ಹವಾಮಾನ ವೈಪರೀತ್ಯದಿಂದ 2 ದಶಲಕ್ಷ ಮಂದಿ ಸಾವು, 4.3 ಲಕ್ಷ ಕೋಟಿ ಡಾಲರ್ ನಷ್ಟ: ವಿಶ್ವಸಂಸ್ಥೆ ವರದಿ

Update: 2023-05-22 16:46 GMT

ಜಿನೆವಾ, ಮೇ 22: ಕಳೆದ ಅರ್ಧ ಶತಮಾನದಲ್ಲಿ ಹವಾಮಾನ ವೈಪರೀತ್ಯವು ಜಾಗತಿಕವಾಗಿ 2 ದಶಲಕ್ಷ ಜನರ ಸಾವಿಗೆ ಕಾರಣವಾಗಿದ್ದು 4.3 ಲಕ್ಷ ಕೋಟಿ ಆರ್ಥಿಕ ನಷ್ಟ ಉಂಟುಮಾಡಿದೆ ಎಂದು ವಿಶ್ವಸಂಸ್ಥೆಯ ಜಾಗತಿಕ ಹಮಾವಾನ ವಿಭಾಗ ಸೋಮವಾರ ವರದಿ ಮಾಡಿದೆ.

ದುರಂತದ ಕುರಿತ ಮುಂಚಿತ ಎಚ್ಚರಿಕೆ ವ್ಯವಸ್ಥೆಯಲ್ಲಿ ಸುಧಾರಣೆಯಿಂದಾಗಿ ಮನುಷ್ಯರ ಸಾವಿನ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ ವಾಯುಗುಣ ಮತ್ತು ಹವಾಮಾನ ಸಂಬಂಧಿತ ವಿಪತ್ತುಗಳ ಆರ್ಥಿಕ ಹಾನಿ ಹೆಚ್ಚುತ್ತಲೇ ಇದೆ. ಕಳೆದ ಅರ್ಧ ಶತಮಾನದಲ್ಲಿ ವಿಶ್ವದಾದ್ಯಂತ ವಾಯುಗುಣ, ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ಸುಮಾರು 12,000 ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ 2 ದಶಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟು 4.3 ಲಕ್ಷಕೋಟಿ ಡಾಲರ್ನಷ್ಟು ಆರ್ಥಿಕ ನಷ್ಟ ಉಂಟಾಗಿದೆ ಎಂದು ಸೋಮವಾರ ಬಿಡುಗಡೆಗೊಂಡ ವಿಶ್ವ ಹವಾಮಾನ ಸಂಸ್ಥೆಯ ಪರಿಷ್ಕರಿಸಿದ ವರದಿ ಹೇಳಿದೆ.

ವಿಶ್ವ ಹವಾಮಾನ ಸಂಸ್ಥೆಯ ಸದಸ್ಯ ದೇಶಗಳ ನಡುವೆ 4 ವರ್ಷಗಳಿಗೊಮ್ಮೆ ನಡೆಯುವ ಸಮಾವೇಶದಲ್ಲಿ ಬಿಡುಗಡೆಗೊಂಡಿರುವ ವರದಿಯಲ್ಲಿ, ಹವಾಮಾನ ವೈಪರೀತ್ಯದ ಘಟನೆಗಳಿಗೆ ಎಚ್ಚರಿಕೆಯ ವ್ಯವಸ್ಥೆಗಳನ್ನು ಸುಧಾರಿಸಲು 2017ರ ಗಡುವಿನೊಳಗೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಅಗತ್ಯವನ್ನು ಒತ್ತಿಹೇಳಿದೆ. ಮಾನವ ನಿರ್ಮಿತ ಹವಾಮಾನ ಬದಲಾವಣೆಯ ಪರಿಣಾಮದ ಬಗ್ಗೆ ವಿಶ್ವ ಹವಾಮಾನ ಸಂಸ್ಥೆ ಪದೇ ಪದೇ ಎಚ್ಚರಿಸಿದೆ. ಏರುತ್ತಿರುವ ತಾಪಮಾನವು ಪ್ರವಾಹ, ಚಂಡಮಾರುತ, ಸುಂಟರಗಾಳಿ, ಉಷ್ಣ ಅಲೆ ಮತ್ತು ಬರಗಾಲದ ಸಮಸ್ಯೆಗಳನ್ನು ತೀವ್ರಗೊಳಿಸಿದೆ ಮತ್ತು ಹೆಚ್ಚಿಸಿದೆ.

