ಮಂಗಳೂರು: ಜೈಲಿನಲ್ಲಿ ಗಾಂಜಾ ಪೂರೈಕೆಗೆ ಯತ್ನ; ಆರೋಪಿ ಸೆರೆ
Update: 2023-05-18 20:27 IST
ಮಂಗಳೂರು, ಮೇ 18: ನಗರದ ಕೋಡಿಯಾಲ್‌ಬೈಲ್‌ನಲ್ಲಿರುವ ದ.ಕ. ಜಿಲ್ಲಾ ಕಾರಾಗೃಹದ ವಿಚಾರಣಾಧೀನ ಕೈದಿ ಮಹೇಂದ್ರ ಶೆಟ್ಟಿಯ ವೀಕ್ಷಣೆಗೆ ಬಂದಿದ್ದ ವ್ಯಕ್ತಿಯೊಬ್ಬ ಗಾಂಜಾ ಪೂರೈಕೆ ಮಾಡಲು ಯತ್ನಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಅನಿಶ್ ವಾಟ್ಸನ್ ಡಿಸೋಜ ಬಂಧಿತ ಆರೋಪಿ. ಈತನು ಮೇ 17ರಂದು ಸಂಜೆ 5ಕ್ಕೆ ಮಹೇಂದ್ರ ಶೆಟ್ಟಿಯನ್ನು ಭೇಟಿಯಾಗಲು ಬಂದಿದ್ದು, ಈ ಸಂದರ್ಭ ಗಾಂಜಾ ನೀಡಲು ಯತ್ನಿಸಿದ್ದ ಎಂದು ಆರೋಪಿಸಲಾಗಿದೆ.
ಆರೋಪಿಯು ಬಟ್ಟೆ ಹಾಗೂ ಕಪ್ಪು ಮತ್ತು ಬೂದು ಬಣ್ಣ ಮಿಶ್ರಿತ ಚಪ್ಪಲಿಗಳನ್ನು ತಂದಿದ್ದು, ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಪರಿಶೀಲಿಸುವ ಸಂದರ್ಭ ಚಪ್ಪಲಿಗಳಲ್ಲಿ ಹೆಚ್ಚುವರಿಯಾಗಿ ಹೊಲಿಗೆ ಹಾಕಿರುವ ರೀತಿಯಲ್ಲಿ ಕಂಡು ಬಂತು. ಸಂಶಯದಿಂದ ಹೊಲಿಗೆ ಬಿಚ್ಚಿ ಪರಿಶೀಲಿಸಿದಾಗ ಒಂದು ಚಪ್ಪಲಿಯಲ್ಲಿ ಪ್ಲಾಸ್ಟಿಕ್ ಕವರ್‌ನ ಒಳಗೆ ಗಾಂಜಾ ಕಂಡು ಬಂತು. ತಕ್ಷಣ ವಶಕ್ಕೆ ಪಡೆದು ಬರ್ಕೆ ಠಾಣೆಗೆ ಒಪ್ಪಿಸಲಾಗಿದೆ. ಪೊಲೀಸರು ಬಂಧಿಸಿ ಕಾನೂನು ಕ್ರಮ ಜರಗಿಸಿದ್ದಾರೆ.