ರಾಜಕೀಯದಲ್ಲಿ ಸೇನೆಯ ಹಸ್ತಕ್ಷೇಪ: ಇಮ್ರಾನ್ ಖಾನ್
ಇಸ್ಲಮಾಬಾದ್, ಮೇ 14: ಪಾಕಿಸ್ತಾನದ ಸೇನೆಯನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್, ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ನಿಮಗೆ ನಾಚಿಕೆಯಾಗಬೇಕು. ಪರೋಕ್ಷವಾಗಿ ಹಸ್ತಕ್ಷೇಪ ಮಾಡುವ ಬದಲು ಸೇನೆ ತನ್ನದೇ ಆದ ರಾಜಕೀಯ ಪಕ್ಷ ಸ್ಥಾಪಿಸಲಿ ಎಂದು ಹೇಳಿದ್ದಾರೆ.
ಜಾಮೀನಿನ ಮೇಲೆ ಬಿಡುಗಡೆಗೊಂಡು ಲಾಹೋರ್ನ ನಿವಾಸಕ್ಕೆ ಮರಳಿದ ಬಳಿಕ ಬೆಂಬಲಿಗರುನ್ನುದ್ದೇಶಿಸಿ ಮಾತನಾಡಿದ ಅವರು , ತನ್ನನ್ನು ಸೇನಾ ವಿರೋಧಿ ಎಂದು ಕರೆದ ಸೇನಾಪಡೆಯ ಘಟಕ ‘ಇಂಟರ್ ಸರ್ವಿಸ್ ಪಬ್ಲಿಕ್ ರಿಲೇಷನ್ಸ್ (ISPR) ರಚನೆಗೊಳ್ಳುವ ಮೊದಲೇ ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ತಾನು ಪ್ರತಿನಿಧಿಸಿದ್ದೆ ಎಂದಿದ್ದಾರೆ.
ನಾನು ವಿಶ್ವದಾದ್ಯಂತ ಪಾಕಿಸ್ತಾನದ ಧ್ವಜವನ್ನು ಎತ್ತರಕ್ಕೆ ಕೊಂಡೊಯ್ದಿದ್ದೇನೆ. ಆಗ ಐಎಸ್ಪಿಆರ್ ಇಂತಹ ಹೇಳಿಕೆ ನೀಡಿಲ್ಲ. ಇಂತಹ ಹೇಳಿಕೆ ನೀಡಲು ನಿಮಗೆ ನಾಚಿಕೆಯಾಗಬೇಕು. ನೀವೇಕೆ ರಾಜಕೀಯ ಪಕ್ಷ ಸ್ಥಾಪಿಸಬಾರದು’ ಎಂದು ಖಾನ್ ಪ್ರಶ್ನಿಸಿದ್ದಾರೆ.
ದೇಶದಾದ್ಯಂತ ರವಿವಾರ ‘ಸ್ವಾತಂತ್ರ್ಯ ಪ್ರತಿಭಟನೆ’ ನಡೆಸುವಂತೆ ಇದಕ್ಕೂ ಮುನ್ನ ಬೆಂಬಲಿಗರನ್ನುದ್ದೇಶಿಸಿ ಇಮ್ರಾನ್ ಖಾನ್ ಕರೆ ನೀಡಿದ್ದರು.