ರೂಮ್‌ನ ಬಾಗಿಲು ತೆರೆಯಲು ಪ್ರಯತ್ನಿಸಿದೆ. ತಕ್ಷಣಕ್ಕೆ ತೆರೆಯಲಾಗಲಿಲ್ಲ. ಬಳಿಕ ತೆರೆಯಿತು. ಸಮಯಕ್ಕೆ ಸರಿಯಾಗಿ ಮತ ಎಣಿಕೆ ಆರಂಭಿಸಲಾಗಿದೆ. ಈಗಾಗಲೇ ಅಂಚೆ ಮತ ಎಣಿಕೆ ಕಾರ್ಯವೂ ಮುಗಿದಿದೆ ಎಂದು ತಿಳಿಸಿದ್ದಾರೆ.