ಮುಂಚಿತವಾಗಿ ಎಚ್ಚರಿಸುವ ವ್ಯವಸ್ಥೆಗಳು ಹವಾಮಾನ ಮತ್ತು ಇತರ ಹವಾಮಾನ ಸಂಬಂಧಿ ದುರಂತಗಳಿಂದಾಗುವ ಸಾವಿನ ಸಂಖ್ಯೆಯನ್ನು ಕಡಿಮೆಗೊಳಿಸಲು ನೆರವಾಗಿದೆ ಎಂದು ವರದಿ ಹೇಳಿದೆ. 1970ರಿಂದ 2021ರವರೆಗಿನ ಅವಧಿಯಲ್ಲಿ ಅತೀ ಹೆಚ್ಚಿನ ಆರ್ಥಿಕ ಹಾನಿ(1.7 ಶತಕೋಟಿ ಡಾಲರ್) ಅಮೆರಿಕಕ್ಕೆ ಸಂಭವಿಸಿದೆ. ಈ ಅವಧಿಯಲ್ಲಿ ಉಂಟಾದ ಪ್ರತೀ 10 ಸಾವಿನಲ್ಲಿ 9ರಷ್ಟು ಅಭಿವೃದ್ಧಿಶೀಲ ದೇಶಗಳಲ್ಲಿ ಸಂಭವಿಸಿದೆ. ಜಿಡಿಪಿಗೆ ಸಂಬಂಧಿಸಿದ ಆರ್ಥಿಕ ಪರಿಣಾಮವು ಅಭಿವೃದ್ಧಿಶೀಲ ದೇಶಗಳಲ್ಲಿ ಅತೀ ಹೆಚ್ಚು ಅನುಭವಕ್ಕೆ ಬಂದಿದೆ. ಇತ್ತೀಚೆಗೆ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಕ್ಕೆ ಅಪ್ಪಳಿಸಿದ ಮೋಚ ಚಂಡಮಾರುತವು `ಅತ್ಯಂತ ದುರ್ಬಲ ಸಮುದಾಯಗಳು ದುರದೃಷ್ಟವಶಾತ್ ವಾಯುಗುಣ, ಹವಾಮಾನ ಮತ್ತು ನೀರಿಗೆ ಸಂಬಂಧಿಸಿದ ಅಪಾಯಗಳ ಭಾರವನ್ನು ಹೊರಬೇಕಾಗಿದೆ' ಎಂಬುದನ್ನು ತೋರಿಸಿಕೊಟ್ಟಿದೆ ಎಂದು ವಿಶ್ವಹವಾಮಾನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪೀಟರ್ ತಾಲಸ್ ಹೇಳಿದ್ದಾರೆ.

ಈ ಹಿಂದೆ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳಲ್ಲಿ ನೂರಾರು ಸಾವಿರ ಸಾವಿನ ಪ್ರಕರಣ ದಾಖಲಾಗಿತ್ತು. ಆದರೆ ಈಗ ಮುಂಚಿತ ಎಚ್ಚರಿಕೆ ವ್ಯವಸ್ಥೆಯಿಂದಾಗಿ ಸಾವಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮುಂಚಿತ ಎಚ್ಚರಿಕೆ ವ್ಯವಸ್ಥೆ ಜೀವವನ್ನು ಉಳಿಸಿದೆ ಎಂದವರು ಹೇಳಿದ್ದಾರೆ.

ವಿಶ್ವದಾದ್ಯಂತ ಉಷ್ಣವಲಯದ ಚಂಡಮಾರುತವು ವರದಿಯಾದ ಮಾನವ ಮತ್ತು ಆರ್ಥಿಕ ನಷ್ಟಕ್ಕೆ ಪ್ರಾಥಮಿಕ ಕಾರಣವಾಗಿದೆ. ಆಫ್ರಿಕಾದಲ್ಲಿ ವಾಯುಗುಣ, ಹಮಾವಾನ ವೈಪರೀತ್ಯಕ್ಕೆ ಸಂಬಂಧಿಸಿದ 1,800 ದುರಂತ ಪ್ರಕರಣ ಹಾಗೂ 7,33,585 ಸಾವಿನ ಪ್ರಕರಣ ದಾಖಲಾಗಿದೆ. ಇದರಲ್ಲಿ 2019ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಅಪ್ಪಳಿಸಿದ್ದ ಇಡಾಯ್ ಚಂಡಮಾರುತ ಅತ್ಯಂತ ವಿನಾಶಕಾರಿಯಾಗಿದ್ದು 2.1 ಶತಕೋಟಿ ಡಾಲರ್ ನಷ್ಟು ಆರ್ಥಿಕ ಹಾನಿಗೆ ಕಾರಣವಾಗಿದೆ.

ನೈಋತ್ಯ ಪೆಸಿಫಿಕ್ನಲ್ಲಿ ಸುಮಾರು 1,500 ವಿಪತ್ತುಗಳಿಂದ 65,951 ಸಾವು ಮತ್ತು 185.8 ಶತಕೋಟಿ ಡಾಲರ್ನಷ್ಟು ಆರ್ಥಿಕ ಹಾನಿ, ಏಶ್ಯಾದಲ್ಲಿ 3,600ಕ್ಕೂ ಅಧಿಕ ವಿಪತ್ತು ಸಂಭವಿಸಿದ್ದು 9,84,263 ಪ್ರಾಣಹಾನಿ ಮತ್ತು 1.4 ಲಕ್ಷಕೋಟಿ ಡಾಲರ್ನಷ್ಟು ಆರ್ಥಿಕ ಹಾನಿ, ದಕ್ಷಿಣ ಅಮೆರಿಕದಲ್ಲಿ 943 ದುರಂತ, 58,484 ಸಾವಿನ ಪ್ರಕರಣ ಮತ್ತು 115 ಶತಕೋಟಿ ಡಾಲರ್ನಷ್ಟು ಆರ್ಥಿಕ ಹಾನಿ ಸಂಭವಿಸಿದೆ. ಉತ್ತರ ಅಮೆರಿಕಾ, ಮಧ್ಯ ಅಮೆರಿಕ ಮತ್ತು ಕೆರಿಬಿಯನ್ ಪ್ರದೇಶದಲ್ಲಿ 2,100 ದುರಂತ ಪ್ರಕರಣದಲ್ಲಿ 77,454 ಸಾವು ಮತ್ತು 2 ಲಕ್ಷಕೋಟಿ ಡಾಲರ್ನಷ್ಟು ಆರ್ಥಿಕ ನಷ್ಟ, ಯುರೋಪ್ನಲ್ಲಿ 1,800 ದುರಂತ ಪ್ರಕರಣ, 1,66,492 ಸಾವು ಮತ್ತು 562 ಶತಕೋಟಿ ಡಾಲರ್ನಷ್ಟು ಆರ್ಥಿಕ ಹಾನಿ ಸಂಭವಿಸಿದೆ ಎಂದು ವರದಿ ಹೇಳಿದೆ.

Similar News