'ತುಘಲಕ್ ನೋಟಿ'ಗೆ ವಿದಾಯ

Update: 2023-05-20 04:31 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಮತ್ತೊಮ್ಮೆ ಸದ್ದಿಲ್ಲದೆ 'ನೋಟು ಅಮಾನ್ಯೀಕರಣ' ಜಾರಿಗೊಂಡಿದೆ. ಸರಕಾರ 2,000 ರೂ. ಮುಖಬೆಲೆಯ ನೋಟಿನ ಚಲಾವಣೆಯನ್ನು ಹಿಂದಕ್ಕೆ ಪಡೆದುಕೊಳ್ಳುವ ನಿರ್ಧಾರವನ್ನು ಘೋಷಿಸಿದೆ. ದೇಶ ಆರ್ಥಿಕತೆಗೆ ಈ ನೋಟು ಮಾಡಿದ ಗಾಯಗಳನ್ನು ಮುಟ್ಟಿ ನೋಡಿಕೊಳ್ಳುತ್ತಿದೆ. ಈ ಹಿಂದೆ ಮಾಡಿದಂತೆ ಸಾಕ್ಷಾತ್ ಪ್ರಧಾನಿ ನರೇಂದ್ರ ಮೋದಿಯವರೇ 'ಟಿವಿಯ ಮುಂದೆ ಬಂದು' ಈ ನೋಟು ವಾಪಸಾತಿಯನ್ನು ಘೋಷಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು ಜನರು. ಆದರೆ ಈ ಅಮಾನ್ಯೀಕರಣದ ಘೋಷಣೆಯ ಹೊಣೆಯನ್ನು ಆರ್‌ಬಿಐ ತಲೆಗೆ ಕಟ್ಟಲಾಗಿದೆ. ಹೊಸ ನೋಟು ಮುದ್ರಣಗೊಂಡಾಗ ಇದ್ದ ಸಂಭ್ರಮ ಈಗ ಉಳಿದಿಲ್ಲ. ನೋಟಿನ ಬಣ್ಣ ಮುದ್ರಿಸಿದ ಕೆಲವೇ ತಿಂಗಳಲ್ಲಿ ಕರಗಿ ಹೋಗಿತ್ತು. ಮಾಧ್ಯಮಗಳು ಆ ನೋಟಿಗೆ ಅಂಟಿಸಿದ ರೆಕ್ಕೆ ಪುಕ್ಕಗಳು ಸಣ್ಣ ಗಾಳಿಗೇ ಉದುರಿ ಬಿದ್ದಿದ್ದವು. ದೇಶದ ಇತಿಹಾಸದಲ್ಲೇ ಕೆಲವು ಮಾಧ್ಯಮಗಳಿಂದಾಗಿ ಈ ನೋಟು 'ಚಿಪ್ಪು ಸುಲ್ತಾನ'ನೆಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

''2,000 ರೂ. ಮುಖಬೆಲೆಯ ನೋಟಿನಲ್ಲಿ ಚಿಪ್ಪಿದೆ. ಇದನ್ನು ಸಂಗ್ರಹಿಸಿಟ್ಟರೆ ಆ ಚಿಪ್ಪಿನ ಮೂಲಕ ತನಿಖಾಧಿಕಾರಿಗಳಿಗೆ ಮಾಹಿತಿ ಸಿಗುತ್ತದೆ'' ಎಂದು ಮಾಧ್ಯಮ ಭೂಪರು ಸುಳ್ಳುಗಳನ್ನು ಹರಡಿದ್ದರು. ''ನೋಟಿನ ಮೇಲೆ ಮೊಬೈಲ್ ಇಟ್ಟರೆ ಮೋದಿಯ ಭಾಷಣವನ್ನು ಕೇಳಬಹುದು'' ''ನೋಟನ್ನು ಕತ್ತಲಲ್ಲಿ ಇರಿಸಿದರೆ ಅದು ಹೊಳೆಯ ತೊಡಗುತ್ತದೆ. ಆದುದರಿಂದ ಇದನ್ನು ಸಂಗ್ರಹಿಸಿಡುವಂತೆ ಇಲ್ಲ. ಸಂಗ್ರಹಿಸಿಟ್ಟರೂ ಗೊತ್ತಾಗಿ ಬಿಡುತ್ತದೆ'' ''ಭೂಮಿಯ ಆಳದಲ್ಲಿ ಬಚ್ಚಿಟ್ಟರೂ ತನಿಖಾ ಸಂಸ್ಥೆಗಳು ಗುರುತಿಸುವಂತಹ ತಂತ್ರಜ್ಞಾನವನ್ನು ಅಳವಡಿಸಲಾಗಿದೆ'' ಎಂಬಿತ್ಯಾದಿ ಸುಳ್ಳುಗಳ ಕಂತೆಗಳ ಮೂಲಕವೇ ಈ ನೋಟಿನ ಮೌಲ್ಯವನ್ನು ಹೆಚ್ಚಿಸುವ ಪ್ರಯತ್ನ ನಡೆಯಿತು. ಹೀಗೆ ಮಾಧ್ಯಮಗಳು ಈ ನೋಟಿನ ಮಹಿಮೆಯನ್ನು ವರ್ಣಿಸುತ್ತಿರುವ ಎರಡೇ ತಿಂಗಳಲ್ಲಿ 2,000 ರೂ. ಮುಖಬೆಲೆಯ ನಕಲಿ ನೋಟುಗಳು ದೇಶದ ಹಲವೆಡೆ ಪತ್ತೆಯಾದವು. ಮಾಮೂಲಿ ಕಲರ್ ಜೆರಾಕ್ಸ್ ಮಶಿನ್‌ನಲ್ಲಿ ಈ ನೋಟುಗಳನ್ನು ಮುದ್ರಿಸಿ, ಜನಸಾಮಾನ್ಯರಿಗೆ ಹಂಚಿ ವಂಚಿಸಿದ ಪ್ರಕರಣಗಳು ಬೆಳಕಿಗೆ ಬಂದವು. 2,000 ರೂ. ಮುಖಬೆಲೆಯ ನೋಟುಗಳು ಕಪ್ಪು ಹಣವನ್ನು ಇಲ್ಲವಾಗಿಸುವ ಬದಲು ಅದನ್ನು ದುಪ್ಪಟ್ಟುಗೊಳಿಸಲು ಸಹಾಯ ಮಾಡತೊಡಗಿತು. ಮುಹಮ್ಮದ್ ಬಿನ್ ತುಘಲಕ್ ತನ್ನ ಆಡಳಿತದಲ್ಲಿ ಜಾರಿಗೊಳಿಸಿದ ಚರ್ಮದ ನಾಣ್ಯದ ಸ್ಥಿತಿಗಿಂತಲೂ ಹೀನಾಯವಾಯಿತು 2,000 ರೂ.ಮುಖಬೆಲೆಯ ನೋಟಿನ ಸ್ಥಿತಿ.

2016ರಿಂದ 2020ರ ನಡುವೆ ನಾಲ್ಕು ವರ್ಷಗಳಲ್ಲಿ 2,000 ರೂ.ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆಯಲ್ಲಿ 107 ಪಟ್ಟು ಹೆಚ್ಚಳವಾಗಿದ್ದವು ಎನ್ನುವ ಅಂಕಿಅಂಶವನ್ನು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಯಲ್ಲಿ ಈ ಹಿಂದೆ ಬಹಿರಂಗ ಪಡಿಸಿದ್ದರು. 2016ರಲ್ಲಿ 2,000 ರೂ.ಮುಖಬೆಲೆಯ 2,272 ನಕಲಿ ನೋಟುಗಳು ಪತ್ತೆಯಾಗಿದ್ದರೆ, 2017ರಲ್ಲಿ 74,898 ನೋಟುಗಳು ಪತ್ತೆಯಾಗಿದ್ದವು. 