ಮಂಗಳೂರು ವಿವಿ ಅಂತರ ವಲಯ ಥ್ರೋಬಾಲ್ ಟೂರ್ನಿಗೆ ಚಾಲನೆ
ಕುಂದಾಪುರ: ಮಂಗಳೂರು ವಿವಿಯ ಉಡುಪಿ ವಲಯ ಹಾಗೂ ಅಂತರ ವಲಯ ಮಹಿಳೆಯರ ಥ್ರೋಬಾಲ್ ಚಾಂಪಿಯನ್‌ಷಿಪ್ ಇಲ್ಲಿಗೆ ಸಮೀಪದ ಮೂಡ್ಲಕಟ್ಟೆ ಐಎಂಜೆ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಕಾಮರ್ಸ್‌ನಲ್ಲಿ ಇಂದು ಪ್ರಾರಂಭಗೊಂಡಿತು.
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗ ದೊಂದಿಗೆ ಮೂರು ದಿನಗಳ ಕಾಲ ನಡೆಯುವ ಈ ಟೂರ್ನಿಯನ್ನು ಮಂಗಳೂರು ವಿವಿಯ ಕುಲಸಚಿವ ಡಾ.ಕಿಶೋರ್‌ಕುಮಾರ್ ಸಿ.ಕೆ. ಉದ್ಘಾಟಿಸಿ ಮಾತನಾಡಿ, ವಿದ್ಯಾ ಸಂಸ್ಥೆಯ ಬೆಳವಣಿಗೆಯಲ್ಲಿ ಕ್ರೀಡಾ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ.ಮುಂದಿನ ದಿನಗಳಲ್ಲಿ ಈ ಸಂಸ್ಥೆಯಲ್ಲಿ ಅಂತರ್ ವಿವಿ ಮಟ್ಟದ ಕ್ರೀಡಾಕೂಟ ನಡೆಸುವ ಆಶಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಾಪುರದ ಭಾರತೀಯ ರೆಡ್‌ಕ್ರಾಸ್ ಘಟಕದ ಅಧ್ಯಕ್ಷ ಜಯಕರ ಶೆಟ್ಟಿ, ವಿದ್ಯಾರ್ಥಿಗಳಿಗೆ ಪಠ್ಯ ದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಅವಕಾಶ ನೀಡಬೇಕೆಂದು ತಿಳಿಸಿದರು. ಸೋಲು-ಗೆಲುವು ಸ್ಪರ್ಧೆಯ ಒಂದು ಭಾಗ. ಸೋಲು ಕೊನೆಯಲ್ಲ, ಅದು ಮುಂದಿನ ಯಶಸ್ಸಿಗೆ ಸೋಪಾನ ಎಂದು ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎಂಜೆ ವಿದ್ಯಾ ಸಂಸ್ಥೆಗಳ ನಿರ್ದೇಶಕ ಪ್ರೊ. ದೋಮ ಚಂದ್ರಶೇಖರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಐಎಂಜೆ ವಿದ್ಯಾ ಸಂಸ್ಥೆಗಳ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗಡೆ, ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರತಿಭಾ ಎಂ ಪಟೇಲ್, ಉಪ ಪ್ರಾಂಶುಪಾಲ ಪ್ರೊ. ಜಯಶೀಲ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಖಾರ್ವಿ ಹಾಗೂ ಇತರರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾವೆ ಡಾ.ಪ್ರತಿಭಾ ಎಂ ಪಟೇಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ವಿಭಾಗದ ಪ್ರೊ. ಸುಮನ ಕಾರ್ಯಕ್ರಮ ನಿರೂಪಿಸಿ, ಆಂಗ್ಲ ವಿಭಾಗದ ಪ್ರೊ.ಪಾವನ ಸ್ವಾಗತಿಸಿದರು.ವಾಣಿಜ್ಯ ವಿಭಾಗದ ಪ್ರೊ.ಶಬೀನಾ ಹೆಚ್ ವಂದಿಸಿದರು.