ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯ

Update: 2023-05-19 12:35 GMT

‘‘ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವ ಸ್ಥಾಪನೆಯಾಗದೆ ರಾಜಕೀಯ ಪ್ರಜಾಪ್ರಭುತ್ವ ಬಾಳಲಾರದು ಎಂಬ ಬಿ.ಆರ್. ಅಂಬೇಡ್ಕರರ ಎಚ್ಚರಿಕೆಯ ಸಂದೇಶವನ್ನು ನಾನು ಮಂಡಿಸಿರುವ ಹದಿಮೂರು ಬಜೆಟ್ಗಳಲ್ಲಿ ಪಾಲಿಸಿದ್ದೇನೆ’’ ಎಂಬ ಸಿದ್ದರಾಮಯ್ಯ ಮಾತು ರಾಜಕೀಯದಲ್ಲಿ ಅವರು ಕಾಯ್ದುಕೊಂಡು ಬಂದ ಸಾಮಾಜಿಕ ಕಾಳಜಿ ಮತ್ತು ಕಳಕಳಿ ಎಂಥದು ಎಂಬುದನ್ನು ಹೇಳುತ್ತದೆ.

‘‘ಮತ್ತೆ ಮತ್ತೆ ಹೇಳುತ್ತೇನೆ, ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆಯ ಸಂವಿಧಾನ ಜಾರಿಗೆ ಬರದೆ ಇದ್ದಿದ್ದರೆ ನಾನು ಮುಖ್ಯಮಂತ್ರಿಯಾಗುತ್ತಿರಲಿಲ್ಲ, ಊರಲ್ಲಿ ಕುರಿ ಮೇಯಿಸುತ್ತಿದ್ದೆ.’’ ಇದು ಈ ಸಲ ಅಂಬೇಡ್ಕರ್ ಜನ್ಮದಿನದ ಸಂದರ್ಭದಲ್ಲಿ ಎಪ್ರಿಲ್ 14ರಂದು ಸಿದ್ದರಾಮಯ್ಯ ಅವರು ಮಾಡಿದ್ದ ಟ್ವೀಟ್.

‘‘ನನ್ನ ರಾಜಕೀಯ ಬದುಕು ಬಾಬಾ ಸಾಹೇಬರ ಋಣ. ಈ ಋಣ ಸಂದಾಯಕ್ಕೆ ನನ್ನ ರಾಜಕೀಯ ಮುಡಿಪು’’ ಎಂಬ ಮತ್ತೊಂದು ಮಾತನ್ನೂ ಅವರು ಟ್ವೀಟ್ ಮೂಲಕ ಹೇಳಿದ್ದರು. ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ  ಸಿದ್ದರಾಮಯ್ಯ ಅವರ ಬದುಕು ಮತ್ತು ರಾಜಕೀಯವನ್ನು ಅರ್ಥ ಮಾಡಿಕೊಳ್ಳಲು ಅವರ ಈ ಮಾತು ಮಹತ್ವದ ತೋರುಬೆರಳು ಎಂದೇ ಹೇಳಿದರೆ ತಪ್ಪಲ್ಲ.

ಈ ದೇಶದ ಪ್ರಬುದ್ಧ ಮತ್ತು ಮಹತ್ವದ ರಾಜಕಾರಣಿಗಳಲ್ಲಿ ನಿಸ್ಸಂದೇಹವಾಗಿಯೂ ಸಿದ್ದರಾಮಯ್ಯ ಒಬ್ಬರು. ಕಳೆದ ಎಪ್ರಿಲ್ 14ರ ಸಿದ್ದರಾಮಯ್ಯ ಸರಣಿ ಟ್ವೀಟ್ ಗಳಲ್ಲಿನ ಇನ್ನೂ ಎರಡು ಮಾತುಗಳು ಹೀಗಿವೆ: ‘‘ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಯ ಪ್ರತಿರೂಪವಾಗಿರುವ ಸಂವಿಧಾನಕ್ಕೆ ಎದುರಾಗಿರುವ ಬೆದರಿಕೆಯ ವಿರುದ್ಧ ಹೋರಾಡುವುದೇ ಸಂವಿಧಾನ ಶಿಲ್ಪಿಗೆ ನಾವು ಸಲ್ಲಿಸುವ ಅತ್ಯುನ್ನತ ಗೌರವ’’ ಎಂಬ ಅವರ ಮಾತು ರಾಜಕೀಯದಲ್ಲಿ ಅವರು ತೋರುತ್ತ ಬಂದ ತಾತ್ವಿಕತೆ ಮತ್ತು ಬದ್ಧತೆಯನ್ನು ನಿರೂಪಿಸುತ್ತದೆ.

