ವಿಮಾನ ಪತನವಾಗಿ 17 ದಿನಗಳ ಬಳಿಕ 11 ತಿಂಗಳ ಶಿಶು ಸೇರಿದಂತೆ ನಾಲ್ಕು ಮಕ್ಕಳು ಅಮೆಝಾನ್‌ ಕಾಡಿನಲ್ಲಿ ಜೀವಂತ ಪತ್ತೆ

Update: 2023-05-18 08:40 GMT

ಬೋಗಟ್, ಕೊಲಂಬಿಯಾ: ದೇಶಕ್ಕೆ ಸಂತಸದ ಸುದ್ದಿಯನ್ನು ಘೋಷಿಸಿರುವ ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೊ, ಕೊಲಂಬಿಯಾ ಅಮೆಝಾನ್‌ನ ದಟ್ಟ ಕಾಡಿನ ನಡುವೆ ಪತನವಾಗಿದ್ದ ವಿಮಾನ ದುರಂತದಲ್ಲಿ 17 ದಿನಗಳ ಬಳಿಕ  11 ತಿಂಗಳ ಶಿಶು ಸೇರಿದಂತೆ ನಾಲ್ಕು ಸ್ಥಳೀಯ ಬುಡಕಟ್ಟು ಸಮುದಾಯದ ಮಕ್ಕಳು ಬದುಕುಳಿದಿದ್ದಾರೆ ಎಂದು ಪ್ರಕಟಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಸೇನೆಯು ನಡೆಸಿದ ವ್ಯಾಪಕ ಶೋಧ ಕಾರ್ಯದಲ್ಲಿ ಮಕ್ಕಳು ಪತ್ತೆಯಾಗಿದ್ದು, ಈ ರಕ್ಷಣೆಯನ್ನು ಇನ್ನಷ್ಟೇ ದೃಢಪಡಿಸಬೇಕಿದೆ ಎಂದು ಪೆಟ್ರೊ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಮೇ 1ರಂದು ನಡೆದಿದ್ದ ವಿಮಾನ ಅಪಘಾತ ದುರಂತದಲ್ಲಿ ಓರ್ವ ತಾಯಿ, ಓರ್ವ ಪೈಲಟ್ ಸೇರಿದಂತೆ ಮೂರು ಮಂದಿ ವಯಸ್ಕರು ಮೃತಪಟ್ಟಿದ್ದರು. ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇನ್ನುಳಿದ ಅಪ್ರಾಪ್ತ ಮಕ್ಕಳ ಪತ್ತೆಗೆ ನೂರಕ್ಕೂ ಹೆಚ್ಚು ಯೋಧರು ಶ್ವಾನ ದಳದೊಂದಿಗೆ ಶೋಧ ಕಾರ್ಯ ಕೈಗೊಂಡಿದ್ದರು.

ವಿಮಾನ ಪತನವಾದಾಗಿನಿಂದ 11 ತಿಂಗಳ ಶಿಶು ಹಾಗೂ 13, 9 ಹಾಗೂ 4 ವರ್ಷದ ಮಕ್ಕಳು ದಕ್ಷಿಣ ಕಾಕ್ವೆಟಾ ಇಲಾಖೆಯ ಅರಣ್ಯ ಪ್ರದೇಶದಲ್ಲಿ ಅಲೆದಾಡುತ್ತಿರಬಹುದು ಎಂದು ನಾವು ಭಾವಿಸಿದ್ದೇವೆ ಎಂದು ರಕ್ಷಣಾ ಪಡೆಯ ಯೋಧರು ತಿಳಿಸಿದ್ದರು.

ಆದರೆ, ಆ ಮಕ್ಕಳನ್ನು ಎಲ್ಲಿ ರಕ್ಷಿಸಲಾಯಿತು ಅಥವಾ ಅರಣ್ಯ ಪ್ರದೇಶದಲ್ಲಿ ಅವರು ಏಕಾಂಗಿಯಾಗಿ ಹೇಗೆ ಬದುಕುಳಿದರು ಎಂಬ ಯಾವುದೇ ವಿವರಗಳನ್ನು ಪೆಟ್ರೊ ಒದಗಿಸಿಲ್ಲ.

ಅಪಘಾತದಲ್ಲಿ ಮೃತಪಟ್ಟಿದ್ದ ಪ್ರಯಾಣಿಕರ ಪೈಕಿ ರ್ಯಾನೋಕ್ ಮ್ಯುಕ್ಯುಟುಯ್ ಆ ನಾಲ್ಕು ಮಕ್ಕಳ ತಾಯಿಯಾಗಿದ್ದರು.

Similar News