ಅಂತರಿಕ್ಷ ತಲುಪಿದ ಸೌದಿಯ ಮೊದಲ ಮಹಿಳಾ ಗಗನಯಾತ್ರಿ ರಯಾನ್ಹಾ ಅಲ್ ಬರಾವಿ

Update: 2023-05-23 17:46 GMT

 ಹೊಸದಿಲ್ಲಿ,ಮೇ 23: ಪ್ರಪ್ರಥಮ ಅರಬ್ ಮಹಿಳಾ ಗಗನಯಾತ್ರಿ ರಯಾನ್ಹಾ ಅಲ್ ಬರಾವಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ಕ್ಕೆ ಮಂಗಳವಾರ ತಲುಪಿದ್ದಾರೆ.

ಅಮೆರಿಕದಿಂದ ರವಿವಾರದಂದು ಸ್ಪೇಸ್ಎಕ್ಸ್ ಫಾಲ್ಕನ್ 9 ರಾಕೆಟ್ನಿಂದ ಉಡಾವಣೆಗೊಂಡ ಆ್ಯಕ್ಸಿಯೊಮ್ ಸ್ಪೇಸ್ ನ ಎರಡನೇ ಖಾಸಗಿ ಬಾಹ್ಯಾಕಾಶ ಯಾನದಲ್ಲಿ ಪಾಲ್ಗೊಂಡಿರುವ ಇಬ್ಬರು ಅರಬ್ ಬಾಹ್ಯಾಕಾಶ ಯಾತ್ರಿಕರಲ್ಲಿ ರಯಾನ್ಹಾ ಕೂಡಾ ಒಬ್ಬರು.

ಸೌದಿ ಆರೇಬಿಯದಲ್ಲಿ ಜೀವವೈದ್ಯಶಾಸ್ತ್ರ (ಬಯೋ ಮೆಡಿಕಲ್)ದಲ್ಲಿ ವಿಜ್ಞಾನಿಯಾಗಿರುವ ರಯಾನ್ಹಾ ಅವರು ಕಾಂಡಕೋಶ (ಸ್ಟೆಮ್ ಸೆಲ್) ಹಾಗೂ ಸ್ತನದ ಕ್ಯಾನ್ಸರ್ ಬಗ್ಗೆ ಬಾಹ್ಯಾಕಾಶದಲ್ಲಿ ಸಂಶೋಧನೆ ನಡೆಸಲಿದ್ದಾರೆ. ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಮಾನವನ ಪ್ರತಿರಕ್ಷಕ ಜೀವಕೋಶಗಳ ಬಗ್ಗೆ ಅಧ್ಯಯನ ನಡೆಸಲಿದ್ದಾರೆ.

ರಯಾನ್ಹಾ ಅವರು ರಿಯಾದ್ನ ಕಿಂಗ್ ಫೈಸಲ್ ಸ್ಪೆಶಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಕಾಂಡಕೋಶ ಹಾಗೂ ಸಂಶೋಧನಾ ಕೇಂದ್ರದ ಲ್ಲಿ ಸಂಶೋಧನಾ ಪ್ರಯೋಗ ತಂತ್ರಜ್ಞೆಯಾಗಿದ್ದಾರೆ.

‘‘ಜಗತ್ತಿನಾದ್ಯಂತದ ಜನತೆಯ ಭವಿಷ್ಯವು ಉಜ್ವಲವಾಗಿದೆ. ನೀವು ದೊಡ್ಡದಾದ ಕನಸೊಂದನ್ನು ಕಾಣುವುದನ್ನು ಇಷ್ಟಪಡುತ್ತೇನೆ. ನಿಮ್ಮ ಮೇಲೆ ನಂಬಿಕೆಯಿರಿಸಿ ಹಾಗೂ ಮಾನವತೆಯಲ್ಲಿ ನಂಬಿಕೆಯಿಡಿ’ ಎಂದು ಬರ್ನಾವಿ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸುವ ಮುನ್ನ ಪ್ರಸಾರ ಮಾಡಿದ ವಿಡಿಯೋದಲ್ಲಿ ತಿಳಿಸಿದ್ದಾರೆ.

ಸೌದಿಯ ಫೈಟರ್ ಪೈಲಟ್ಆಗಿರುವ ಅಲ್ ಖಾರ್ನಿ ಅವರು ಆ್ಯಕ್ಸಿಯೊಮ್ನ ಬಾಹ್ಯಾಕಾಶಯಾನದಲ್ಲಿ ಪಾಲ್ಗೊಂಡಿರುವ ಇನ್ನೋರ್ವ ಅರಬ್ ಗಗನಯಾತ್ರಿ. ನನಗೆ ಮಾತ್ರವಲ್ಲ ಇಡೀ ಸೌದಿಗೆ ಇದೊಂದು ಐತಿಹಾಸಿಕ ಕ್ಷಣವಾಗಿದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಇಲ್ಲದೆ ಇದ್ದಿದ್ದರೆ ನಾನು ಈ ಸಾಧನೆಯನ್ನು ಮಾಡಲು ಸಾಧ್ಯವಿರುತ್ತಿರಲಿಲ್ಲ’’ ಎಂದು ಅವರು ಹೇಳಿರುವುದಾಗಿ ಅಲ್ ಅರಬಿಯಾ ವರದಿ ಮಾಡಿದೆ.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಮಾಜಿ ಗಗನಯಾತ್ರಿ ಪೆಗ್ಗಿ ವಿಟ್ಸನ್, ಅಮೆರಿಕನ್ ಉದ್ಯಮಿ ಜಾನ್ ಶಾಫ್ನರ್ ಅವರು ಆ್ಯಕ್ಸಿಯೊಮ್ನ ಬಾಹ್ಯಾಕಾಶಯಾನದಲ್ಲಿ ಪಾಲ್ಗೊಂಡ ಇತರ ಇಬ್ಬರು ಗನಗಯಾತ್ರಿಕರಾಗಿದ್ದಾರೆ. ಪೆಗ್ಗಿ ವಾಟ್ಸನ್ ಅವರು ನಾಸಾದ ಬಾಹ್ಯಾಕಾಶ ನೌಕೆಗಳ ಮೂಲಕ ಮೂರು ಬಾರಿ ಬಾಹ್ಯಾಕಾಶ ಯಾನ ನಡೆಸಿದ್ದರು.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮೂವರು ರಶ್ಯನ್ನರು, ಮೂವರು ಅಮೆರಿಕನ್ನರು ಹಾಗೂ ಓರ್ವ ಯುಎಇನ ಗಗನಯಾತ್ರಿ ಈಗಾಗಲೇ ನೆಲೆಸಿದ್ದಾರೆ.

ಫ್ಲಾರಿಡಾದಲ್ಲಿ ರವಿವಾರ ಸ್ಪೇಸ್ ಎಕ್ಸ್ ರಾಕೆಟ್ ಮೂಲಕ ಉಡಾವಣೆಗೊಂಡ ಆ್ಯಕ್ಸಿಯೊಮ್ ನೌಕೆಯು, 16 ತಾಸುಗಳ ಪ್ರಯಾಣದ ಬಳಿಕ ಭೂಮಿಯಿಂದ 250 ಮೈಲು ಎತ್ತರದ ಕಕ್ಷೆಯಲ್ಲಿ ತಿರುಗುತ್ತಿರವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದೆ.

Similar News