ಸುಳ್ಯ: ರಸ್ತೆ ಅಪಘಾತಕ್ಕೆ ವಿದ್ಯಾರ್ಥಿ ಬಲಿ
ಸುಳ್ಯ: ಬೈಕ್ ವೊಂದಕ್ಕೆ ಪಿಕಪ್ ಢಿಕ್ಕಿಯಾದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಕಾರಿಗೆ ಢಿಕ್ಕಿಯಾಗಿದ್ದು, ಘಟನೆಯಲ್ಲಿ ಬೈಕ್ ಸವಾರ ವಿದ್ಯಾರ್ಥಿ ಮೃತಪಟ್ಟು, ಸಹ ಸವಾರ ವಿದ್ಯಾರ್ಥಿ ಗಾಯಗೊಂಡ ಘಟನೆ ಸೋಮವಾರ ರಾತ್ರಿ ಮಾಣಿ-ಮೈಸೂರು ಹೆದ್ದಾರಿಯ ಸುಳ್ಯ ಸಮೀಪದ ಪಾಲಡ್ಕ ಎಂಬಲ್ಲಿ ಸಂಭವಿಸಿದೆ.
ಸುಳ್ಯದ ಖಾಸಗಿ ಆಯುರ್ವೇದ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿ ಚಿಕ್ಕಬಳ್ಳಾಪುರದ ಸ್ವರೂಪ್ (21) ಮೃತರು. ಇನ್ನೋರ್ವ ವಿದ್ಯಾರ್ಥಿ ಮಡಿಕೇರಿಯ ಸಂಭ್ರಮ್ (21) ಗಾಯಗೊಂಡಿದ್ದು ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಡಿಕೇರಿ ಕಡೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಬೈಕ್ ಗೆ ಪಾಲಡ್ಕ ಎಂಬಲ್ಲಿ ಸುಳ್ಯ ಕಡೆಗೆ ಬರುತ್ತಿದ್ದ ಪಿಕಪ್ ಢಿಕ್ಕಿಯಾಗಿ ಪರಾರಿಯಾಗಿದೆ. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ಸುಳ್ಯ ಕಡೆ ಬರುತ್ತಿದ್ದ ಕಾರಿಗೆ ಢಿಕ್ಕಿಯಾಗಿದೆ. ಘಟನೆಯಲ್ಲಿ ಬೈಕ್ ಸವಾರ ಸ್ವರೂಪ್ ಸ್ಥಳದಲ್ಲೇ ಮೃತಪಟ್ಟಿದ್ದು, ಸಹ ಸವಾರ ಸಂಭ್ರಮ್ ಗಾಯಗೊಂಡಿದ್ದಾರೆ.
ಗಾಯಾಳುವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಎಸಗಿದ ಪಿಕಪ್ ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಸುಳ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.