×
Ad

ಕಾನೂನು ಸಚಿವ ಹುದ್ದೆ ಕಳೆದುಕೊಂಡ ಕಿರಣ್ ರಿಜಿಜು ಖಾತೆ ಬದಲಾವಣೆ ಬಗ್ಗೆ ಹೇಳಿದ್ದೇನು?

Update: 2023-05-19 17:21 IST

ಹೊಸದಿಲ್ಲಿ: ಕೇಂದ್ರ ಕಾನೂನು ಸಚಿವ ಹುದ್ದೆ ಕಳೆದುಕೊಂಡು ಈಗ ಭೂವಿಜ್ಞಾನಗಳ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಕಿರಣ್ ರಿಜಿಜು, ತಮ್ಮ ಖಾತೆಯ ಬದಲಾವಣೆಯು ಪ್ರಧಾನಿ ನರೇಂದ್ರ ಮೋದಿಯ ದೂರದೃಷ್ಟಿಯ ನಿರ್ಧಾರದ ಭಾಗವಾಗಿದೆ ಹಾಗೂ ಒಂದು ಸಾಮಾನ್ಯ ಪ್ರಕ್ರಿಯೆ ಎಂದು ಹೇಳಿದ್ದಾರೆ.

“ಈ ವರ್ಗಾವಣೆ ಒಂದು ಶಿಕ್ಷೆಯಲ್ಲ, ಇದು ಸರ್ಕಾರದ ಯೋಜನೆಯಾಗಿದೆ,” ಎಂದು ಮಾಧ್ಯಮವೊಂದಕ್ಕೆ ರಿಜಿಜು ಪ್ರತಿಕ್ರಿಯಿಸಿದ್ದಾರೆ.

ರಿಜಿಜು ಸ್ಥಾನಕ್ಕೆ ಅರ್ಜುನ್‌ ರಾಮ್‌ ಮೇಘ್ವಾಲ್‌ ಅವರನ್ನು ಕಾನೂನು ಸಚಿವರನ್ನಾಗಿ ಕೇಂದ್ರ ನೇಮಿಸಿದೆ. ರಿಜಿಜು ಅವರನ್ನು ಕಾನೂನು ಸಚಿವ ಹುದ್ದೆಯಿಂದ ಕೈಬಿಡಲಾಗಿದೆ ಎಂಬ ಸುದ್ದಿ ತಿಳಿಯುತ್ತಲೇ ಹಲವರು ಅವರ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ. ರಿಜಿಜು ಓರ್ವ ವಿಫಲ ಕಾನೂನು ಸಚಿವ ಎಂದು  ಮಣಿಕ್ಕಂ ಠಾಗೋರ್‌ ಹೇಳಿದ್ದಾರೆ.

ಹಿರಿಯ ವಕೀಲ ಕಪಿಲ್‌ ಸಿಬಲ್‌ ಪ್ರತಿಕ್ರಿಯಿಸಿ ಕಾನೂನುಗಳ ಹಿಂದಿನ ವಿಜ್ಞಾನವನ್ನು ಅರ್ಥೈಸುವುದು ಸುಲಭವಲ್ಲ ಎಂದಿದ್ದಾರೆ.

ಭೂ ವಿಜ್ಞಾನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ರಿಜಿಜು ತಮ್ಮ ಹಿಂದಿನ ಸಚಿವಾಲಯದ ಬಗ್ಗೆ ಪ್ರಶ್ನೆಗಳನ್ನು ಕೇಳದಂತೆ ಕೋರಿದ್ದಾರೆ, ಅವುಗಳು ಈಗ ಪ್ರಸ್ತುತವಲ್ಲ ಎಂದೂ ಅವರು ಹೇಳಿದ್ದಾರೆ.

ಜುಲೈ 7, 2021 ರಂದು ರವಿಶಂಕರ್‌ ಪ್ರಸಾದ್‌ ಅವರನ್ನು ಕೈಬಿಟ್ಟು ರಿಜಿಜು ಅವರನ್ನು ಕಾನೂನು ಸಚಿವರನ್ನಾಗಿಸಲಾಗಿತ್ತು. ಅವರನ್ನೇಕೆ ಕಾನೂನು ಸಚಿವ ಹುದ್ದೆಯಿಂದ ಕೈಬಿಡಲಾಗಿದೆ ಎಂದು ತಿಳಿದು ಬಂದಿಲ್ಲವಾದರೂ ನ್ಯಾಯಾಂಗದೊಂದಿಗೆ ಅವರು ದೀರ್ಘ ಕಾಲ ನಡೆಸಿದ ಜಟಾಪಟಿಯ ಹಿನ್ನೆಲೆಯಲ್ಲಿ ಅವರ ವರ್ಗಾವಣೆ ಮಹತ್ವ ಪಡೆದಿದೆ.

Similar News