2018ರಲ್ಲಿ 54,776 ನಕಲಿ ನೋಟುಗಳು ಪತ್ತೆಯಾಗಿದ್ದರೆ, 90,566 ನೋಟುಗಳು 2019ರಲ್ಲಿ ಬೆಳಕಿಗೆ ಬಂದಿದ್ದವು. 2020ರಲ್ಲಿ ಇದು 2,44,834ಕ್ಕೆ ತಲುಪಿತ್ತು. ಇವೆಲ್ಲವೂ ಸರಕಾರದ ಅಧಿಕೃತ ಅಂಕಿಅಂಶಗಳಲ್ಲಿ ಬಯಲಾದ ನೋಟುಗಳ ಸಂಖ್ಯೆ ಎನ್ನುವುದನ್ನು ನೆನಪಿನಲ್ಲಿಡಬೇಕು. ಸರಕಾರದ ಗಮನಕ್ಕೆ ಬರದೇ 2,000 ರೂ. ಮುಖಬೆಲೆಯ ನಕಲಿ ನೋಟುಗಳು ಅದಾಗಲೇ ದೇಶದ ಎಲ್ಲ ಆಯಕಟ್ಟಿನ ಜಾಗದಲ್ಲಿ ಚಲಾವಣೆಗೆ ತೊಡಗಿದ್ದವು. ಯಾವುದು ಅಸಲಿ, ಯಾವುದು ನಕಲಿ ಎನ್ನುವುದು ನಿರ್ಧರಿಸುವುದೇ ಕಷ್ಟ ಎನ್ನುವ ಸ್ಥಿತಿ ಸರಕಾರಕ್ಕೆ ನಿರ್ಮಾಣವಾಯಿತು. ಈ ಕಾರಣಕ್ಕೆ ನೋಟುಗಳನ್ನು ಮುದ್ರಿಸದೇ ಇರುವುದು ಸರಕಾರಕ್ಕೆ ಅನಿವಾರ್ಯವಾಯಿತು. ಎರಡು ವರ್ಷಗಳ ಹಿಂದೆಯೇ ಈ ನೋಟುಗಳನ್ನು ಹಿಂದಕ್ಕೆ ಪಡೆಯುವ ಯೋಜನೆಗೆ ಚಾಲನೆ ದೊರಕಿತ್ತು. 2,000 ರೂ. ಮುಖಬೆಲೆಯ ನೋಟುಗಳನ್ನು ಸರಕಾರ ಚಲಾವಣೆಗೆ ಬಿಟ್ಟಿರುವುದೇ ಕಪ್ಪು ಹಣ ಮಟ್ಟ ಹಾಕುವುದಕ್ಕಾಗಿ. ಅದೇ ಸರಕಾರ ಕೆಲವೇ ವರ್ಷಗಳಲ್ಲಿ, 2,000 ರೂ. ಮುಖಬೆಲೆಯ ನೋಟಿನಿಂದಾಗಿ ದೇಶದಲ್ಲಿ ಕಾಳ ವ್ಯವಹಾರಗಳು ಹೆಚ್ಚಿವೆ ಎನ್ನುವುದನ್ನು ಒಪ್ಪಿಕೊಂಡಿತು.

2,000 ರೂ. ಮುಖಬೆಲೆಯ ನೋಟುಗಳನ್ನು ಕೂಡಲೇ ಹಿಂದೆಗೆಯಬೇಕು ಎನ್ನುವ ಒತ್ತಾಯವನ್ನು ಬಿಜೆಪಿಯ ಸಂಸದ ಸುಶೀಲ್ ಕುಮಾರ್ ಮೋದಿಯವರು ರಾಜ್ಯಸಭೆಯಲ್ಲಿ ಮಾಡಿದ್ದರು. ''2,000 ರೂ. ಮುಖಬೆಲೆ ನೋಟುಗಳು ಅಕ್ರಮ ಹಣ ವರ್ಗಾವಣೆ, ಭಯೋತ್ಪಾದನೆ ನಿಧಿ, ಮಾದಕ ವಸ್ತು ಕಳ್ಳಸಾಗಣೆಗೆ ವ್ಯಾಪಕವಾಗಿ ಬಳಕೆಯಾಗುತ್ತಿವೆ. ಆದುದರಿಂದ ಈ ನೋಟನ್ನು ರದ್ದುಗೊಳಿಸಬೇಕು. ಹಂತ ಹಂತವಾಗಿ ಜನರಿಂದ ಈ ನೋಟನ್ನು ವಾಪಸ್ ಪಡೆಯಬೇಕು'' ಎಂದು ಮೋದಿ ರಾಜ್ಯಸಭೆಯಲ್ಲಿ ಒತ್ತಾಯಿಸಿದ್ದರು. ಕಪ್ಪು ಹಣ ನಿಷೇಧ, ಭಯೋತ್ಪಾದನೆ ನಿಗ್ರಹಗಳ ನೆಪದಲ್ಲಿ ಜಾರಿಗೆ ಬಂದ ನೋಟೊಂದು, ನಿಧಾನಕ್ಕೆ ಕಪ್ಪು ಹಣ ಚಲಾವಣೆಗೆ ನೆರವಾದುದು ಏನನ್ನು ಹೇಳುತ್ತದೆ? ಈ ನೋಟನ್ನು ಚಲಾವಣೆಗೆ ತರುವ ಮೂಲಕ ದೇಶದಲ್ಲಿ ಕಪ್ಪು ಹಣ ಚಲಾವಣೆ ಹೆಚ್ಚಲು ಸಹಕರಿಸಿದ ಆರೋಪವನ್ನು ಹೊತ್ತುಕೊಂಡಿರುವ ಮೋದಿಯವರೇ ದೇಶ ಮುಂದೆ ನೋಟು ಹಿಂದೆಗೆಯುವ ನಿರ್ಧಾರವನ್ನು ಪ್ರಕಟಿಸಿದ್ದಿದ್ದರೆ ಅದು ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ನಮ್ಮಿಂದ 2,000 ರೂ. ಮುಖಬೆಲೆಯ ನೋಟು ವಿದಾಯ ಹೇಳುತ್ತಿರುವ ಸಂದರ್ಭದಲ್ಲೇ, ಈ ನೋಟನ್ನು ಜನರ ಮೇಲೆ ಯಾಕೆ ಹೇರಲಾಯಿತು? ಎನ್ನುವ ಪ್ರಶ್ನೆಗೆ ಮೋದಿಯವರು ಸ್ಪಷ್ಟೀಕರಣ ನೀಡಬೇಕು.

ಜನಸಾಮಾನ್ಯರು ದೈನಂದಿನ ಬದುಕಿನಲ್ಲಿ ಬಳಸುತ್ತಿದ್ದ 500 ರೂ. ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಏಕಾಏಕಿ ನಿಷೇಧಿಸಿದಾಗ ಎದುರಾದ ಮೊದಲ ಸಮಸ್ಯೆ 'ನೋಟುಗಳ ಕೊರತೆ'. ಆಗಿನ್ನೂ ಹೊಸ 500 ರೂ. ಮುಖಬೆಲೆಯ ನೋಟು ಮುದ್ರಣವಾಗಿ ಹೊರ ಬಿದ್ದಿರಲೇ ಇಲ್ಲ. 1,000 ರೂ. ಮುಖಬೆಲೆಯ ನೋಟು ನಿಷೇಧಿಸಿರುವ ಕಾರಣದಿಂದಾಗಿ 500 ರೂ. ಮತ್ತು 100 ರೂ. ನೋಟುಗಳನ್ನು ಬಳಕೆ ಮಾಡುವವರ ಸಂಖ್ಯೆ ಹೆಚ್ಚಿತ್ತು. ದುಬಾರಿ ವೆಚ್ಚದಲ್ಲಿ ಹೆಚ್ಚು ನೋಟುಗಳನ್ನು ಮುದ್ರಿಸುವ ಸವಾಲನ್ನು ಎದುರಿಸಲಾಗದೆ ತುರ್ತಾಗಿ 2,000 ರೂ. ಮುಖಬೆಲೆಯ ಕಳಪೆ ನೋಟುಗಳನ್ನು ಸರಕಾರ ಹೊರ ತಂದು ತಕ್ಷಣದ ಬಿಕ್ಕಟ್ಟಿನಿಂದ ಪಾರಾಗುವ ಪ್ರಯತ್ನ ನಡೆಸಿತು. ಆತುರಾತುರವಾಗಿ ಮುದ್ರಿಸಿದ ನೋಟು ಇದಾಗಿದ್ದುದರಿಂದ ಅದರ ಗುಣಮಟ್ಟದ ಕುರಿತಂತೆ ಹಲವು ದೂರುಗಳಿದ್ದವು. ಮುಖ್ಯವಾಗಿ ಅದರ ಬಣ್ಣ ಕೈಗೆ ಅಂಟಿಕೊಳ್ಳುತ್ತಿತ್ತು. ಒದ್ದೆಯಾದರೆ ಮತ್ತೆ ಉಪಯೋಗಿಸುವಂತೆಯೂ ಇರಲಿಲ್ಲ. ನಕಲಿ ನೋಟು ಮುದ್ರಿಸುವವರಿಗೆ ಈ ನೋಟುಗಳು ಹೆಚ್ಚು ಅನುಕೂಲವನ್ನು ಮಾಡಿಕೊಟ್ಟಿತು. ಎಲ್ಲಕ್ಕಿಂತ ಮುಖ್ಯವಾಗಿ, ಕಪ್ಪು ಹಣ ದಾಸ್ತಾನು ಮಾಡವವರಿಗೆ 2,000 ರೂ. ಮುಖಬೆಲೆಯ ನೋಟು ಇನ್ನಷ್ಟು ಅನುಕೂಲಗಳನ್ನು ಮಾಡಿಕೊಟ್ಟಿತು. ಈ ನೋಟಿನ ಮೂಲಕವೇ ಈ ದೇಶದ ಸಹಸ್ರಾರು ಕೋಟಿ ಕಪ್ಪು ಹಣ ಬಿಳಿಯಾಯಿತು ಎನ್ನುವ ಆರೋಪಗಳಿವೆ.

ಈ ದೇಶದ ಆರ್ಥಿಕತೆಯನ್ನೇ ಬುಡಮೇಲು ಗೊಳಿಸಿದ ನೋಟು ನಿಷೇಧವೆನ್ನುವ ಅವಸರದ ನಿರ್ಧಾರದಿಂದಾಗಿ ಭಾರತ ಅಭಿವೃದ್ಧಿಯಲ್ಲಿ ಹಿಂದಕ್ಕೆ ಚಲಿಸಿತು. ಈ ದೇಶದ ಕೋಟ್ಯಂತರ ಜನರು, ಕಪ್ಪು ಹಣ ಇಲ್ಲವಾಗುತ್ತದೆ, ನಕಲಿ ನೋಟುಗಳು ಅಳಿದು ಹೋಗುತ್ತವೆ, ಭಯೋತ್ಪಾದನೆಗಳು ಇಳಿಮುಖವಾಗುತ್ತವೆ ಎನ್ನುವ ಮೋದಿಯ ಭರವಸೆಯನ್ನು ನಂಬಿ ಬೀದಿಗೆ ಬಿದ್ದರೂ ನೋಟುನಿಷೇಧ ನಿರ್ಧಾರವನ್ನು ಪ್ರಶ್ನಿಸಿರಲಿಲ್ಲ. ಅವರ ತ್ಯಾಗ, ಬಲಿದಾನಗಳನ್ನು ಅಣಕಿಸುವಂತೆ ಇದೀಗ 2,000 ರೂ. ಮುಖಬೆಲೆಯ ನೋಟು ದೇಶಕ್ಕೆ ವಿದಾಯ ಹೇಳಲು ಮುಂದಾಗಿದೆ. ಕನಿಷ್ಠ ಈ ಹೊತ್ತಿನಲ್ಲಾದರೂ, ನೋಟು ನಿಷೇಧದ ಕಾರಣದಿಂದ ಈ ದೇಶಕ್ಕಾದ ಲಾಭದ ಬಗ್ಗೆ ಪ್ರಧಾನಿ ಮೋದಿ ಜನರಿಗೆ ಸ್ಪಷ್ಟೀಕರಣ ನೀಡಬೇಕಾಗಿದೆ. ಅವಸರವಸರವಾಗಿ 2000 ರೂ. ಮುಖಬೆಲೆಯ ನೋಟನ್ನು ಯಾಕೆ ಮುದ್ರಿಸಲಾಯಿತು ಮತ್ತು ಇದೀಗ ಅದನ್ನು ಯಾಕೆ ಹಿಂದೆಗೆಯಲಾಗುತ್ತಿದೆ ಎನ್ನುವುದನ್ನು ದೇಶಕ್ಕೆ ಸ್ಪಷ್ಟ ಪಡಿಸಬೇಕು.

Similar News