342 ಪಂಚಾಯತ್‌ಗಳಲ್ಲಿ ವಾರ್ಡ್ ಸಭೆ, ಗ್ರಾಮ ಸಭೆ, ಜಮಾಬಂದಿಗಳನ್ನೇ ನಡೆಸಿಲ್ಲ

ವರದಿಯಿಂದ ಬಹಿರಂಗ

Update: 2023-05-18 04:36 GMT

ಬೆಂಗಳೂರು: ಕಾರ್ಯಕ್ಷಮತೆ ಲೆಕ್ಕಪರಿಶೋಧನೆಗೆ ಒಳಪಟ್ಟ ರಾಜ್ಯದ 559 ಗ್ರಾಮ ಪಂಚಾಯತ್‌ಗಳ ಪೈಕಿ 342 ಪಂಚಾಯತ್‌ಗಳಲ್ಲಿ ವಾರ್ಡ್ ಸಭೆ ಮತ್ತು ಗ್ರಾಮ ಸಭೆ, ಜಮಾಬಂದಿಗಳನ್ನೇ ನಡೆಸಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993ರ ಪ್ರಕರಣ 246(1) ಮತ್ತು ಗ್ರಾಮ ಪಂಚಾಯತ್‌ಗಳ ಆಯವ್ಯಯ ಮತ್ತು ಲೆಕ್ಕಪತ್ರಗಳ ನಿಯಮಗಳು 2006ರ ನಿಯಮ 112(1) ಅನ್ವಯ ರಾಜ್ಯದ ಗ್ರಾಮ ಪಂಚಾಯತ್‌ಗಳ 2020-21ನೇ ಸಾಲಿನ ಆರ್ಥಿಕ ವ್ಯವಹಾರಗಳ ಲೆಕ್ಕಪರಿಶೋಧನೆ ನಡೆಸಿ ಈ ಸಂಬಂಧ ಸರಕಾರಕ್ಕೆ ವರದಿಯನ್ನೂ ಸಲ್ಲಿಸಿದೆ. ಈ ವರದಿಯ ಪ್ರತಿಯು ‘the-file.in’ಗೆ ಲಭ್ಯವಾಗಿದೆ.

ಬೆಂಗಳೂರು ವಿಭಾಗದ 171 ಪಂಚಾಯತ್‌ಗಳ ಪೈಕಿ 75 ಪಂಚಾಯತ್‌ಗಳಲ್ಲಿ ವಾರ್ಡ್ ಮತ್ತು ಗ್ರಾಮ ಸಭೆ ನಡೆದಿಲ್ಲ. ಬೆಳಗಾವಿ ವಿಭಾಗದಲ್ಲಿ 97, ಕಲಬುರಗಿ ವಿಭಾಗದಲ್ಲಿ 110, ಮೈಸೂರು ವಿಭಾಗದಲ್ಲಿ 60 ಪಂಚಾಯತ್‌ಗಳಲ್ಲಿ ವಾರ್ಡ್ ಮತ್ತು ಗ್ರಾಮ ಸಭೆಗಳನ್ನು ನಡೆಸಿಲ್ಲ ಎಂಬ ಅಂಕಿ ಅಂಶವು ವರದಿಯಿಂದ ತಿಳಿದು ಬಂದಿದೆ.

ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳ ಮೂಲಕ ಯೋಜನೆಗಳನ್ನು ಸಿದ್ಧಪಡಿಸುವುದು ಮತ್ತು ಅನುಷ್ಠಾನ ಹೇಗಾಗುತ್ತಿದೆ ಎಂಬುದರ ಮೇಲೆ ಹದ್ದಿನ ಕಣ್ಣಿಡಲು ಈ ಸಭೆಗಳು ನಡೆಯಬೇಕು. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993ರ ಸೆಕ್ಷನ್ 3(ಸಿ) ಅನ್ವಯ ವಾರ್ಡ್ ಸಭೆ, ಸೆಕ್ಷನ್ 3(ಇ) ಅನ್ವಯ ಗ್ರಾಮ ಸಭೆಗಳನ್ನು 6 ತಿಂಗಳ ಅವಧಿಯನ್ನು ಮೀರದಂತೆ ಏರ್ಪಡಿಸಬೇಕು.

ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ಹಾಗೂ ರೂಪಿಸಿರುವ ಯೋಜನೆಗಳಲ್ಲಿ ಜನತೆಯ ಆಶೋತ್ತರಗಳಿಗೆ ಹೆಚ್ಚಿನ ಅವಕಾಶ ಲಭ್ಯವಾಗುವ ಉದ್ದೇಶದಿಂದಲೇ ವಾರ್ಡ್ ಮತ್ತು ಗ್ರಾಮ ಸಭೆಗಳನ್ನು ಆಯೋಜಿಸಬೇಕಿತ್ತು. ಅದರೆ 342 ಪಂಚಾಯತ್‌ಗಳಲ್ಲಿ ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳನ್ನೇ ನಡೆಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಈ ಸಭೆಗಳಲ್ಲಿ ಭಾಗವಹಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು, ಸಭೆಗಳಲ್ಲಿ ತೆಗೆದುಕೊಳ್ಳಬೇಕಾದ ವಿಷಯಗಳು, ವಿಷಯಗಳನ್ನು ನಿರ್ಣಯಿಸುವ ವಿಧಾನ ಮತ್ತು ನಡವಳಿಗಳ ದಾಖಲೆ ಇತ್ಯಾದಿ ವಿಷಯಗಳ ಬಗ್ಗೆ ದಾಖಲೆಗಳನ್ನು ನಿರ್ವಹಿಸಿಲ್ಲ. ಮತ್ತು ಅವುಗಳನ್ನು ಲೆಕ್ಕಪರಿಶೋಧನೆಗೆ ಹಾಜರುಪಡಿಸಿಲ್ಲ. ಯೋಜನೆಗಳ ಫಲಾನುವಿಗಳ ಆಯ್ಕೆ ಪ್ರಕ್ರಿಯೆ ಮತ್ತು ಗ್ರಾಮ ಪಂಚಾಯತ್‌ಗಳ ಉತ್ತರದಾಯಿತ್ವದ ಪರಿಶೀಲನೆಯಲ್ಲಿ ಸಾರ್ವಜನಿಕ ಸಹಭಾಗಿತ್ವದ ಕೊರತೆ ಇದೆ ಎಂದು ಲೆಕ್ಕಪರಿಶೋಧನೆ ವರದಿಯು ಗಮನಿಸಿರುವುದು ತಿಳಿದು ಬಂದಿದೆ.

ಗ್ರಾಮ ಪಂಚಾಯತ್‌ನಲ್ಲಿ ಅನುಷ್ಠಾನಗೊಳ್ಳುವ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸರಕಾರದ ಎಲ್ಲಾ ಹಂತದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡುವಲ್ಲಿ ಗ್ರಾಮದ ಎಲ್ಲಾ ನಾಗರಿಕರು ನೇರವಾಗಿ ಭಾಗಿಯಾಗಬೇಕು. ಆದರೆ ಕಾರ್ಯಕ್ಷಮತೆ ಕೈಗೊಂಡ ಪಂಚಾಯತ್‌ಗಳ ಪೈಕಿ 119 ಪಂಚಾಯತ್‌ಗಳಲ್ಲಿ ಜಮಾಬಂದಿಯನ್ನೇ ನಡೆಸಿಲ್ಲ. ಹೀಗಾಗಿ ಸರಕಾರದ ಎಲ್ಲಾ ಯೋಜನೆಗಳಲ್ಲಿ ಸ್ಥಳೀಯ ನಾಗರಿಕರು ಭಾಗಿಯಾಗಿದ್ದಾರೆಯೇ ಎಂಬುದನ್ನು ನಿಶ್ಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಲೆಕ್ಕ ಪರಿಶೋಧನೆ ವರದಿಯು ವಿವರಿಸಿದೆ.

ಗ್ರಾಮ ಮಟ್ಟದಲ್ಲಿ ಸ್ಥಳೀಯ ಸ್ವಯಂ ಆಡಳಿತದ ಮೂಲ ಘಟಕವಾಗುವ ಉದ್ದೇಶದಿಂದ ರೂಪಿಸಲಾಗಿರುವ ಈ ಸಭೆಗಳನ್ನು ನಿಯಮಿತವಾಗಿ ನಡೆಸದೇ ಇರುವುದರಿಂದ ಗ್ರಾಮ ಪಂಚಾಯತ್‌ನ ಆಡಳಿತದಲ್ಲಿ ಸಾರ್ವಜನಿಕ ಸಹಭಾಗಿತ್ವ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿರುವುದಿಲ್ಲ ಎಂದು ವರದಿಯು ಉಲ್ಲೇಖಿಸಿದೆ.

Similar News