ಐಪಿಎಲ್: ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಜಯಭೇರಿ

ದೇವದತ್ತ ಪಡಿಕ್ಕಲ್, ಯಶಸ್ವಿ ಜೈಸ್ವಾಲ್ ಅರ್ಧಶತಕ

Update: 2023-05-19 18:00 GMT

 ಧರ್ಮಶಾಲಾ, ಮೇ 19: ದೇವದತ್ತ ಪಡಿಕ್ಕಲ್(51 ರನ್, 30 ಎಸೆತ) ಹಾಗೂ ಯಶಸ್ವಿ ಜೈಸ್ವಾಲ್(50 ರನ್,36 ಎಸೆತ) ಅರ್ಧಶತಕದ ಕೊಡುಗೆಯ ನೆರವಿನಿಂದ ಐಪಿಎಲ್‌ನ 66ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು 4 ವಿಕೆಟ್‌ಗಳ ಅಂತರದಿಂದ ಮಣಿಸಿತು.

   ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 188 ರನ್ ಗುರಿ ಪಡೆದಿದ್ದ ರಾಜಸ್ಥಾನ 19.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು.

ಶಿಮ್ರನ್ ಹೆಟ್ಮೆಯರ್(46 ರನ್, 28 ಎಸೆತ) ,ರಿಯಾನ್ ಪರಾಗ್(20 ರನ್, 12 ಎಸೆತ)ಹಾಗೂ ಧ್ರುವ್ ಜುರೆಲ್(ಔಟಾಗದೆ 10) ಎರಡಂಕೆಯ ಸ್ಕೋರ್ ಗಳಿಸಿದರು.

  ಪಂಜಾಬ್ ಪರ ಕಾಗಿಸೊ ರಬಾಡ(2-40)ಯಶಸ್ವಿ ಬೌಲರ್ ಎನಿಸಿಕೊಂಡರು. 14ನೇ ಪಂದ್ಯದಲ್ಲಿ 7ನೇ ಗೆಲುವು ದಾಖಲಿಸಿರುವ ರಾಜಸ್ಥಾನ 14 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಆಲ್‌ರೌಂಡರ್ ಸ್ಯಾಮ್ ಕರನ್(ಔಟಾಗದೆ 49, 31 ಎಸೆತ), ಜಿತೇಶ್ ಶರ್ಮಾ(44 ರನ್, 28 ಎಸೆತ) ಹಾಗೂ ಶಾರೂಖ್ ಖಾನ್(ಔಟಾಗದೆ 41 ರನ್, 23 ಎಸೆತ)ಅವರ ಸಂಘಟಿತ ಪ್ರಯತ್ನದ ಫಲವಾಗಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್ ಕಲೆ ಹಾಕಿತು.

 ಇನಿಂಗ್ಸ್‌ನ 2ನೇ ಎಸೆತದಲ್ಲಿ ಆರಂಭಿಕ ಬ್ಯಾಟರ್ ಪ್ರಭ್‌ಸಿಮ್ರನ್ ಸಿಂಗ್(2 ರನ್)ರನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡಿದ್ದರೂ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್ ಕಲೆ ಹಾಕಿತು.
ರಾಜಸ್ಥಾನದ ಬೌಲಿಂಗ್‌ನಲ್ಲಿ ನವದೀಪ್ ಸೈನಿ(3-40)ಯಶಸ್ವಿ ಬೌಲರ್ ಎನಿಸಿಕೊಂಡಿದ್ದು, ಆ್ಯಡಮ್ ಝಾಂಪ(1-26) ಹಾಗೂ ಟ್ರೆಂಟ್ ಬೌಲ್ಟ್(1-35)ತಲಾ ಒಂದು ವಿಕೆಟ್‌ಗಳನ್ನು ಪಡೆದರು.

ಪಂಜಾಬ್ ಓಪನರ್ ಪ್ರಭ್‌ಸಿಮ್ರಾನ್ ಬೇಗನೆ ಔಟಾದಾಗ ನಾಯಕ ಶಿಖರ್ ಧವನ್(17 ರನ್, 12 ಎಸೆತ) ಹಾಗೂ ಅಥರ್ವ ಟೈಡ್(19 ರನ್, 12 ಎಸೆತ) 2ನೇ ವಿಕೆಟಿಗೆ 36 ರನ್ ಸೇರಿಸಿ ಇನಿಂಗ್ಸ್ ರಿಪೇರಿಗೆ ಯತ್ನಿಸಿದರು. ಆದರೆ, ಅಥರ್ವ, ಧವನ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್(9ರನ್)ಬೆನ್ನುಬೆನ್ನಿಗೆ ಔಟಾದಾಗ ಪಂಜಾಬ್ 50 ರನ್‌ಗೆ 4 ವಿಕೆಟ್ ಕಳೆದುಕೊಂಡಿತು.

 ಆಗ 5ನೇ ವಿಕೆಟ್‌ಗೆ 64 ರನ್ ಜೊತೆಯಾಟ ನಡೆಸಿದ ಕರನ್ ಹಾಗೂ ಜಿತೇಶ್ ಶರ್ಮಾ(44ರನ್)ತಂಡವನ್ನು ಆಧರಿಸಿದರು. ಶರ್ಮಾ ನಿರ್ಗಮನದ ನಂತರ ಶಾರೂಖ್ ಖಾನ್(ಔಟಾಗದೆ 41 ರನ್)ಜೊತೆಗೆ 6ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 73 ರನ್ ಸೇರಿಸಿದ ಕರನ್ ತಂಡದ ಮೊತ್ತವನ್ನು 5 ವಿಕೆಟ್ ನಷ್ಟಕ್ಕೆ 187ಕ್ಕೆ ತಲುಪಿಸಿದರು.
 

Similar News