ಭಾರತದ ವರ್ಚಸ್ಸನ್ನು ನೂತನ ಸಂಸತ್ ಎತ್ತಿ ಹಿಡಿದೀತೆ?

Update: 2023-05-22 04:35 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಬೃಹತ್ ಪ್ರತಿಮೆ, ಬುಲೆಟ್ ಟ್ರೈನ್, ಬೃಹತ್ ಮಂದಿರ...ಭಾರತವನ್ನು ವಿಶ್ವದಲ್ಲೇ ಬೃಹತ್ತಾಗಿಸುವ ಭಾಗವೆಂಬಂತೆ ಅಂತಿಮವಾಗಿ ಸುಮಾರು ೯೭೦ ಕೋಟಿ ರೂ. ವೆಚ್ಚದ ನೂತನ ಸಂಸತ್ ನಿರ್ಮಾಣಕ್ಕೆ ಮೂರು ವರ್ಷಗಳ ಹಿಂದೆ ಪ್ರಧಾನಿ ಚಾಲನೆ ನೀಡಿದಾಗ ಅದರ ವಿರುದ್ಧ ಸಾಕಷ್ಟು ಟೀಕೆ, ಟಿಪ್ಪಣಿಗಳು ವ್ಯಕ್ತವಾಗಿದ್ದವು. ನೋಟು ನಿಷೇಧ, ಲಾಕ್‌ಡೌನ್, ಕೊರೋನ ಮೊದಲಾದ ಆಘಾತಗಳಿಂದ ತತ್ತರಿಸಿ ಕೂತಿರುವ ಭಾರತಕ್ಕೆ ಹೀಗೊಂದು ವೈಭವಯುತ ನೂತನ ಸಂಸತ್‌ನ ಅಗತ್ಯವಿದೆಯೆ? ಎನ್ನುವ ಪ್ರಶ್ನೆಯನ್ನು ಹಲವರು ಎಸೆದಿದ್ದರು. ಭಾರತವನ್ನು ವಿಶ್ವಗುರುವಾಗಿಸಲೆಂದೇ ಹೊರಟ ಪ್ರಧಾನಿಗೆ, ಅವರ ವ್ಯಕ್ತಿತ್ವಕ್ಕೆ ತಕ್ಕ ಸಂಸತ್ ಭವನದ ಅಗತ್ಯವಿದೆ ಎನ್ನುವ ಕಾರಣಕ್ಕಾಗಿಯೇ ತುರ್ತಾಗಿ ನೂತನ ಸಂಸತ್ ಭವನ ನಿರ್ಮಾಣ ಮಾಡಲಾಯಿತೆ ಎನ್ನುವ ವ್ಯಂಗ್ಯ ಹಲವು ದಿಕ್ಕುಗಳಿಂದ ತೂರಿ ಬಂದವು. ಪ್ರಧಾನಿಯನ್ನು ಪ್ರಶ್ನಿಸುವ, ಟೀಕಿಸುವ ಅವಕಾಶಗಳೇ ಇಲ್ಲವಾಗುತ್ತಿರುವ ದಿನಗಳಲ್ಲಿ, ಸಂಸತ್‌ಭವನವನ್ನು ಅದೆಷ್ಟು ಭವ್ಯವಾಗಿ ಕಟ್ಟಿದರೂ ಅದು ಪ್ರಜಾಸತ್ತೆಯ ಹಿರಿಮೆಯನ್ನು ಅಭಿವ್ಯಕ್ತಿಸುವುದಿಲ್ಲ ಎಂಬ ಅನಿಸಿಕೆಯನ್ನು ಹಲವರು ವ್ಯಕ್ತಪಡಿಸಿದ್ದರು. ದೇಶದ ಜನತೆ ಲಾಕ್‌ಡೌನ್‌ನಿಂದ ಮನೆಮಠಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದರೆ, ಇತ್ತ ಪ್ರಧಾನಿ ಮೋದಿಯವರು ಅದ್ದೂರಿ ಸಂಸತ್ ಭವನದ ನಿರ್ಮಾಣದಲ್ಲಿ ಮೈ ಮರೆತಿರುವುದನ್ನು ಹಲವರು ‘ರೋಮ್‌ಗೆ ಬೆಂಕಿ ಬಿದ್ದಾಗ, ಪಿಟೀಲು ಬಾರಿಸುತ್ತಿದ್ದ ನೀರೋ’ಗೆ ಹೋಲಿಸಿದ್ದರು. ಇದೀಗ ಕೊನೆಗೂ ನೂತನ ಸಂಸತ್ ಭವನ ಉದ್ಘಾಟನೆಗೆ ಸಿದ್ಧವಾಗಿ ನಿಂತಿದೆ. ಈ ಭವನದ ಮೂಲಕವಾದರೂ ಭಾರತ ಕಳೆದುಕೊಂಡ ತನ್ನ ವರ್ಚಸ್ಸನ್ನು ಮರಳಿ ಪಡೆದೀತೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಪ್ರಜೆಗಳು.

ಒಂದು ದೇಶದ ಪ್ರಜಾಸತ್ತೆಯ ಹಿರಿಮೆಯನ್ನು ಆ ದೇಶದ ಸಂಸತ್‌ಭವನದ ವೈಭವದ ಮೇಲೆ ಅಳೆಯಲಾಗುವುದಿಲ್ಲ. ಈಗ ಇರುವ ಸಂಸತ್‌ನಲ್ಲಿ ಹತ್ತು ಹಲವು ಕೊರತೆಗಳಿದ್ದಿರಬಹುದು. ಆದರೆ, ಚಾರಿತ್ರಿಕ ಕಾರಣದಿಂದಾಗಿ ಅದು ದೇಶ, ವಿದೇಶಗಳ ಜನರನ್ನು ತನ್ನೆಡೆಗೆ ಸೆಳೆದುಕೊಂಡು ಬಂದ ಕಟ್ಟಡವಾಗಿತ್ತು. ಈ ಸಂಸತ್‌ಭವನದಲ್ಲಿ ತೆಗೆದುಕೊಂಡ ನೂರಾರು ನಿರ್ಣಯಗಳು, ರೂಪಿಸಿದ ನೀತಿಗಳು ಆಧುನಿಕ ಭಾರತಕ್ಕೆ ಹೊಸ ದಿಕ್ಕನ್ನು ನೀಡಿದ್ದವು. ಆದುದರಿಂದಲೇ, ಇಂದಿನ ದಿನಗಳಿಗೆ ಅಗತ್ಯವಿರುವ ಅತ್ಯಾಧುನಿಕ ಸೌಕರ್ಯಗಳ ಕೊರತೆಯೆದುರಿಸುತ್ತಿದ್ದರೂ, ಈ ಸಂಸತ್ ಭವನದ ಹಿರಿಮೆಗೆ ಯಾವ ಕಟ್ಟಡವೂ ಸರಿದೂಗುವಂತಿರಲಿಲ್ಲ. ನೆಹರೂ, ಲಾಲ್‌ಬಹದ್ದೂರ್ ಶಾಸ್ತ್ರಿಯಂತಹ ಹಿರಿಯ ಮುತ್ಸದ್ದಿಗಳ ಕಾರಣದಿಂದ ಈ ಸಂಸತ್ ಭವನ ವಿಶ್ವಕ್ಕೆ ಮಾದರಿಯಾಗಿ ನಿಂತಿದೆ. ಪ್ರಜಾಸತ್ತೆಗೆ ಅಗೌರವವಾಗುವಂತೆ ಅವರೆಂದಿಗೂ ನಡೆದುಕೊಂಡಿರಲಿಲ್ಲ. ಆದರೆ ಇಂದು ಸಂಸತ್‌ನಲ್ಲಿ ವಿರೋಧ ಪಕ್ಷದ ನಾಯಕರ ಮಾತುಗಳನ್ನು ದಮನಿಸುವ ಪ್ರಯತ್ನ ನಡೆಯುತ್ತಿವೆ. ಪ್ರಧಾನಿಯ ನಡವಳಿಕೆಗಳನ್ನು ಪ್ರಶ್ನಿಸಿದರೆ ಅವರನ್ನು ಸಂಸತ್‌ನಿಂದಲೇ ಹೊರ ಹಾಕಲಾಗುತ್ತದೆ. ಯಾವ ಸಂಸತ್‌ನಲ್ಲಿ ಪ್ರಜಾಸತ್ತೆಗೆ ಸ್ಥಾನವಿಲ್ಲವೋ ಅಂತಹ ಸಂಸತ್ ಭವನ ಅದೆಷ್ಟು ಬೃಹತ್ತಾಗಿದ್ದರೂ, ವೈಭವದಿಂದ ಕೂಡಿದ್ದರೂ ದೇಶಕ್ಕೆ ಗೌರವವನ್ನು ತಂದುಕೊಡಲಾರದು. ಈ ದೇಶ ವಿಶ್ವದಲ್ಲಿ ಗುರುತಿಸಲ್ಪಟ್ಟಿರುವುದು ಇಲ್ಲಿ ಆಳವಾಗಿ ಬೇರೂರಿರುವ ಪ್ರಜಾಪ್ರಭುತ್ವದ ಕಾರಣಕ್ಕಾಗಿ. ಆ ಪ್ರಜಾಪ್ರಭುತ್ವದ ಬೇರನ್ನು ದುರ್ಬಲಗೊಳಿಸಿ ಅದರ ಸಮಾಧಿಯ ಮೇಲೆ ನಿಲ್ಲುವ ಯಾವ ಭವ್ಯ ಕಟ್ಟಡವೂ ಈ ದೇಶದ ವರ್ಚಸ್ಸನ್ನು ಹಿಗ್ಗಿಸಲಾರದು ಎನ್ನುವ ಎಚ್ಚರಿಕೆ ನೂತನ ಸಂಸತ್‌ಭವನವನ್ನು ಇದೀಗ ಉದ್ಘಾಟಿಸಲು ಸಿದ್ಧತೆ ನಡೆಸುತ್ತಿರುವ ಸರಕಾರ ಹೊಂದಿರಬೇಕು.

ನೂತನ ಸಂಸತ್‌ಭವನದ ಉದ್ಘಾಟನಾ ಕಾರ್ಯಕ್ರಮ ಹಲವು ಕಾರಣಗಳಿಗೆ ವಿವಾದಕ್ಕೀಡಾಗುತ್ತಿದೆ. ಮೊದಲನೆಯದಾಗಿ, ಈ ಕಾರ್ಯಕ್ರಮವನ್ನು ಸಾವರ್ಕರ್ ಜನ್ಮದಿನದಂದೇ ಪ್ರಜ್ಞಾಪೂರ್ವಕವಾಗಿ ಉದ್ಘಾಟಿಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದು ನಿಜವೇ ಆಗಿದ್ದರೆ, ನೂತನ ಸಂಸತ್ ಭವನ ದೇಶದ ವರ್ಚಸ್ಸನ್ನು ಕುಗ್ಗಿಸಲಿದೆ. ಯಾವ ವ್ಯಕ್ತಿಗೆ ಈ ದೇಶದ ಜಾತ್ಯತೀತ, ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೇಲೆ ನಂಬಿಕೆಯಿರಲಿಲ್ಲವೋ, ಯಾವ ವ್ಯಕ್ತಿ ಈ ದೇಶದ ರಾಷ್ಟ್ರಪಿತ ಎಂದೇ ಕರೆಯಲ್ಪಟ್ಟಿದ್ದ ಮಹಾತ್ಮಾಗಾಂಧೀಜಿಯ ಕೊಲೆ ಸಂಚಿನ ಆರೋಪವನ್ನು ಹೊಂದಿದ್ದನೋ ಆ ವ್ಯಕ್ತಿಯ ಜನ್ಮದಿನದಂದು ನೂತನ ಸಂಸತ್ ಭವನವನ್ನು ಉದ್ಘಾಟಿಸುವುದು ಪ್ರಜಾಸತ್ತೆಗೆ ಮಾಡುವ ಅಗೌರವವಾಗಿದೆ. ನೂತನ ಸಂಸತ್ ಭವನ ಅದೆಷ್ಟೇ ಅತ್ಯಾಧುನಿಕವಾಗಿರಲಿ, ಅದ್ದೂರಿಯಾಗಿರಲಿ, ಆದರೆ ಸಾವರ್ಕರ್‌ನ್ನು ಮಾದರಿಯಾಗಿರಿಸಿಕೊಂಡ ಸಂಸತ್ ಭವನ ಭಾರತದ ವರ್ಚಸ್ಸನ್ನು ವಿಶ್ವದ ಮುಂದೆ ತಗ್ಗಿಸಲಿದೆಯೇ ಹೊರತು ಹಿಗ್ಗಿಸಲಾರದು. ಇಂದು ವಿಶ್ವ ಮಹಾತ್ಮಾಗಾಂಧೀಜಿ, ಜವಾಹರಲಾಲ್ ನೆಹರು, ಅಂಬೇಡ್ಕರ್, ಸುಭಾಶ್ಚಂದ್ರಭೋಸ್‌ರಂತಹ ನಾಯಕರ ಕಾರಣಗಳಿಗಾಗಿ ಭಾರತವನ್ನು ಗುರುತಿಸುತ್ತಿದೆಯೇ ಹೊರತು, ಬ್ರಿಟಿಷರ ಪಿಂಚಣಿಯನ್ನು ಪಡೆದು ಜೀವನ ನಡೆಸಿದ, ಗಾಂಧೀಜಿಯ ಕೊಲೆ ಸಂಚಿನ ಆರೋಪದಲ್ಲಿ ವಿಚಾರಣೆ ಎದುರಿಸಿದ್ದ ಸಾವರ್ಕರ್ ಕಾರಣಕ್ಕಾಗಿ ಅಲ್ಲ. ಆದರೆ ನೂತನ ಸಂಸತ್ ಭವನವನ್ನು ಗಾಂಧಿ, ನೆಹರೂ ದಾರಿಯಲ್ಲಿ ಮುನ್ನಡೆಸುವ ಬದಲು ಸಾವರ್ಕರ್ ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಸುವ ಸೂಚನೆಯನ್ನು ಪ್ರಧಾನಿ ಮೋದಿ ನೀಡುತ್ತಿದ್ದಾರೆ. ಇದು ನಿಜಕ್ಕೂ ಆತಂಕಕಾರಿಯಾದುದು. ಈ ದೇಶದ ಸಂವಿಧಾನವನ್ನು ಬರೆದ ಅಂಬೇಡ್ಕರ್ ಹುಟ್ಟಿದ ದಿನ ಅಥವಾ ಮಹಾತ್ಮಾಗಾಂಧೀಜಿಯವರು ಹುಟ್ಟಿದ ದಿನವನ್ನು ನೂತನ ಸಂಸತ್ ಭವನ ಉದ್ಘಾಟನೆಗೆ ಆರಿಸಿದರೆ ಅದು ಅರ್ಥಪೂರ್ಣವಾಗಿರುತ್ತಿತ್ತು.

ಇದೇ ಸಂದರ್ಭದಲ್ಲಿ ನೂತನ ಸಂಸತ್ ಭವನವನ್ನು ತನ್ನ ಖಾಸಗಿ ನಿವಾಸವೋ ಎಂಬಂತೆ ಪ್ರಧಾನಿಯೇ ಉದ್ಘಾಟಿಸಲು ಮುಂದಾಗಿದ್ದಾರೆ. ಈ ದೇಶದ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮೂರೂ ಅಂಗಗಳನ್ನು ಜೋಡಿಸುವ ಭವನ ಅದು. ಆದುದರಿಂದ ಇದನ್ನು ಉದ್ಘಾಟಿಸುವ ಅರ್ಹತೆಯಿರುವುದು ರಾಷ್ಟ್ರಪತಿಗೆ. ಶೋಷಿತ ಸಮುದಾಯದಿಂದ ಬಂದ ಒಬ್ಬ ಮಹಿಳೆ ಈ ದೇಶದ ರಾಷ್ಟ್ರಪತಿ. ಅವರಿಂದ ನೂತನ ಸಂಸತ್ ಭವನ ಉದ್ಘಾಟನೆಯಾದರೆ ಅದು ವಿಶ್ವ ಕ್ಕೆ ಹಲವು ಶ್ರೇಷ್ಠ ಸಂದೇಶಗಳನ್ನು ನೀಡುತ್ತದೆ. ಆದರೆ ಪ್ರಧಾನಿ ಮೋದಿಯವರು ನೂತನ ಸಂಸತ್ ಭವನ ಉದ್ಘಾಟನೆಯ ಹಿರಿಮೆಯನ್ನು ರಾಷ್ಟ್ರಪತಿಯಿಂದ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಇದು ನೂತನ ಸಂಸತ್‌ಗೆ ಮಾಡುವ ಅವಮಾನವಾಗಿದೆ. ಸರಕಾರದ ಈ ರ್ಧಾರವನ್ನು ಹಲವು ವಿಪಕ್ಷ ನಾಯಕರು ಪ್ರಶ್ನಿಸಿದ್ದಾರೆ. ಟೀಕಿಸಿದ್ದಾರೆ. ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಅವಕಾಶ ಪ್ರಧಾನಿ ಮೋದಿಗೆ ಇನ್ನೂ ಇದೆ. ನೂತನ ಸಂಸತ್‌ನ ಹಿರಿಮೆಯ ಮುಂದೆ ಪ್ರಧಾನಿಯ ವೈಯಕ್ತಿಕ ಹೆಗ್ಗಳಿಕೆ ದೊಡ್ಡದಲ್ಲ. ಇದೇ ಸಂದರ್ಭದಲ್ಲಿ ನೂತನ ಸಂಸತ್‌ನಲ್ಲಿ ಪ್ರಜಾಸತ್ತೆಯ ಧ್ವನಿಯನ್ನು ದಮನಿಸುವ ಪ್ರಯತ್ನ ನಡೆಯದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಪ್ರಧಾನಿಯದ್ದು. ಲಾಕ್‌ಡೌನ್, ಕೊರೋನ ಸಂದರ್ಭದ ಈ ದೇಶದ ಸಾವಿರಾರು ವಲಸೆ ಕಾರ್ಮಿಕರ ಕಣ್ಣೀರು, ನೋವು, ಸಂಕಟಗಳ ಮೇಲೆ ಈ ಸಂಸತ್ ಭವನ ನಿಂತಿದೆ. ಉದ್ಘಾಟನೆಯ ದಿನ ಆ ಸಂತ್ರಸ್ತ ಜನರನ್ನು ಸ್ಮರಿಸುವ ಕೆಲಸ ಅತ್ಯಗತ್ಯವಾಗಿ ನಡೆಯಬೇಕು.

Similar News