ಸಿದ್ದರಾಮಯ್ಯ 'ಗೆದ್ದ ರಾಮಯ್ಯ'ನಾದ ಬಗೆ ಹೇಗೆ?
ದೇಶದ ರಾಜಕೀಯ ವಲಯದಲ್ಲಿಯೇ ತೀವ್ರ ಚರ್ಚೆಗೆ ಗ್ರಾಸವಾಗಿರುವ, ಅಹಿಂದ ನಾಯಕ, ಕರುನಾಡಿನ ಭಾಗ್ಯ ವಿಧಾತ ಎಂದೇ ಬಿಂಬಿತನಾಗಿರುವ ಮೈಸೂರಿನ ಸಿದ್ದರಾಮನಹುಂಡಿಯ ‘ಸಿದ್ದರಾಮಯ್ಯ’ ಅವರು ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸುವ ಮೂಲಕ ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿ ಎರಡನೇ ಅವಧಿಗೆ ಸರಕಾರ ರಚನೆ ಮಾಡುವುದು ಖಚಿತವಾಗಿದೆ.
1948ರಲ್ಲಿ ಮೈಸೂರಿನ ವರುಣಾ ಹೋಬಳಿ ಬಳಿಯ ಸಿದ್ದರಾಮನ ಹುಂಡಿ ಎಂಬ ಪುಟ್ಟ ಗ್ರಾಮದಲ್ಲಿ ಸಿದ್ದರಾಮಯ್ಯ ಜನಿಸಿದರು. ಇವರ ತಂದೆ ಸಿದ್ಧರಾಮೇಗೌಡ ಹಾಗೂ ತಾಯಿ ಬೋರಮ್ಮ. ಅಣ್ಣ-ತಮ್ಮ, ಅಕ್ಕ-ತಂಗಿಯರಿರುವ ದೊಡ್ಡ ಕುಟುಂಬದಲ್ಲಿ ಜನಿಸಿದ ಸಿದ್ದರಾಮಯ್ಯ ಬಾಲ್ಯದಿಂದಲೂ ಚೂಟಿ ಹುಡುಗನಾಗಿದ್ದರು.
ಸಿದ್ದರಾಮಯ್ಯರದ್ದು ಆರ್ಥಿಕವಾಗಿ ಶ್ರೀಮಂತ ಕುಟುಂಬವೇನೂ ಆಗಿರಲಿಲ್ಲ. ಹೀಗಾಗಿ ಆಗಿನ ಕಾಲಕ್ಕೆ ಶಾಲೆಗೆ ಹೋಗುವುದು ಸುಲಭವಾಗಿರಲಿಲ್ಲ. ಆದರೂ ಓದಿನಲ್ಲಿ ಚುರುಕಾಗಿದ್ದ ಸಿದ್ದರಾಮಯ್ಯ ಕಷ್ಟದಲ್ಲಿಯೇ ಓದಿ ಮುಂದಿನ ತರಗತಿಗೆ ಹೋಗುತ್ತಿದ್ದರು. ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದು, ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜೂನಿ ಯರ್ ಆಗಿ ನಂತರ 1978ರ ವರೆಗೆ ಸ್ವಂತ-ವಕೀಲಿ ವೃತ್ತಿ ನಡೆಸಿದರು.
ರಾಜಕೀಯ ಹಾದಿ: ಭಾರತೀಯ ಲೋಕದಳ ಎಂಬ ಅಂದಿನ ರಾಜಕೀಯ ಪಕ್ಷದಿಂದ. 1983ರ ರಾಜ್ಯ ಚುನಾವಣೆಯಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಮೊದಲ ಬಾರಿಗೆ ಗೆದ್ದರು. ಇನ್ನೂ, ಭಾರತೀಯ ಲೋಕದಳದಿಂದ ಜನತಾ ಪಕ್ಷಕ್ಕೆ ಸೇರಿದಾಗ, ಇವರನ್ನು ಹೊಸದಾಗಿ ರಚಿಸಿದ ‘ಕನ್ನಡ ಕಾವಲು ಸಮಿತಿ’ಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಗಡಿಭಾಗಗಳಾದ ಕಾಸರಗೋಡು, ಬೆಳಗಾವಿ, ಕೋಲಾರ ಮುಂತಾದೆಡೆ ಪ್ರವಾಸ ಕೈಗೊಂಡು ವರದಿ ಸಲ್ಲಿಸಿದರು.
1985ರಲ್ಲಿ ಚಾಮುಂಡೇಶ್ವರಿಯಿಂದ ಗೆಲುವು ಸಾಧಿಸಿ ಪಶುಸಂಗೋಪನೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ರೇಷ್ಮೆ ಸಚಿವ, ಸಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 1989ರ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಇದಾದ ಬಳಿಕ ಜನತಾ ಪಕ್ಷ ಇಬ್ಭಾಗದ ಬಳಿಕ ಜನತಾದಳ ಸೇರ್ಪಡೆಯಾಗಿ 1994ರಲ್ಲಿ ಚುನಾವಣೆ ಗೆಲುವು ಸಾಧಿಸಿ ಹಣಕಾಸು ಖಾತೆ ನಿರ್ವಹಣೆ. 1999ರಲ್ಲಿ ಜೆಡಿಎಸ್ ರಚನೆಯಾದಾಗ ಎಚ್.ಡಿ.ದೇವೇಗೌಡರೊಂದಿಗೆ ಪಕ್ಷ ಸೇರ್ಪಡೆ. 1999ರಲ್ಲಿ ಜೆಡಿಎಸ್ ಅಧ್ಯಕ್ಷರಾಗಿ ಆಯ್ಕೆ, ಅದೇ ವರ್ಷ ಚುನಾವಣೆಯಲ್ಲಿ ಸೋಲು.
2004ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ 2 ಬಾರಿ ಉಪಮುಖ್ಯಮಂತ್ರಿ ಸ್ಥಾನ. ಮತ್ತೊಮ್ಮೆ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.ಈ ವೇಳೆ ಜೆಡಿಎಸ್‍ನಲ್ಲಿ ದೇವೇಗೌಡರನ್ನು ಹೊರತುಪಡಿಸಿದರೆ ಸಿದ್ದರಾಮಯ್ಯ ಪ್ರಬಲ ನಾಯಕನಾಗಿದ್ದರು. ಆದರೆ 2006ರಲ್ಲಿ ದೇವೇಗೌಡರು ಸಿದ್ದರಾಮಯ್ಯರನ್ನು ಪಕ್ಷದಿಂದಲೇ ಉಚ್ಛಾಟಿಸಿದರು.
2013ರಲ್ಲಿ ಮುಖ್ಯಮಂತ್ರಿ..!: ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ ಬಹುಮತದೊಂದಿದೆ 2013ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 2013ರಿಂದ 2018ರವರೆಗೆಪೂರ್ಣಾವಧಿ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿದರು.
ಅಂಹಿದ ಸಮಾವೇಶಕ್ಕೆ ಶಿಕ್ಷೆ!: ಸಿದ್ದರಾಮಯ್ಯ ಅವರು ದೇವೇಗೌಡರ ವಿರೋಧದ ನಡುವೆಯೂ ಅಹಿಂದ ಸಮಾವೇಶ ನಡೆಸಿದರು. ಅಲ್ಪಸಂಖ್ಯಾತ, ಹಿಂದುವಳಿದ ವರ್ಗ ಮತ್ತು ದಲಿತ ವರ್ಗದವರನ್ನು ಸೆಳೆಯುವ ಉದ್ಧೇಶ ಇದರ ಹಿಂದಿತ್ತು. ಆದರೆ ಅಹಿಂದ ಸಮಾವೇಶ ಮಾಡಿದ್ದಾರೆ ಎಂಬ ಕಾರಣಕ್ಕೆ ದೇವೇಗೌಡರು ಸಿದ್ದರಾಮಯ್ಯರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಿದರು. ಅಷ್ಟೇ ಅಲ್ಲದೇ ಸಿಎಂ ಆಗಿದ್ದ ಧರ್ಮಸಿಂಗ್‍ಗೆಹೇಳಿ ಉಪಮುಖ್ಯಮಂತ್ರಿಸ್ಥಾನದಿಂದಲೂ ಕೆಳಗೆ ಇಳಿಸಿದ್ದರು.
ಗೆಲುವಿನ ಸರಮಾಲೆ..!: ಶಾಸಕರಾಗಿ, ವಿವಿಧ ಖಾತೆಯ ಸಚಿವರಾಗಿ, ಹಣಕಾಸು ಸಚಿವರಾಗಿ, ಡಿಸಿಎಂ ಆಗಿ, ಮುಖಮಂತ್ರಿಯಾಗಿ, ವಿಧಾನಸಭೆ ವಿಪಕ್ಷ ನಾಯಕನಾಗಿ, ವಿವಿಧ ಸಮಿತಿ ಮುಖ್ಯಸ್ಥನಾಗಿ ಸಿದ್ದರಾಮಯ್ಯ ಅವರು ರಾಜಕೀಯದಲ್ಲಿ ಅಪಾರ ಅನುಭವ ಪಡೆದಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ 5 ಬಾರಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ, 3 ಬಾರಿ ಸೋಲು ಕಂಡಿದ್ದಾರೆ. ಇದುವರೆಗೆ ಒಟ್ಟು ರಾಜಕೀಯದಲ್ಲಿ 10 ಬಾರಿ ಗೆಲುವು ಸಾಧಿಸಿದ್ದಾರೆ.
2013 ರಿಂದ 2018ರ ತನಕ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವಿದ್ದಾಗ ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು.
ಡಿ.ದೇವರಾಜ ಅರಸು ನಂತರ ಮುಖ್ಯಮಂತ್ರಿಯಾಗಿ 5 ವರ್ಷ ಅವಧಿ ಪೂರ್ಣಗೊಳಿಸಿದ ಏಕೈಕ ಮುಖ್ಯಮಂತ್ರಿ ಇವರಾಗಿದ್ದಾರೆ. ಮುಖ್ಯಮಂತ್ರಿಯಾದ ನಂತರ ಬಿಪಿಎಲ್ ಕುಟುಂಬಗಳಿಗೆ ಉಚಿತ ಅಕ್ಕಿ ನೀಡುವ ‘ಅನ್ನಭಾಗ್ಯ’, ‘ಕ್ಷೀರಭಾಗ್ಯ, ಶಾದಿಭಾಗ್ಯ, ಕೃಷಿಭಾಗ್ಯ ಸೇರಿದಂತೆ ಬಡಜನರಿಗೆ ವಿವಿಧ ಯೋಜನೆಗಳನ್ನು ಮಾಡಿದರು. ದಲಿತ ವರ್ಗದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸನ್ನು ನೀಡಿದ್ದರು. ಇದರ ಜೊತೆಗೆ ‘ಇಂದಿರಾ ಕ್ಯಾಂಟೀನ್’ ಆರಂಭಿಸಿ ಕಡಿಮೆ ಬೆಲೆಗೆ ಊಟ ಒದಗಿಸಿದರು.