ಐಪಿಎಲ್: ಮಾರ್ಕಸ್ ಸ್ಟೋನಿಸ್ ಅರ್ಧಶತಕ, ಲಕ್ನೊಗೆ ಮುಂಬೈ ವಿರುದ್ಧ ರೋಚಕ ಜಯ

Update: 2023-05-16 18:21 GMT

ಲಕ್ನೊ, ಮೇ 16: ಮಾರ್ಕಸ್ ಸ್ಟೋನಿಸ್ (ಔಟಾಗದೆ 89 ರನ್, 47 ಎಸೆತ, 4 ಬೌಂಡರಿ, 8 ಸಿಕ್ಸರ್)ಭರ್ಜರಿ ಅರ್ಧಶತಕ ಹಾಗೂ ರವಿ ಬಿಷ್ಣೋಯಿ(2-26) ನೇತೃತ್ವದ ಉತ್ತಮ ಬೌಲಿಂಗ್ ನೆರವಿನಿಂದ ಐಪಿಎಲ್‌ನ 63ನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 5 ರನ್ ಅಂತರದಿಂದ ರೋಚಕವಾಗಿ ಮಣಿಸಿದೆ. 

ಮಂಗಳವಾರ ಗೆಲ್ಲಲು 178 ರನ್ ಗುರಿ ಪಡೆದ ಮುಂಬೈ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಸೋಲೊಪ್ಪಿಕೊಂಡಿತು.

  ಮುಂಬೈ ಪರ ಆರಂಭಿಕ ಬ್ಯಾಟರ್ ಇಶಾನ್ ಕಿಶನ್(59 ರನ್, 39 ಎಸೆತ, 8 ಬೌಂಡರಿ, 1 ಸಿಕ್ಸರ್) ಸರ್ವಾಧಿಕ ಸ್ಕೋರ್ ಗಳಿಸಿದರು. ಇಶಾನ್,  ನಾಯಕ ರೋಹಿತ್ ಶರ್ಮಾ (37 ರನ್, 25 ಎಸೆತ, 1 ಬೌಂಡರಿ, 3 ಸಿಕ್ಸರ್)ಮೊದಲ ವಿಕೆಟ್‌ಗೆ 90 ರನ್ ಜೊತೆಯಾಟ ನಡೆಸಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು. ಈ ಇಬ್ಬರು ಔಟಾದ ನಂತರ ಯಾವೊಬ್ಬ ಆಟಗಾರ ಕ್ರೀಸ್‌ಗೆ ಅಂಟಿಕೊಂಡು ಆಡಲಿಲ್ಲ. ಟಿಮ್ ಡೇವಿಡ್(ಔಟಾಗದೆ 32, 19 ಎಸೆತ) ಸೋಲಿನ ಅಂತರ ತಗ್ಗಿಸಿದರು.

ಲಕ್ನೊ ಪರ ರವಿ ಬಿಷ್ಣೋಯ್(2-26) ಹಾಗೂ ಯಶ್ ಠಾಕೂರ್(2-40)ತಲಾ 2 ವಿಕೆಟ್ ಪಡೆದರು. ಕೊನೆಯ ಓವರ್‌ನಲ್ಲಿ ಬಿಗಿ ಬೌಲಿಂಗ್ ಮಾಡಿದ ಮೊಹ್ಸಿನ್ ಖಾನ್ (1-26) ಒಂದು ವಿಕೆಟ್ ಪಡೆದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಸೂರ್ಯಕುಮಾರ್ ಯಾದವ್ 7 ರನ್ ಗಳಿಸಿ ಔಟಾದರು. ನೆಹಾಲ್(16 ರನ್) ಹಾಗೂ ಟಿಮ್ ಡೇವಿಡ್(ಔಟಾಗದೆ 32 )ಎರಡಂಕೆಯ ಸ್ಕೋರ್ ಗಳಿಸಿದರು.

  ಈ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಲಕ್ನೊ ಸೂಪರ್ ಜೈಂಟ್ಸ್ ತಂಡ ಮಾರ್ಕಸ್ ಸ್ಟೋನಿಸ್ (ಔಟಾಗದೆ 89 ರನ್, 47 ಎಸೆತ, 4 ಬೌಂಡರಿ, 8 ಸಿಕ್ಸರ್)ಭರ್ಜರಿ ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 177 ರನ್ ಗಳಿಸಿದೆ.  
 
ದೀಪಕ್ ಹೂಡಾ(5 ರನ್), ಪ್ರೇರಕ್ ಮಂಕಡ್(0) ಹಾಗೂ ಕ್ವಿಂಟನ್ ಡಿಕಾಕ್(16 ರನ್)ಬೇಗನೆ ಔಟಾದಾಗ ಲಕ್ನೊ 3 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿತ್ತು. ಆಗ ತಂಡವನ್ನು ಆಧರಿಸಿದ ಸ್ಟೋನಿಸ್ ಹಾಗೂ ಕೃನಾಲ್ ಪಾಂಡ್ಯ 4ನೇ ಟಿಕೆಟ್‌ಗೆ 82 ರನ್ ಜೊತೆಯಾಟ ನಡೆಸಿದರು. ಪಾಂಡ್ಯ(49 ರನ್, 42 ಎಸೆತ, 1 ಬೌಂಡರಿ, 1 ಸಿಕ್ಸರ್) ಗಾಯಗೊಂಡು ನಿವೃತ್ತಿಯಾದ ಬಳಿಕ ನಿಕೊಲಸ್ ಪೂರನ್ ಜೊತೆಗೆ ಕೈಜೋಡಿಸಿದ ಸ್ಟೋನಿಸ್ 5ನೇ ವಿಕೆಟ್‌ಗೆ 60 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 177ಕ್ಕೆ ತಲುಪಿಸಿದ್ದಾರೆ.

ಜೇಸನ್ ಬೆಹ್ರೆನ್‌ಡಾರ್ಫ್(2-30)ಎರಡು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಪಿಯೂಷ್ ಚಾವ್ಲಾ (1-26) ಒಂದು ವಿಕೆಟ್ ಪಡೆದರು.
 

Similar News