ವೈಯೆನ್ಕೆ ಅನ್ಲಿಮಿಟೆಡ್ ವಾಚಿಕೆ

ಈ ಹೊತ್ತಿನ ಹೊತ್ತಿಗೆ

Update: 2023-05-23 05:57 GMT

ಕೃತಿ: ವೈಯೆನ್ಕೆ UNLIMITED  ವಾಚಿಕೆ

ಸಂಪಾದಕರು: ಜೋಗಿ ಮುಖಬೆಲೆ: 250 ರೂ.

ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು

ವೈಯೆನ್ಕೆ ಎಂದರೆ ನೆನಪಾಗುವುದು ವಂಡರ್. ‘‘ಬಾಳೇ ಒಂದು ವಿಸ್ಮಯ. ಅದು ಮುಗಿದರೆ ಈ ಬದುಕು ಮುಗಿದಂತೆ, ಹೀಗಾಗಿ ವಂಡರ್ಗಾಗಿ ಹುಡುಕಾಟ ನಡೆಸಬೇಕು. ತಡಕಾಟ ನಡೆಸಬೇಕು’’ ಎಂದು ವೈಯೆನ್ಕೆ ಸದಾ ಹೇಳುತ್ತಿದ್ದರು. ಕಾವ್ಯ ಮತ್ತು ವಂಡರ್ನಂಥ ಬರಹಗಳಿಂದ ವೈಯೆನ್ಕೆ ಕನ್ನಡದ ಜನರನ್ನೇ ಗೆದ್ದವರು. ಅವರ ಕವನಗಳಲ್ಲಿ ‘‘ಹೀಗೆ ಬರೆದರೆ ಕೇಳ್ತಾರೆ ಜನ. ಇಲ್ಲವೇ ಇಂಥ ಪದ್ಯಕ್ಕೆ end ಎ’’ ಎಂದು ಒಂದೆಡೆ ಅವರು ಹೇಳುವುದುಂಟು. ವಿನೋದ ಕಾವ್ಯಕ್ಕೂ ಲಿಮಿಟ್ ಇದೆ ಎಂದು ಹೇಳಿದವರು ವೈಯೆನ್ಕೆ.

ಜೋಗಿಯವರ ಸಂಪಾದಕತ್ವದಲ್ಲಿ ಹೊರಹೊಮ್ಮಿದ ಪುಸ್ತಕ ‘ವೈಯೆನ್ಕೆ UNLIMITED  ವಾಚಿಕೆ’.ಈ ಪುಸ್ತಕದ ಸಂಪಾದನೆಗೆ ಮುಖ್ಯ ಕಾರಣ ಮೊದಲನೆಯದಾಗಿ ಯುವ ಪೀಳಿಗೆಗೆ ವೈಯೆನ್ಕೆಯವರ ಸಾಹಿತ್ಯದ ರುಚಿಯನ್ನು ರುಚಿಸುವಂತೆ ಮಾಡುವುದು. ಎರಡನೆಯದು ಇಂದು ವೈಯೆನ್ಕೆಯವರ ಪುಸ್ತಕಗಳು ಮರುಮುದ್ರಣ ಗೊಳ್ಳುತ್ತಿಲ್ಲ. ಸಹೃದಯಿಗಳಿಗೆ ಅವರ ಲೇಖನಗಳು ಸಹ ಸಿಗುವುದಿಲ್ಲ. ಹೀಗಾಗಿ ವೈಯೆನ್ಕೆಯವರ ವಂಡರ್ ಮಾಲಿಕೆ, ಕವಿತೆಗಳ ಗುಚ್ಛ, ಕೊನೆಸಿಡಿ ಪುಸ್ತಕಗಳಿಂದ ಆಯ್ದ ಕೆಲ ಲೇಖನಗಳನ್ನು ಮತ್ತು ಕವಿತೆಗಳನ್ನು ಈ ಪುಸ್ತಕದಲ್ಲಿ ಅನ್ ಲಿಮಿಟೆಡ್ ಆಗಿ ತುಂಬಲಾಗಿದೆ.

ಈ ಹೊತ್ತಿಗೆಯ ಬರಹಗಳು ವೈಯೆನ್ಕೆಯವರ ವೈವಿಧ್ಯಮಯ ಗ್ರಹಿಕೆ, ಒಳನೋಟ, ತುಂಟತನ ಮತ್ತು ಪ್ರತಿಭೆಯನ್ನು ತೋರುತ್ತದೆ. ಈ ಹೊತ್ತಿಗೆಯನ್ನು ಓದುವವರಿಗೆ ವೈಯೆನ್ಕೆಯ ವಂಡರ್ ವ್ಯಕ್ತಿತ್ವದ ಪರಿಚಯವಾಗುತ್ತದೆ. ವೈಯೆನ್ಕೆ ತಮ್ಮ ಪ್ರತೀ ಲೇಖನಗಳಲ್ಲಿಯೂ ಗಾದೆ ಮಾತುಗಳು, ನುಡಿಗಟ್ಟುಗಳು, ಹೇಳಿಕೆಗಳನ್ನು ಅನ್ಲಿಮಿಟೆಡ್ ಆಗಿ ತುಂಬಿರುತ್ತಾರೆ. ಮಾನವಾಸಕ್ತಿ ಸುದ್ದಿಗಳನ್ನು ಜನರಿಗೆ ಮತ್ತಷ್ಟು ರುಚಿಸಲಿಕ್ಕೆ ವಿನೋಧ ಪ್ರಜ್ಞೆಯನ್ನು ಇಟ್ಟುಕೊಂಡು ಬರೆದಿದ್ದಾರೆ. ಪ್ರತೀ ಲೇಖನದಲ್ಲಿಯೂ ಹಾಸ್ಯ ಚಟಾಕಿಯನ್ನು ಹಾರಿಸುತ್ತಾರೆ. 

