ಪುತ್ತೂರು ಪೊಲೀಸರಿಂದ ದೌರ್ಜನ್ಯ ಪ್ರಕರಣ: ಗಾಯಾಳುಗಳನ್ನು ಭೇಟಿ ಮಾಡಿದ ಪುತ್ತೂರು ಶಾಸಕ ಅಶೋಕ್ ರೈ

Update: 2023-05-21 16:19 GMT

ಪುತ್ತೂರು: ನಳಿನ್ ಕುಮಾರ್ ಕಟೀಲ್ ಮತ್ತು ಡಿ.ವಿ ಸದಾನಂದ ಗೌಡ ಅವರ  ಬ್ಯಾನರ್ ಅಳವಡಿಸಿ ಅದಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣದಕ್ಕೆ ಸಂಬಂಧಿಸಿ ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾಗಿ ಪುತ್ತೂರಿನ ಆಸ್ಪತ್ರೆಯಲ್ಲಿ ದಾಖಲಾಗಿರುವ ಅಭಿ ಯಾನೆ ಅವಿನಾಶ್ ಮತ್ತು ಗುರುಪ್ರಸಾದ್ ಅವರನ್ನು ರವಿವಾರ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. 

ಈ ಸಂದರ್ಭದಲ್ಲಿ ತಮ್ಮ ಮೇಲೆ ನಡೆದ ಹಲ್ಲೆಯ ಬಗ್ಗೆ ತಿಳಿಸಿದ ಗಾಯಾಳುಗಳು ನಮ್ಮನ್ನು ಕೋಣೆಯೊಳಗೆ ಕೂಡಿ ಹಾಕಿ ಥಳಿಸಿ, ಪೊಲೀಸರು ಹಿಂಸಾತ್ಮ ರೀತಿಯಲ್ಲಿ ವರ್ತಿಸಿದ್ದಾರೆ. ಡಿವೈಎಸ್ಪಿಯವರೇ ಹೆಚ್ಚು ಹೊಡೆದ್ದು, ಅಮಾನವೀಯತೆಯಿಂದ ವರ್ತಿಸಿದ ಅವರು ಹಲ್ಲೆ ಮಾಡಿದ್ದಾರೆ. ಹೊಡೆದು ರಕ್ತ ಬರುತ್ತಿದ್ದರೂ ಬಿಡದೆ ಹೊಡೆದಿದ್ದಾರೆ. ಪೊಲೀಸರ ಹಲ್ಲೆಯಿಂದ ನಮ್ಮಲ್ಲಿ ಒಬ್ಬರ ಕಿವಿಗೆ ಹಾನಿಯಾಗಿದ್ದು ಕಿವಿ ಕಿವುಡಾಗಿದೆ ಎಂದು ಶಾಸಕರಲ್ಲಿ ನೋವು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ದೌರ್ಜನ್ಯ ನಡೆಸಿದ ಇಬ್ಬರನ್ನು ಅಮಾನತು ಮಾಡಲಾಗಿದೆ, ಒಬ್ಬರನ್ನು ರಜೆಯ ಮೇಲೆ ಕಳುಹಿಸಲಾಗಿದೆ. ಘಟನೆ ಗೊತ್ತಾದ ತಕ್ಷಣವೇ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಕೂಡಲೇ ಆಂತರಿಕ ತನಿಖೆ ನಡೆಸಿ ವರದಿ ಪಡೆದುಕೊಂಡಿದ್ದೆ. ದೌರ್ಜನ್ಯ ನಡೆದಿದೆ ಎಂದು ತಿಳಿದಾಕ್ಷಣ ಗ್ರಾಮಾಂತರ ಪಿಎಸ್‍ಐ ಮತ್ತು ಗ್ರಾಮಾಂತರ ಠಾಣೆಯ ಪಿಸಿಯವರ ಮೇಲೆ ಎಫ್‍ಐಆರ್ ದಾಖಲಿಸಿ ಇಬ್ಬರನ್ನೂ ಅಮಾನತು ಮಾಡಿಸಿದ್ದೇನೆ. ಎಡಿಜಿಪಿ ಅಲೋಕ್ ಕುಮಾರ್ ಜೊತೆ ಮಾತುಕತೆ ನಡೆಸಿ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ತಿಳಿಸಿದ್ದೇನೆ ಎಂದು ಹೇಳಿದರು. ಒತ್ತಡ ಹಾಕುವ ಮೂಲಕ ನಿಮ್ಮ ಮೇಲೆ ದೌರ್ಜನ್ಯ ನಡೆದಿದೆ. ಯಾರು ಒತ್ತಡ ಹಾಕಿದವರೆಂದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಎಂದೂ ಇಂಥಹ ಕೃತ್ಯವನ್ನು ಮಾಡಿಸಿಲ್ಲ, ಮಾಡಿಸುವುದೂ ಇಲ್ಲ ಇದರಲ್ಲಿ ನಮ್ಮ ಪಾತ್ರವೇನು ಇಲ್ಲ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ. ರಾಜಾರಾಂ ಉಪಸ್ಥಿತರಿದ್ದರು.

Similar News