×
Ad

ಎಂಡೋಸಲ್ಫಾನ್ ಸಂತ್ರಸ್ತರಿಗೆ ವೈದ್ಯಕೀಯ ನೆರವು: ನಿಗಾ ಇಡುವ ಜವಾಬ್ದಾರಿಯನ್ನು ಕೇರಳ ಹೈಕೋರ್ಟ್ ಗೆ ವಹಿಸಿದ ಸುಪ್ರೀಂ

Update: 2023-05-16 23:20 IST

ಹೊಸದಿಲ್ಲಿ, ಮೇ 16: ಎಂಡೋಸಲ್ಫಾನ್ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡಲು ಕೇರಳ ಸರಕಾರ ತೆಗೆದುಕೊಂಡಿರುವ ಕ್ರಮಗಳ ಮೇಲೆ ನಿಗಾ ಇಡುವ ಜವಾಬ್ದಾರಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕೇರಳ ಹೈಕೋರ್ಟ್ ಗೆ ವರ್ಗಾಯಿಸಿದೆ.

ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಹಾರ ವಿತರಣೆಗೆ ಸಂಬಂಧಿಸಿದ ಆದೇಶವನ್ನು ರಾಜ್ಯ ಸರಕಾರವು ಅನುಷ್ಠಾನಗೊಳಿಸಿದೆ ಎಂದು ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವೊಂದು ಅಭಿಪ್ರಾಯಪಟ್ಟಿತು. 3,700ಕ್ಕೂ ಅಧಿಕ ಸಂತ್ರಸ್ತರ ಪೈಕಿ ಬಹುತೇಕ ಎಲ್ಲರಿಗೂ 5 ಲಕ್ಷ ರೂಪಾಯಿ ಪರಿಹಾರ ತಲುಪಿದೆ ಎಂದು ಕೇರಳ ಸರಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಜೈದೀಪ್ ಗುಪ್ತ ಮತ್ತು ವಕೀಲ ನಿಶೆ ರಾಜೆನ್ ಶೋಂಕೆರ್ ಸುಪ್ರೀಂ ಕೋರ್ಟ್ ಗೆ ತಿಳಿಸಿದರು.

ಸುಪ್ರಿಂ ಕೋರ್ಟ್ ಪ್ರಕರಣದ ಮೇಲೆ ನಿಗಾ ಇಟ್ಟಿದೆ ಹಾಗೂ ಕಾಲದಿಂದ ಕಾಲಕ್ಕೆ ಆದೇಶಗಳನ್ನು ನೀಡುತ್ತಾ ಬಂದಿದೆ ಎಂದು ನ್ಯಾಯಪೀಠ ಹೇಳಿತು. ‘‘ಹಣಕಾಸು ಪರಿಹಾರ ವಿತರಣೆ ಕಾರ್ಯ ಮುಗಿದಿರುವುದರಿಂದ, ಈಗ ಉಳಿದಿರುವ ಒಂದೇ ಕೆಲಸವೆಂದರೆ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡುವುದು. ಇದರ ಮೇಲೆ ನಿಗಾ ಇಡುವ ಕಾರ್ಯವನ್ನು ಸುಪ್ರೀಂ ಕೋರ್ಟ್ಗಿಂತ ಹೈಕೋರ್ಟ್ ಚೆನ್ನಾಗಿ ಮಾಡಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತು.

ಇದರೊಂದಿಗೆ, ಪ್ರಕರಣವನ್ನು ಸುಪ್ರೀಂ ಕೋರ್ಟ್ ಹೈಕೋರ್ಟ್ ಗೆ ವರ್ಗಾಯಿಸಿತು. ಈ ಪ್ರಕರಣದ ವಿಚಾರಣೆಯನ್ನು ನಿಮ್ಮ ಪೀಠಕ್ಕೆ ಅಥವಾ ಇತರ ಯಾವುದೇ ಪೀಠಕ್ಕೆ ಒಪ್ಪಿಸುವಂತೆ ಸುಪ್ರೀಂ ಕೋರ್ಟ್ ಕೇರಳ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡಿತು.

ಎಂಡೋಸಲ್ಫಾನ್ ಕೀಟನಾಶಕ ಸೇವನೆ ಸಂತ್ರಸ್ತರಿಗಾಗಿ ‘‘ಏನೂ ಮಾಡದಿರುವುದಕ್ಕಾಗಿ’’ ಕಳೆದ ವರ್ಷದ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಕೇರಳ ಸರಕಾರವನ್ನು ಟೀಕಿಸಿತ್ತು. ರಾಜ್ಯ ಸರಕಾರದ ನಿಷ್ಕ್ರಿಯತೆ ಆಘಾತಕಾರಿಯಾಗಿದೆ ಎಂದು ಹೇಳಿರುವ ನ್ಯಾಯಾಲಯ, ಸುಪ್ರೀಂ ಕೋರ್ಟ್ ನ 2017ರ ತೀರ್ಪಿನ ಉಲ್ಲಂಘನೆಗೆ ಸಮವಾಗುತ್ತದೆ ಎಂದಿತ್ತು.
ಎಂಡೋಸಲ್ಫಾನ್ ಸಂತ್ರಸ್ತರಿಗೆ ಮೂರು ತಿಂಗಳಲ್ಲಿ ತಲಾ 5 ಲಕ್ಷ ರೂ. ಪರಿಹಾರ ನೀಡುವಂತೆ ತನ್ನ 2017ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು.

Similar News