ಶಿಕ್ಷಣ ಮೂಲಕ ಬುದ್ಧಿಮತ್ತೆ, ಆಧ್ಯಾತ್ಮದ ಅರಿವು ಅನಾವರಣ: ಅಣ್ಣಾಮಲೈ
ಉಡುಪಿ : ಶಿಕ್ಷಣದ ಮೂಲಕ ಮಕ್ಕಳಲ್ಲಿರುವ ಬುದ್ಧಿಮತ್ತೆ ಮತ್ತು ಆಧ್ಯಾತ್ಮದ ಅರಿವು ಅನಾವರಣಗೊಳಿ ಸಬೇಕು. ಸ್ವಾತಂತ್ರ್ಯ ಶತಮಾನೋತ್ಸವ ವೇಳೆಗೆ ಹೊಸ ತಲೆಮಾರಿನ ಯುವಜನತೆ ಈ ಶಿಕ್ಷಣ ಸಂಸ್ಥೆಗಳ ಮೂಲಕ ಮೂಡಿಬರಬೇಕೆಂದು ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಹೇಳಿದ್ದಾರೆ.
ಕಡಿಯಾಳಿ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸೋಮವಾರ ಅವರು ಮಾತನಾಡುತಿದ್ದರು.
ಶಾಲಾ ಕಟ್ಟಡವನ್ನು ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಶ್ರೀವಿಶ್ವವಲ್ಲತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ರೋಟರಿ ಕ್ಲಬ್‌ನ ಜಿಲ್ಲಾ ಗವರ್ನರ್ ಡಾ.ಜಯಗೌರಿ, ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ವಾದಿರಾಜ್ ಎ., ಉದ್ಯಮಿ ಬಾಲಾಜಿ ರಾಘವೇಂದ್ರ ಆಚಾರ್ಯ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಅಲ್ಟ್ರಾ ಫಿಲ್ಟರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಕೃಷ್ಣಾನಂದ ಕಿಣಿಯವರ ಪರವಾಗಿ ನಿರ್ಮಲಾ, ಡಾ.ಜಯಗೌರಿ, ಭೀಮಾ ಜ್ಯವೆಲ್ಲರ್ಸ್‌ನ ಹರಿನಾಥನ್, ಕರ್ನಾಟಕ ಬ್ಯಾಂಕಿನ ವಾದಿರಾಜ್ ಎ. ಹಾಗೂ ಇತರ ದಾನಿಗಳನ್ನು ಗೌರವಿಸಲಾಯಿತು.
ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಕಾರ್ಯದರ್ಶಿ ರತ್ನಕುಮಾರ್ ಸ್ವಾಗತಿಸಿದರು. ಡಾ.ಸಿ.ಕೆ. ಮಂಜುನಾಥ್ ಮತ್ತು ಸಚಿನ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಸೋದೆ ವಾದಿರಾಜ ಮಠದ ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿ, ಕಡಿಯಾಳಿ ಹಳೆ ವಿದ್ಯಾರ್ಥಿ ಸಂಘದ ಶ್ರೀನಿವಾಸ ಉಪಾಧ್ಯಾಯ ಉಪಸ್ಥಿತರಿದ್ದರು. ಶಾಲೆಯ ಆಡಳಿತಾಧಿಕಾರಿ ಪ್ರಭಾವತಿ ಅಡಿಗ ವಂದಿಸಿದರು.