ಉಕ್ರೇನ್ ಗಡಿಭಾಗದಲ್ಲಿ ರಶ್ಯದ 4 ಯುದ್ಧವಿಮಾನ ಪತನ
Update: 2023-05-14 23:10 IST
ಮಾಸ್ಕೋ, ಮೇ 14: ಉಕ್ರೇನ್ನ ಗಡಿಭಾಗದ ಬಳಿ ರಶ್ಯದ 4 ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿದ್ದು ಮತ್ತೊಂದು ಯುದ್ಧವಿಮಾನ ಪತನಗೊಂಡಿದೆ ಎಂದು ರಶ್ಯದ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಉಕ್ರೇನ್ ಮೇಲೆ ಆಕ್ರಮಣ ಎಸಗಲು ರವಾನಿಸಲಾಗಿದ್ದ 2 ಜೆಟ್ವಿಮಾನ, 2 ಮಿಲಿಟರಿ ಹೆಲಿಕಾಪ್ಟರ್ಗಳನ್ನು ಬ್ರಯಾಂಸ್ಕ್ ವಲಯದಲ್ಲಿ ಹೊಡೆದುರುಳಿಸಲಾಗಿದೆ. ಎಸ್ಯು-34 ಬಾಂಬರ್ ಯುದ್ಧವಿಮಾನ, ಎಸ್ಯು-35 ಯುದ್ಧವಿಮಾನ ಹಾಗೂ 2 ಎಂಐ-8 ಹೆಲಿಕಾಪ್ಟರ್ಗಳು ಉಕ್ರೇನ್ನ ಚೆರ್ನಿಹಿವ್ ವಲಯದಲ್ಲಿನ ಗುರಿಗಳ ಮೇಲೆ ಕ್ಷಿಪಣಿ ಮತ್ತು ಬಾಂಬ್ ದಾಳಿ ನಡೆಸಲು ಸಿದ್ಧವಾಗಿದ್ದವು ಮತ್ತು ಇವುಗಳ ಬೆಂಗಾವಲಿಗೆ ಇದ್ದ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂದು ರಶ್ಯದ ತಾಸ್ ಸುದ್ಧಿಸಂಸ್ಥೆ ವರದಿ ಮಾಡಿದೆ.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಯ ಹಿರಿಯ ಸಲಹೆಗಾರ ಮಿಖಾಯಿಲೊ ಪೊಡೊಲ್ಯಾಕ್ ‘ಇದು ನ್ಯಾಯ ಮತ್ತು ಕರ್ಮದ ಫಲ’ ಎಂದು ಟ್ವೀಟ್ ಮಾಡಿದ್ದಾರೆ.