ಇವರ ಲೇಖನಗಳಲ್ಲಿ ವ್ಯಕ್ತಿಗಳ ಪೂರ್ಣ ಹೆಸರನ್ನು ಬಳಸಿದ್ದು ಅಪರೂಪವೇ, ಅವರ ಕಿರುನಾಮ ಬಳಸಿ ಓದುಗರಿಗೆ ಕುತೂಹಲವನ್ನು ಹಾಸ್ಯವನ್ನು ಹೆಚ್ಚಿಸುತ್ತಿದ್ದರು. ವೈಯೆನ್ಕೆ  ತಮ್ಮ ಲೇಖನಗಳಲ್ಲಿ ಪ್ರಶ್ನಿಸುವಾಗ ಅಥವಾ ಇತರ ವಿಷಯಗಳನ್ನು ಪ್ರಸ್ತಾಪಿಸುವಾಗ ‘‘ಶ್ರೀಮಾನ್ ಘಾ ಹೇಳಿದರು’’ ಎಂದು ಬರೆಯುತ್ತಿದ್ದರು. ಇಂದಿಗೂ ಶ್ರೀಮಾನ್ ಘಾ ನಮ್ಮ ನಡುವೆ ಜೀವಂತವಾಗಿ ಇದ್ದಾನೆ. ಈ ಹೊತ್ತಿಗೆಯಲ್ಲಿ ವೈಯೆನ್ಕೆಯವರು  ಎಷ್ಟು ವಂಡರ್ ಮನುಷ್ಯ ಎಂಬುದು ಅರಿವಾಗುತ್ತದೆ. ಇವರ ಕವನಗಳನ್ನು ಓದುವುದೊಂದು ಖುಷಿ. ತುಂಬಾ ವಿನೋದ ಪ್ರಜ್ಞೆಯನ್ನಿಟ್ಟುಕೊಂಡು ಬರೆದಿರುವ ಕವನಗಳ ಸಂಗ್ರಹವನ್ನು ನೀಡಲಾಗಿದೆ. 

ಇನ್ನು ಕೊನೆಯ ಸಿಡಿ ವಿಷಯಕ್ಕೆ ಬಂದರೆ, ಈ ಭಾಗದ ಲೇಖನಗಳನ್ನು ಓದುವುದೇ ಖುಷಿ. ಹಾಸ್ಯ ಮಿಶ್ರಿತ  ಸಾರವನ್ನು ತಮ್ಮ ಲೇಖನಗಳಲ್ಲಿ ಅಡಗಿಸಿಟ್ಟಿದ್ದಾರೆ. ಇವರು ಬಹುಪಾಲು ಮಾನವಾಸಕ್ತಿ ಸುದ್ದಿಗಳನ್ನು ವಿನೋದವಾಗಿ ಬರೆಯುತ್ತಿದ್ದರು. ಇದರೊಟ್ಟಿಗೆ ಅನೇಕ ಇಂಗ್ಲಿಷ್ ಕೃತಿಗಳ ಸಾರವನ್ನು ಕನ್ನಡದಲ್ಲಿ ಸಾಮಾನ್ಯರಿಗೆ ರುಚಿಸುವಂತೆ ಬರೆಯುತ್ತಿದ್ದುದು  ವಾಡಿಕೆ.

ಓದುಗರಿಗೆ ವೈಯೆನ್ಕೆ ಬರಹಗಳ ಕೊರತೆಯನ್ನು ಈ ಪುಸ್ತಕ ನೀಗಿಸುವುದರಲ್ಲಿ ಸಂದೇಹವಿಲ್ಲ. ವೈಯೆನ್ಕೆಯವರ ವ್ಯಕ್ತಿತ್ವದ ಚಿತ್ರಣ ಬೇಕು, ಅವರ ಸಾಹಿತ್ಯ ಪ್ರಜ್ಞೆ ಅರಿಯಬೇಕು ಎನ್ನುವವರಿಗೆ ಈ ವಾಚಿಕೆಯು ಬಲು ಉಪಯುಕ್ತ. ವೈಯೆನ್ಕೆ ಅವರ ಲಿಮಿಟೆಡ್ ಲೇಖನಗಳ ಅನ್ ಲಿಮಿಟೆಡ್ ವಾಚಿಕೆ ಈ ಹೊತ್ತಿಗೆ.

Similar News