ಸಿವಿಲ್ ವಿಚಾರಣಾ ನ್ಯಾಯಾಧೀಶರಿಗೆ ಇನ್ನು ನಾಗರಿಕ ಸೇವಾ ಅಧಿಕಾರಿಗಳ ವೇತನಕ್ಕೆ ಸಮಾನ ಸಂಬಳ

Update: 2023-05-20 05:28 GMT

ಹೊಸದಿಲ್ಲಿ: ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿತ್ತೀಯ ಸಂಪನ್ಮೂಲ ಕೊರತೆಯ ನೆಪವನ್ನು ಶುಕ್ರವಾರ ತಳ್ಳಿಹಾಕಿದ ಸುಪ್ರೀಂಕೋರ್ಟ್, ದೇಶದ ನ್ಯಾಯಾಂಗ ವ್ಯವಸ್ಥೆಯ ಕೆಳಹಂತದಲ್ಲಿರುವ 20 ಸಾವಿರಕ್ಕೂ ಅಧಿಕ ನ್ಯಾಯಾಧೀಶರ ಮುಖದಲ್ಲಿ ಮಂದಹಾಸಕ್ಕೆ ಕಾರಣವಾಗುವ ಮಹತ್ವದ ತೀರ್ಪು ನೀಡಿದೆ.

ನ್ಯಾಯಾಂಗ ಅಧಿಕಾರಿಗಳಿಗೆ ಕೇಂದ್ರೀಯ ನಾಗರಿಕ ಸೇವಾ ಅಧಿಕಾರಿಗಳ ವೇತನಕ್ಕೆ ಸಮಾನವಾದ ವೇತನ ನೀಡಬೇಕು ಎಂದು ನಿರ್ದೇಶನ ನೀಡಿ, ವೇತನವನ್ನು 2.8 ಪಟ್ಟು ಹೆಚ್ಚಿಸಿದೆ.

ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೆ ಹಣಕಾಸು ಸ್ವಾತಂತ್ರ್ಯ ಎಷ್ಟು ಮುಖ್ಯವೋ ವಿಚಾರಣಾ ನ್ಯಾಯಾಧೀಶರಿಗೂ ಅದು ಅನ್ವಯವಾಗುತ್ತದೆ ಎಂದು ತೀರ್ಪು ನೀಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯೂಮೂರ್ತಿಗಳಾದ ವಿ.ರಾಮಸುಬ್ರಹ್ಮಣ್ಯನ್ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ, 2016ರ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಈ ವೇತನ ಶ್ರೇಣಿಯನ್ನು ಜಾರಿಗೊಳಿಸಬೇಕು ಎಂದು ಸೂಚಿಸಿದೆ. ಇದರ ಅನುಸರಣೆ ಬಗ್ಗೆ ಜುಲೈ 30ರ ಒಳಗೆ ಅಫಿಡವಿಟ್ ಸಲ್ಲಿಸುವಂತೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ನೀಡಿದೆ. ಜೂನ್ 30ರೊಳಗೆ ಹೆಚ್ಚುವರಿ ವೇತನವನ್ನು ಎಲ್ಲ 20 ಸಾವಿರ ನ್ಯಾಯಾಂಗ ಅಧಿಕಾರಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಿದ ಬಗ್ಗೆ ವರದಿ ಸಲ್ಲಿಸುವಂತೆ ಆದೇಶಿಸಿದೆ.

ಎರಡನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗದ ಶಿಫಾರಸ್ಸುಗಳ ಬಗ್ಗೆ ಎಮಿಕಸ್ ಕ್ಯೂರಿ ಕೆ.ಪರಮೇಶ್ವರ್ ನೀಡಿದ ಸಲಹೆಯನ್ನು ಬಹುತೇಕ ಒಪ್ಪಿಕೊಂಡಿರುವ ಸುಪ್ರೀಂಕೋರ್ಟ್, ನ್ಯಾಯಾಂಗ ಅಧಿಕಾರಿಗಳ ವೇತನ ಪರಿಷ್ಕರಣೆ ಆಗಿರುವುದು 2006ರಲ್ಲಿ. ಕೇಂದ್ರ ಸರ್ಕಾರ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು 2016ರ ಜನವರಿ 1ರಿಂದ ಅನ್ವಯವಾಗುವಂತೆ ಜಾರಿಗೊಳಿಸಿದೆ ಎಂದು ಉಲ್ಲೇಖಿಸಿದೆ.

ದೇಶದಲ್ಲಿ ಪ್ರಸ್ತುತ 25 ಸಾವಿರ ನ್ಯಾಯಾಂಗ ಅಧಿಕಾರಿಗಳ ಹುದ್ದೆಗಳಿದ್ದು, ಈ ಪೈಕಿ 5 ಸಾವಿರ ಖಾಲಿ ಇದೆ. ವಿಚಾರಣಾ ನ್ಯಾಯಾಲಯದ ಹಂತದಲ್ಲಿ ದೇಶಾದ್ಯಂತ ಸುಮಾರು 4.1 ಕೋಟಿ ಪ್ರಕರಣಗಳು ಬಾಕಿ ಇವೆ. ನ್ಯಾಯಾಂಗ ಅಧಿಕಾರಿಗಳು ನಿವೃತ್ತಿಯಾಗುವ ವೇಳೆ ಅವರ ಪಿಂಚಣಿಯನ್ನು 2.2 ಲಕ್ಷ ಎಂದೂ ಸುಪ್ರೀಂಕೋರ್ಟ್ ನಿಗದಿಪಡಿಸಿದೆ.

Similar News