ಅದನ್ನು ಅವರು ತಮ್ಮ ಪ್ರತೀ ಹೆಜ್ಜೆಯಲ್ಲಿಯೂ ಮಾಡುತ್ತ ಬಂದಿದ್ದಾರೆಂಬುದನ್ನು, ಪ್ರತಿಪಕ್ಷ ನಾಯಕನಾಗಿ ಬಿಜೆಪಿ ಸರಕಾರವನ್ನು ಸಮರ್ಥವಾಗಿ ಎದುರಿಸಿದ್ದ ಅವರ ನಡೆಯಲ್ಲೂ ಈ ರಾಜ್ಯದ ಜನತೆ ಕಂಡಿದೆ. ‘‘ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವ ಸ್ಥಾಪನೆಯಾಗದೆ ರಾಜಕೀಯ ಪ್ರಜಾಪ್ರಭುತ್ವ ಬಾಳಲಾರದು ಎಂಬ ಬಿ.ಆರ್.ಅಂಬೇಡ್ಕರರ ಎಚ್ಚರಿಕೆಯ ಸಂದೇಶವನ್ನು ನಾನು ಮಂಡಿಸಿರುವ ಹದಿಮೂರು ಬಜೆಟ್ಗಳಲ್ಲಿ ಪಾಲಿಸಿದ್ದೇನೆ’’ ಎಂಬ ಸಿದ್ದರಾಮಯ್ಯ ಮಾತು ರಾಜಕೀಯದಲ್ಲಿ ಅವರು ಕಾಯ್ದುಕೊಂಡು ಬಂದ ಸಾಮಾಜಿಕ ಕಾಳಜಿ ಮತ್ತು ಕಳಕಳಿ ಎಂಥದು ಎಂಬುದನ್ನು ಹೇಳುತ್ತದೆ.

ಹೌದು, 2013ರಿಂದ 2018ರವರೆಗೆ ಪೂರ್ಣಾವಧಿ ಮುಖ್ಯಮಂತ್ರಿ, ಎರಡು ಬಾರಿ ಉಪಮುಖ್ಯಮಂತ್ರಿ. ಹಣಕಾಸು ಖಾತೆಯ ಯಶಸ್ವೀ ನಿರ್ವಹಣೆ. 13 ಬಾರಿ ಈ ರಾಜ್ಯದ ಬಜೆಟ್ ಮಂಡಿಸಿದ ಹೆಗ್ಗಳಿಕೆ. ಇವೆಲ್ಲವೂ ಸಿದ್ದರಾಮಯ್ಯನವರ ಶ್ರೀಮಂತ ಅನುಭವಕ್ಕೆ, ಮುತ್ಸದ್ದಿತನಕ್ಕೆ, ಪ್ರಬುದ್ಧತೆಗೆ ಸಾಕ್ಷಿ. ಈಗ ಅವರಿಗೆ 76 ವರ್ಷ ವಯಸ್ಸು. ಅಹಿಂದ ನಾಯಕನೆಂದೇ ಗುರುತಾದವರು. ಸಮಾಜವಾದಿ ಹೋರಾಟದ ಹಿನ್ನೆಲೆ. ಜನತಾ ಪರಿವಾರದಿಂದ ಬಂದ ನಾಯಕ.

ಈಗ ಕಾಂಗ್ರೆಸ್ನಲ್ಲಿ ಅವರು ಏನು ಹೇಳಿದರೂ ನಡೆಯುವಷ್ಟರ ಮಟ್ಟಿಗೆ ಬಹಳ ಗಟ್ಟಿ ಸ್ಥಾನ. ಅವರದೇ ಆದ ದೊಡ್ಡ ಬೆಂಬಲಿಗರ ಪಡೆಯೊಂದು ಪಕ್ಷದೊಳಗೇ ಬೆಳೆದಿದೆ. ಕರ್ನಾಟಕ ಕಾಂಗ್ರೆಸ್ಗೆ ಸಿದ್ದರಾಮಯ್ಯ ಅನಿವಾರ್ಯ ಎನ್ನುವಷ್ಟರ ಮಟ್ಟಿಗೆ ಅವರಿಗೆ ಪ್ರಾಮುಖ್ಯತೆಯಿದೆ. ಅವರ ಅನುಭವ, ಅವರ ಪ್ರೌಢಿಮೆ, ಪಕ್ಷದ ಮುಖ್ಯ ಧ್ವನಿಯಾಗಿ, ಕೇಂದ್ರ ಸರಕಾರದ ವಿರುದ್ಧ ತೀಕ್ಷ್ಣವಾಗಿ ಅಭಿಪ್ರಾಯ ಮಂಡಿಸಬಲ್ಲ ಅವರ ಸಾಮರ್ಥ್ಯಕ್ಕೆ ಅವರೇ ಸಾಟಿ.

ಆರ್ಥಿಕ ವಿಶ್ಲೇಷಣೆ, ಅಂಕಿ ಅಂಶಗಳು, ಕಾನೂನಿನ ತಿಳುವಳಿಕೆ ಇವೆಲ್ಲದರ ಮೂಲಕ ವಿಧಾನಸಭೆಯಲ್ಲಿ ಸರಕಾರದ ವಿರುದ್ಧ ಪ್ರತಿಪಕ್ಷದ ನಾಯಕನ ಸ್ಥಾನದಿಂದ ಸಿದ್ದರಾಮಯ್ಯ ಅವರಷ್ಟು ಸಮರ್ಥವಾಗಿ ವಾದಿಸಬಲ್ಲ ಚತುರತೆ ಮತ್ತು ಸಾಮರ್ಥ್ಯವುಳ್ಳ ರಾಜಕಾರಣಿ ಬಹುಶಃ ಕಾಂಗ್ರೆಸ್ನಲ್ಲಿ ಅವರೊಬ್ಬರೇ. ನಾಲ್ಕು ದಶಕಗಳ ಸಕ್ರಿಯ ರಾಜಕಾರಣದಲ್ಲಿ ಹಲವು ಏಳುಬೀಳುಗಳನ್ನು ಕಂಡವರು ಸಿದ್ದರಾಮಯ್ಯ.

ಆದರೆ ಅವರೆಂದೂ ಜಾತ್ಯತೀತ ಸಿದ್ಧಾಂತದ ಜೊತೆ ರಾಜಿ ಮಾಡಿಕೊಂಡಿಲ್ಲ ಎಂಬುದು ಅವರ ವಿಶೇಷತೆ. ದಶಕಕ್ಕೂ ಹೆಚ್ಚು ಕಾಲ ದೇವೇಗೌಡರ ರಾಜಕೀಯ ಗರಡಿಯಲ್ಲಿದ್ದವರು.  ಮೈಸೂರು ವಿವಿ ಕಾನೂನು ಪದವೀಧರರಾದ ಸಿದ್ದರಾಮಯ್ಯ 1978ರವರೆಗೆ ವಕೀಲರಾಗಿ ಕೆಲಸ ಮಾಡಿದ್ದವರು. ಚುನಾವಣಾ ರಾಜಕೀಯಕ್ಕೆ ಅವರು ಪ್ರವೇಶ ಮಾಡಿದ್ದು, 1983ರಲ್ಲಿ ಭಾರತೀಯ ಲೋಕದಳದಿಂದ. ಹಾಗೆ ಅವರ ಮೊದಲ ಗೆಲುವನ್ನು ಬರೆದದ್ದು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರ. ಭಾರತೀಯ ಲೋಕದಳದಿಂದ ಜನತಾ ಪಕ್ಷ ಸೇರಿದ ಬಳಿಕ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾದರು.

ಮ್ತತೊಮ್ಮೆ ಚಾಮುಂಡೇಶ್ವರಿಯಿಂದಲೇ ಗೆದ್ದ ಅವರು, 1989ರಲ್ಲಿ ಕಾಂಗ್ರೆಸ್ ಅಲೆಯಲ್ಲಿ ಸೋಲನುಭವಿ ಸಬೇಕಾಯಿತು. ಜನತಾ ಪಕ್ಷ ಹೋಳಾದಾಗ ಜನತಾದಳ ಸೇರ್ಪಡೆ. ದೇವೇಗೌಡರೊಡನೆ ಕೆಲಸ. ಜನತಾದಳದ ಕಾರ್ಯದರ್ಶಿಯಾಗಿ ದುಡಿಮೆ. 1994ರ ಚುನಾವಣೆಯಲ್ಲಿ ಗೆದ್ದು ಹಣಕಾಸು ಸಚಿವರಾದರು. 1999ರ ಚುನಾವಣೆಯ ಹೊತ್ತಿಗೆ ಜನತಾ ದಳ ಹೋಳಾದಾಗ ದೇವೇಗೌಡರ ಜೊತೆಗೆ ಉಳಿದವರು ಸಿದ್ದರಾಮಯ್ಯ. ಜಾತ್ಯತೀತ ಜನತಾದಳದ ಅಧ್ಯಕ್ಷ ಹುದ್ದೆ. ಆದರೆ ಚುನಾವಣೆಯಲ್ಲಿ ಸೋಲು.

2004ರಲ್ಲಿ ಅತಂತ್ರ ವಿಧಾನಸಭೆ ತಲೆದೋರಿ, ಕಾಂಗ್ರೆಸ್ ಜತೆಗೂಡಿ ಸರಕಾರ ರಚನೆಯಾದಾಗ ಎರಡು ಬಾರಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾದರು. ಹುಬ್ಬಳ್ಳಿಯಲ್ಲಿ ಬೃಹತ್ ಅಹಿಂದ ಸಮಾವೇಶ ಏರ್ಪಡಿಸಿದ ಬೆನ್ನಿಗೇ ದೇವೇಗೌಡರ ವಿರುದ್ಧ ಬಂಡಾಯವೆದ್ದ ಬಳಿಕ 2006ರ ಹೊತ್ತಿಗೆ ಪಕ್ಷದಿಂದ ಉಚ್ಚಾಟನೆಗೊಂಡರು. ಅದೇ ವರ್ಷ ಕಾಂಗ್ರೆಸ್ ಸೇರಿದ ಅವರು ಭಾರೀ ಜಿದ್ದಾಜಿದ್ದಿನ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಗೆದ್ದು ಬೀಗಿದರು.

ಮುಖ್ಯಮಂತ್ರಿಯಾಗಿ ಅವರು ತಂದ ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರಭಾಗ್ಯ, ಆರೋಗ್ಯ ಭಾಗ್ಯ, ವಸತಿ ಭಾಗ್ಯ, ಇಂದಿರಾ ಕ್ಯಾಂಟೀನ್ಗಳಂತಹ ಜನಪ್ರಿಯ ಯೋಜನೆಗಳು ಈ ಸಮಾಜದ ದಮನಿತ ವರ್ಗಗಳ ಬಗ್ಗೆ ಅವರು ತೋರಿದ ಕಾಳಜಿಗೆ ಸಾಕ್ಷಿಯೆಂಬಂತಿವೆ.

2008ರ ಚುನಾವಣೆಯನ್ನು ವರುಣಾದಿಂದ ಗೆದ್ದರು ಸಿದ್ದರಾಮಯ್ಯ. ಆ ಚುನಾವಣೆ ಬಳಿಕ ಬಿಜೆಪಿ ಆಪರೇಷನ್ ಕಮಲದ ಮೂಲಕ ಸರಕಾರ ರಚಿಸಿತು. ಬಳ್ಳಾರಿಯ ರೆಡ್ಡಿ ಸೋದರರದ್ದೇ ಆಗ ಕಾರುಬಾರು. ವಿಪಕ್ಷ ನಾಯಕರಾಗಿ ರೆಡ್ಡಿ ಸೋದರರ ವಿರುದ್ಧ ತೊಡೆ ತಟ್ಟಿದ ಸಿದ್ದರಾಮಯ್ಯ ಅವರ ಸವಾಲು ಸ್ವೀಕರಿಸಿ ಬಳ್ಳಾರಿಗೆ ಪಾದಯಾತ್ರೆ ಹೋದರು. ಆ ಪಾದಯಾತ್ರೆ ಅವರಿಗೆ ಭಾರೀ ಜನಬೆಂಬಲ ತಂದು ಕೊಟ್ಟಿತು.

2013ರ ಚುನಾವಣೆ ಯಲ್ಲಿ ಮತ್ತೆ ವರುಣಾ ದಿಂದ ಗೆದ್ದರು. ಕಾಂಗ್ರೆಸ್ ಬಹುಮತ ಪಡೆಯಿತು. ರಾಜ್ಯಾದ್ಯಂತ ಸಿದ್ದರಾಮಯ್ಯ ಸಿಎಂ ಆಗಬೇಕೆಂಬ ಬೇಡಿಕೆ ಜೋರಾಗಿತ್ತು. ಆಗ ಮುಖ್ಯಮಂತ್ರಿ ಹುದ್ದೆಯೇರಿದ ಸಿದ್ದರಾಮಯ್ಯ, ಐದು ವರ್ಷದ ಅಧಿಕಾರಾವಧಿ ಪೂರೈಸಿದರು. ಮುಖ್ಯಮಂತ್ರಿಯಾಗಿ ಅವರು ತಂದ ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರಭಾಗ್ಯ, ಆರೋಗ್ಯ ಭಾಗ್ಯ, ವಸತಿ ಭಾಗ್ಯ, ಇಂದಿರಾ ಕ್ಯಾಂಟೀನ್ಗಳಂತಹ ಜನಪ್ರಿಯ ಯೋಜನೆಗಳು ಈ ಸಮಾಜದ ದಮನಿತ ವರ್ಗಗಳ ಬಗ್ಗೆ ಅವರು ತೋರಿದ ಕಾಳಜಿಗೆ ಸಾಕ್ಷಿಯೆಂಬಂತಿವೆ. 

ತಮ್ಮ ಐದು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದ್ದ ಎಲ್ಲ ಆಶ್ವಾಸನೆಗಳನ್ನು ಪೂರೈಸಿ ಇನ್ನೂ ಹಲವು ಹೊಸ ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಹೆಗ್ಗಳಿಕೆ ಸಿದ್ದರಾಮಯ್ಯನವರದ್ದು. ಅಧಿಕಾರದಲ್ಲಿರುವಾಗ ನಾಡಿನ ಬುದ್ಧಿಜೀವಿಗಳ, ಚಿಂತಕರ, ಸಾಹಿತಿಗಳ ಮಾತಿಗೆ ಮನ್ನಣೆ ನೀಡಿ ಅವರ ಸಲಹೆಗಳನ್ನು ಗಂಭೀರವಾಗಿ ಸ್ವೀಕರಿಸಿ ಅವುಗಳನ್ನು ತಮ್ಮ ಆಡಳಿತದಲ್ಲಿ, ನೀತಿ ನಿರೂಪಣೆಯಲ್ಲಿ ಅಳವಡಿಸಿಕೊಂಡವರು ಸಿದ್ದರಾಮಯ್ಯ.

2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಗೆದ್ದರು. ಜನಪರವಾಗಿ ಆಡಳಿತ ನಡೆಸಿದ ತಮಗೆ ಹಾಗೂ ತಮ್ಮ ಪಕ್ಷಕ್ಕೆ ಇನ್ನೊಂದು ಅವಧಿಗೆ ಅಧಿಕಾರ ಸಿಗಲಿದೆ ಎಂಬ ಅವರ ನಿರೀಕ್ಷೆ ನಿಜವಾಗಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು.

ಬಳಿಕ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಮೈತ್ರಿ ಸರಕಾರ ಪತನದ ಬಳಿಕ ವಿಧಾನಸಭೆ ಪ್ರತಿಪಕ್ಷ ನಾಯಕನಾಗಿ ಸಮರ್ಥವಾಗಿ ಹೊಣೆ ನಿಭಾಯಿಸಿದವರು ಸಿದ್ದರಾಮಯ್ಯ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಅನಾರೋಗ್ಯದಿಂದ ಮೃತಪಟ್ಟರು. ಬಳಿಕ ಅವರ ಇನ್ನೊಬ್ಬ ಪುತ್ರ ಡಾ. ಯತೀಂದ್ರ ರಾಜಕೀಯಕ್ಕೆ ಬಂದರು. 2018 ರ ಚುನಾವಣೆಯಲ್ಲಿ ತಂದೆ ತೆರವು ಮಾಡಿದ ವರುಣಾದಿಂದ ಸ್ಪರ್ಧಿಸಿ ಗೆದ್ದರು.

ಈ ಸಲದ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧಿಸದಿರಲು ನಿರ್ಧರಿಸಿದ್ದ ಸಿದ್ದರಾಮಯ್ಯ, ಕೋಲಾರದಿಂದ ಕಣಕ್ಕಿಳಿಯುವ ಮನಸ್ಸು ಮಾಡಿದ್ದರು. ಆದರೆ ಕಡೇ ಗಳಿಗೆಯಲ್ಲಿ ವರುಣಾದಿಂದ ಸ್ಪರ್ಧಿಸಿ, ಬಿಜೆಪಿಯ ಎಲ್ಲ ಆಟಗಳನ್ನೂ ಎದುರಿಸಿ ಗೆದ್ದಿದ್ದಾರೆ. ಸಿದ್ದರಾಮಯ್ಯ ಜನಿಸಿದ್ದು ಮೈಸೂರಿನ ವರುಣಾ ಹೋಬಳಿಯ ಸಿದ್ದರಾಮನಹುಂಡಿಯಲ್ಲಿ. ತಂದೆ ಸಿದ್ದರಾಮೇಗೌಡ, ತಾಯಿ-ಬೋರಮ್ಮ. ತುಂಬು ಅವಿಭಕ್ತ ಕುಟುಂಬದ ಹಿನ್ನೆಲೆ. ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆಯಂಥ ಜಾನಪದ ನೃತ್ಯಗಳನ್ನು ಚಿಕ್ಕಂದಿನಲ್ಲೇ ಕಲಿತವರು.

ಸಾಂಸ್ಕೃತಿಕ ಎಚ್ಚರವೊಂದನ್ನು ಮೈಗೂಡಿಸಿಕೊಂಡೇ ಬಂದ ರಾಜಕಾರಣಿ ಅವರು. ಅದು ಅವರ ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದು. ಆನಂತರದ ರಾಜಕಾರಣದಲ್ಲೂ ಅದು ಅವರ ಜೊತೆಜೊತೆಗೇ ಉಳಿದಿದೆ. ಕೋಮುವಾದದೊಂದಿಗೆ ಎಂದೂ ಯಾವುದೇ ರಾಜಿ ಮಾಡಿಕೊಳ್ಳದೆ, ಜಾತ್ಯತೀತ ಬದ್ಧತೆಯನ್ನು ಎಂದೂ ಬಿಟ್ಟುಕೊಡದವರು ಅವರೆಂಬುದು ಅಷ್ಟೇ ಮುಖ್ಯ. ಖಡಕ್ ಮಾತಿನ, ನಿಷ್ಠುರ ನಡವಳಿಕೆಯ ಸಿದ್ದರಾಮಯ್ಯ ನೇರವಂತಿಕೆ ಇಂದಿನ ಗೋದಿ ಮೀಡಿಯಾಗಳಿಗೆ ಆಗಿಬರದ ಸಂಗತಿಯೂ ಹೌದು.

ತಮ್ಮ ಮತ್ತು ಡಿ.ಕೆ. ಶಿವಕುಮಾರ್ ಮಧ್ಯೆ ಭಿನ್ನಾಭಿಪ್ರಾಯ ಇದೆಯೆಂಬ ವಿಚಾರವನ್ನು ಬೇಕೆಂತಲೇ ದೊಡ್ಡದು ಮಾಡುವ ಬಿಜೆಪಿಯ ಯತ್ನದಲ್ಲಿ ಈ ಮಾಧ್ಯಮಗಳ ಪಾಲೂ ಇಲ್ಲದೇ ಇಲ್ಲ. ಅದರ ಬಗ್ಗೆ ಕೂಡ ಇತ್ತೀಚೆಗೆ ಮಾತನಾಡಿದ್ದ ಅವರು, ‘‘ರಾಜಕೀಯದ ಹುನ್ನಾರದಲ್ಲಿ ಮಾಧ್ಯಮಗಳು ಆಯುಧಗಳಾಗಿ ಬಳಕೆಯಾಗಬಾರದು’’ ಎಂದಿದ್ದರು. ಸಿದ್ದರಾಮಯ್ಯ ಕರ್ನಾಟಕ ರಾಜಕಾರಣದಲ್ಲಿ ಸಾಕ್ಷಿಪ್ರಜ್ಞೆಯಂತೆ ಇರುವವರು. ಇದಕ್ಕೆ ಅವರ ರಾಜಕೀಯ ಅನುಭವ, ತಾತ್ವಿಕ ಬದ್ಧತೆಯ ಜೊತೆಗೆ ಸಾಂಸ್ಕೃತಿಕ ಪ್ರಜ್ಞೆಯೂ ಕಾರಣ.

ಅವರು ಮತ್ತೊಮ್ಮೆ ಈ ರಾಜ್ಯದ ಚುಕ್ಕಾಣಿ ಹಿಡಿಯುತ್ತಿರು ವುದು ಇವತ್ತಿನ ಸನ್ನಿವೇಶದಲ್ಲಿ ಮಹತ್ವದ ವಿದ್ಯಮಾನ. ಕಳೆದ ವರ್ಷ ದಾವಣಗೆರೆಯಲ್ಲಿ ಅವರ 75ನೇ  ಹುಟ್ಟುಹಬ್ಬದ ಅಮೃತ ಮಹೋತ್ಸವ ಸಿದ್ದರಾಮೋತ್ಸವಕ್ಕೆ ಎಲ್ಲರ ನಿರೀಕ್ಷೆ ಮೀರಿ ಬಂದು ಸೇರಿದ ಲಕ್ಷಗಟ್ಟಲೆ  ಜನಸಾಗರದಿಂದಾಗಿ ಅದು ಕರ್ನಾಟಕದ ಇತಿಹಾಸದಲ್ಲೇ ಒಂದು ಅತ್ಯಂತ ಅಪರೂಪದ ರಾಜಕೀಯ ಸಮಾವೇಶವಾಗಿ ದಾಖಲಾಯಿತು.

ಅದು ರಾಜ್ಯಾದ್ಯಂತ ಸಿದ್ದರಾಮಯ್ಯ ಅವರಿಗಿರುವ ಅಪಾರ ಜನಪ್ರಿಯತೆ ಹಾಗೂ ವರ್ಚಸ್ಸಿಗೆ ಬಹುದೊಡ್ಡ ಸಾಕ್ಷಿ.  ಹಾಗಾಗಿಯೇ ಜನತೆ ಅವರಿಂದ ನಿರೀಕ್ಷಿಸುತ್ತಿರುವುದೂ ಬಹಳವಿದೆ ಎಂಬುದೂ ಅಷ್ಟೇ ನಿಜ. 

ಆ ನಿರೀಕ್ಷೆಗಳನ್ನು ಹುಸಿಗೊಳಿಸದೆ ಈಡೇರಿಸಲಿ, ಈ ನಾಡಿನ ಬಡವರ ಬದುಕು ಹಸನಾಗಿಸಲಿ ಎಂದು ಹಾರೈಸೋಣ.

Similar News