ಸುರತ್ಕಲ್: ಕರಾವಳಿ ಸ್ಪೋಟ್ಸ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ

Update: 2023-05-13 15:42 GMT

ಸುರತ್ಕಲ್: ಆಕಸ್ಮಿಕ ಬೆಂಕಿ ತಗುಲಿ ಕ್ರೀಡಾ ಸಲಕರಣೆ ಮಾರಾಟ ಮಳಿಗೆಯೊಂದು ಅಗ್ನಿಗಾಹುತಿಯಾಗಿರುವ ಘಟನೆ ಸುರತ್ಕಲ್ ನಲ್ಲಿ ಶನಿವಾರ ಸಂಜೆ ವರದಿಯಾಗಿದೆ.

ಸುರತ್ಕಲ್ ಸಹಕಾರಿ ಸಂಘದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಕರಾವಳಿ ಸ್ಪೋರ್ಟ್ಸ್ ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮಳಿಗೆಯ ಒಳಭಾಗದಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಕ್ರೀಡಾ ಸಲಕರಣೆಗಳು, ಟಿ ಶರ್ಟ್ ಗಳು ಸೇರಿದಂತೆ ಮಳಿಗೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ ಎಂದು ತಿಳಿದು ಬಂದಿದೆ. 

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿ ಶಾಮಕ ವಾಗನಗಳು ನೀರು ಹಾಯಿಸಿದಷ್ಟು ದಟ್ಟವಾಗಿ ಬೆಂಕಿ ಆವರಿಸಿ ಇಡೀ ಮಳಿಗೆಯನ್ನು ಆಹುತಿ ಪಡೆದುಕೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

3 ಅಗ್ನಿಶಾಮಕ ದಳ ವಾಹನಗಳು ಮತ್ತು 1 ಎಂ ಆರ್ ಪಿ ಎಲ್ ನ ಅಗ್ನಿಶಾಮಕ ವಾಹನ ಸೇರಿ ಒಟ್ಟು 4 ಬೆಂಕಿ ನಂದಿಸುವ ವಾಹನಗಳು ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.

ತಡವಾಗಿ ಬಂದ ಅಗ್ನಿಶಾಮಕ ವಾಹನ:

ಬೆಂಕಿ ಹೊತ್ತಿಕೊಂಡ ವೇಳೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಫೋನ್ ಹಾಯಿಸಿ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದ ಕಾರಣ ಅಗ್ನಿಶಾಮಕ ವಾಹನಗಳು ತಲುಪಲು ತಡವಾಗಿದೆ. ಇದರಿಂದಾಗಿ ಮಳಿಗೆಯ ಹೆಚ್ಚಿನ ಭಾಗ ಬೆಂಕಿಗೆ ಆಹುತಿಯಾಗಲು ಮುಖ್ಯ ಕಾರಣ ಎಂದು ಪ್ರತ್ಯಕ್ಷ ದರ್ಶಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ‌.

ಶಾಸಕ ಭರತ್ ಶೆಟ್ಟಿ ಭೇಟಿ

ಇಂದು ವಿಧಾನಸಭಾ ಚುನಾವಣೆಯ ಮತ ಎಣಿಕೆ ಇದ್ದ ಕಾರಣ ಸುರತ್ಕಲ್ ಎನ್ಐಟಿಕೆ ಯಲ್ಲಿದ್ದ ಶಾಸಕ ಭರತ್ ಶೆಟ್ಟಿ ಅವರು ಮಾಹಿತಿ ತಿಳಿದೊಡನೆ ಸ್ಥಳಕ್ಕೆ ಬಂದು ವೀಕ್ಷಿಸಿದರು.

Similar News