ಜೀವನವೇ ಒಂದು ರಂಗಮಂಚ: ಡಾ.ಮಾಧವಿ ಭಂಡಾರಿ
ಉಡುಪಿ, ಮೇ 14: ಜೀವನವೇ ಒಂದು ರಂಗಮಂಚ. ನಾವೆಲ್ಲ ನಮ್ಮದೇ ಪಾತ್ರವನ್ನು ಅಲ್ಲಿ ಸರಿಯಾಗಿ ನಿರ್ವಹಿಸ ಬೇಕಾಗುತ್ತದೆ. ಇಲ್ಲಿ ಪಡೆದ ತರಬೇತಿ ಬದುಕಿನ ಯಶಸ್ವಿಗೆ ಪೂರಕವಾಗುತ್ತದೆ ಎಂದು ಹಿರಿಯ ರಂಗ ಕರ್ಮಿ, ನಿವೃತ್ತ ಪ್ರಾಂಶುಪಾಲೆ ಡಾ.ಮಾಧವಿ ಭಂಡಾರಿ ಹೇಳಿದ್ದಾರೆ.
ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಚಿಗುರು ಚಿತ್ತಾರ 15 ದಿನಗಳ ಮಕ್ಕಳ ರಂಗಶಿಬಿರವನ್ನು ಶಿಬಿರಾರ್ಥಿಗೆ ಮೇಕಪ್ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ನಾಟಕದಲ್ಲಿ ಅಭಿನಯಿಸುವಾಗ ಎದುರು ಪಾತ್ರಧಾರಿಯ ಮಾತು ಮುಗಿಯುವವರೆಗೆ ನಾವು ಕಾಯುತ್ತೇವೆ. ಹಾಗೆಯೇ ಬದುಕಿನಲ್ಲಿಯೂ ನಮ್ಮ ಮುಂದೆ ಮಾತನಾಡುವವರ ಮಾತುಗಳನ್ನು ಪೂರ್ಣ ಕೇಳಿಸಿಕೊಂಡು ಪ್ರತಿಕ್ರಿ ಯಿಸಬೇಕು. ಬೇರೆಯವರ ಸಲಹೆಗೆ ಆಯಿತು ಎಂದು ಹೇಳಲು ಸಮಯ ತೆಗದುಕೊಳ್ಳುತ್ತೇವೆ. ಇಲ್ಲ ಎನ್ನಲು ಗಡಿಬಿಡಿ ಮಾಡುತ್ತೇವೆ. ಸಕಾರಾತ್ಮಕ, ನಕಾರಾತ್ಮಕ ಅಂಶಗಳನ್ನೆಲ್ಲ ಅರಗಿಸಿಕೊಂಡು, ಅರ್ಥೈಸಿಕೊಂಡು ಪ್ರತಿಕ್ರಿಯಿಸುವು ದನ್ನು ಇಂಥ ಶಿಬಿರಗಳು ಕಲಿಸುತ್ತವೆ ಎಂದರು.
ಎಲ್ಲರೂ ಹೀರೋ ಅಥವಾ ಹೀರೋಯಿನ್ ಆಗಲು ಸಾಧ್ಯವಿಲ್ಲ. ಒಬ್ಬ ಹೀರೋ, ಒಬ್ಬ ಹೀರೋಯಿನ್ ಇದ್ದರೆ ಮತ್ತೆಲ್ಲವೂ ಪೋಷಕ ಪಾತ್ರಗಳಾಗಿರು ತ್ತವೆ. ನಮಗೆ ಸಿಕ್ಕಿರುವ ಪಾತ್ರಗಳಲನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ಇದು ಮೊಬೈಲ್ ಯುಗ. ಹೆತ್ತವರು ಮಕ್ಕಳು ಎಲ್ಲರೂ ಮೊಬೈಲಲ್ಲಿ ಮುಳುಗಿ ಹೋಗಿದ್ದಾರೆ. ಇಂಥ ಕಾಲದಲ್ಲಿ ಮೊಬೈಲನ್ನು ಬದಿಗಿಟ್ಟು ನೀವು ಇಂಥ ರಂಗ ಶಿಬಿರಕ್ಕೆ ಬಂದಿರುವುದು, ಹೆತ್ತವರು ನಿಮ್ಮನ್ನು ಕಳುಹಿಸಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನಿರಂತರ ಕಲಿಕೆಯು ಸಾಧನೆ ಮಾಡಲು ಸಾಧ್ಯ. ಯಾವುದೇ ಕ್ಷೇತ್ರವಾದರೂ ನಿರಂತರ ಕಲಿಕೆ ಇರಬೇಕು. ಓದು ಕೂಡ ಒಮ್ಮೆಗೆ ಆಗುವುದಿಲ್ಲ. ನಿರಂತರ ಓದಿಯೇ ಮುಂದಕ್ಕೆ ಹೋಗಿರುತ್ತೇವೆ. ಇದು ನಮ್ಮ ಸಾಧನೆಗೂ ಅನ್ವಯ ಎಂದರು.
ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಗೌರವಾಧ್ಯಕ್ಷ ಎಂ.ಎಸ್. ಭಟ್, ಸಂಚಾಲಕ ಭಾಸ್ಕರ್ ಪಾಲನ್, ಬಾಚನಬೈಲು, ಶಿಬಿರದ ನಿರ್ದೇಶಕ ವಿದ್ದು ಉಚ್ಚಿಲ್ ಉಪಸ್ಥಿತರಿದ್ದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಾಂತ್ ಕುಂದರ್ ವಂದಿಸಿದರು. 75 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದರು.