ದೌರ್ಜನ್ಯ ಎಸಗುವ ಅಧಿಕಾರ ಯಾರಿಗೂ ಇಲ್ಲ : ಕೋಟ ಶ್ರೀನಿವಾಸ ಪೂಜಾರಿ

Update: 2023-05-18 12:43 GMT

ಉಡುಪಿ: ನಳಿನ್ ಕುಮಾರ್ ಕಟೀಲ್ ಹಾಗೂ ಸದಾನಂದ ಗೌಡ ಅವರ ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿರುವ ಪ್ರಕರಣದ ಆರೋಪಿಗಳಿಗೆ ಪೊಲೀಸರು ದೌರ್ಜನ್ಯ ಎಸಗಿರುವುದನ್ನು ಬಿಜೆಪಿ ಈಗಾಗಲೇ ಖಂಡಿಸಿ, ತನಿಖೆಗೆ ಆಗ್ರಹಿಸಿದೆ. ನಳಿನ್ ಕುಮಾರ್ ಕಟೀಲ್ ಕೂಡ ಇದನ್ನು ಖಂಡಿಸಿದ್ದಾರೆ. ಹಲ್ಲೆ ಮಾಡುವ ಮತ್ತು ದೌರ್ಜನ್ಯ ಎಸಗುವ ಅಧಿಕಾರ ಯಾರಿಗೂ ಇಲ್ಲ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಬಂದ ಕೂಡಲೇ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಸೇರಿದಂತೆ ವಿವಿಧ ವಿದ್ಯಾಮಾನಗಳು ಆತಂಕ ಹುಟ್ಟಿಸುತ್ತಿವೆ.  ವಿಪಕ್ಷ ಸ್ಥಾನದಲ್ಲಿ ನಿಂತು ಬಿಜೆಪಿ ಇದನ್ನು ಗಂಭೀರವಾಗಿ ನೋಡುತ್ತಿದೆ. ಕರ್ನಾಟಕವನ್ನು ಪಶ್ಚಿಮ ಬಂಗಾಳ, ಕೇರಳ ಮಾಡಿದರೆ ನಾವು ಸಹಿಸಲ್ಲ. ಬಿಜೆಪಿ ಇದಕ್ಕೆ ಪ್ರತಿರೋಧ ಮಾಡುವ ಜನಪರ ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಬಿ.ಎಲ್.ಸಂತೋಷ್ ವಿರುದ್ಧ ಕಾಂಗ್ರೆಸ್ ಲೇವಡಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗೆದ್ದ ಮೇಲೆ ಕಾಂಗ್ರೆಸ್ ಬಿಜೆಪಿಯನ್ನು ವ್ಯಂಗ್ಯ ಮಾಡುತ್ತಿದೆ. ಬೂತ್ ಮಟ್ಟದ ಕಾರ್ಯಕರ್ತರ ಅಂಕಿ ಅಂಶವನ್ನು ಇಟ್ಟುಕೊಂಡು ನಾವು ಹೇಳಿದ್ದೆವು. ನಮ್ಮ ನಿರೀಕ್ಷೆಗಳನ್ನು ಮೀರಿ ಗ್ಯಾರಂಟಿ ಕಾರ್ಡ್ ಕೆಲಸ ಮಾಡಿದೆ. ಬಡವರು, ದುರ್ಬಲ ವರ್ಗದವರು ಕಾಂಗ್ರೆಸಿಗೆ ಮತ ಹಾಕಿರಬಹುದು ಎಂದರು.

ಕಾಂಗ್ರೆಸ್ ಜನಕ್ಕೆ ಕೊಟ್ಟು ಎಲ್ಲ ಆಶ್ವಾಸನೆ ಗ್ಯಾರಂಟಿಗಳನ್ನು ಉಳಿಸಿಕೊಳ್ಳಬೇಕು. ವೃದ್ಧಾಪ್ಯ ವೇತನ, ವಿಧವಾ ವೇತನ ಎಂದು ಕಾರಣ ಹುಡುಕಲು ಸಾಧ್ಯವಿಲ್ಲ. ಕಾಂಗ್ರೆಸ್ ಆಡಿದ ಮಾತನ್ನು ತಪ್ಪಿದರೆ ಬಿಜೆಪಿ ಜನರ ಪರವಾಗಿ ನಿಲ್ಲುತ್ತದೆ ಎಂದು ಅವರು ತಿಳಿಸಿದರು.

Similar News