‘ಕೇರಳ ಸ್ಟೋರಿ’ ಪರ ನಿಲುವಿನಲ್ಲಿ ದ್ವೇಷಭಾಷಣಕ್ಕೆ ಸಿಕ್ಕಿತೇ ರಕ್ಷಣೆ?

Update: 2023-05-24 07:26 GMT

ಈ ಚಿತ್ರವನ್ನು ನೋಡಿದ ನಂತರ ಬಹುತೇಕ ಪ್ರತಿಯೊಬ್ಬ ವಿಮರ್ಶಕ ಇದು ಮುಸ್ಲಿಮರ ವಿರುದ್ಧ ದ್ವೇಷವನ್ನು ಸೃಷ್ಟಿಸುತ್ತದೆ ಮತ್ತು ಆ ಕಾರಣಕ್ಕಾಗಿ ಇದು ಅಪಾಯಕಾರಿ ಎಂದೇ ಹೇಳಿದ್ದಾರೆ. ಇದು ಸಾಮಾಜಿಕ ಸೌಹಾರ್ದವನ್ನು ಕದಡುತ್ತದೆ ಮತ್ತು ಮುಸ್ಲಿಮರ ಬಗ್ಗೆ ಹಿಂದೂಗಳಲ್ಲಿ ದ್ವೇಷ ಮೂಡಿಸುತ್ತದೆ. ಈ ಅನುಮಾನ ಮತ್ತು ದ್ವೇಷ ಈಗಾಗಲೇ ಸಾಕಷ್ಟಿರುವ ಇಂದಿನ ವಾತಾವರಣದಲ್ಲಿ ಅಂಥ ಮತ್ತೊಂದು ಕೃತ್ಯ ಹೇಗೆ ಸಹನೀಯ?

‘ದಿ ಕೇರಳ ಸ್ಟೋರಿ’ ಚಿತ್ರವನ್ನು ಎಲ್ಲೆಡೆ ಅಡೆತಡೆಯಿಲ್ಲದೆ ಪ್ರದರ್ಶಿಸುವಂತೆ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯ ಸರಕಾರಗಳಿಗೆ ಆದೇಶಿಸಿದೆ. ಚಿತ್ರದ ಮೇಲಿನ ನಿಷೇಧ ಹಿಂದೆಗೆದುಕೊಳ್ಳಲು ಅದು ಪಶ್ಚಿಮ ಬಂಗಾಳ ಸರಕಾರಕ್ಕೆ ಸೂಚಿಸಿದೆ. ಇನ್ನೊಂದೆಡೆ, ಚಿತ್ರ ಪ್ರದರ್ಶಿಸಲು ಮತ್ತು ವೀಕ್ಷಿಸಲು ಬಯಸುವವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ತಮಿಳುನಾಡು ಸರಕಾರಕ್ಕೆ ಆದೇಶಿಸಿದೆ. ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಇದಕ್ಕೆ ಅನುಮತಿ ನೀಡಿದಾಗ ಅದನ್ನು ನಿಷೇಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬುದು ಸರಳ ಮತ್ತು ದೃಢವಾದ ವಾದ. ಇದನ್ನು ಇತರ ಸಿನೆಮಾಗಳಂತೆ ಪರಿಗಣಿಸಬೇಕು ಮತ್ತು ಕಾಲ್ಪನಿಕ ಎಂದುಕೊಳ್ಳಬೇಕೆಂಬುದು ಇಲ್ಲಿ ವ್ಯಕ್ತವಾಗಿರುವ ನಿಲುವು.

ಆದರೆ, ಇದು ಎಲ್ಲ ಇತರ ಚಿತ್ರಗಳ ಹಾಗೆ ಇಲ್ಲ ಎಂಬುದೇ ಈಗಿರುವ ವಿಚಾರ.

ಬಿಜೆಪಿ ನಾಯಕರು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಈ ಚಿತ್ರವನ್ನು ನೋಡುವುದು ರಾಷ್ಟ್ರೀಯ ಕರ್ತವ್ಯ. ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ, ಹರ್ಯಾಣ ಮತ್ತು ಉತ್ತರಾಖಂಡ ಸರಕಾರಗಳು ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿವೆ. ಜನರು ಅದನ್ನು ನೋಡಲೇಬೇಕೆಂಬುದು ನಿಸ್ಸಂದೇಹವಾಗಿ ಇದರ ಉದ್ದೇಶ. ಪ್ರಧಾನಿ ಮೋದಿಯವರೇ ಸ್ವತಃ ಈ ಚಿತ್ರದ ಪ್ರಚಾರವನ್ನು ಮಾಡಿದ್ದಾರೆ. ಬಿಜೆಪಿ ಸರಕಾರದ ಮುಖ್ಯಮಂತ್ರಿಗಳೂ ಈ ಚಿತ್ರ ವೀಕ್ಷಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಸರಕಾರ ಇನ್ನಾವುದಾದರೂ ಚಿತ್ರದ ವೀಕ್ಷಣೆಗೆ ಇದೇ ರೀತಿ ಮಾಡುತ್ತದೆಯೇ ಎಂದರೆ, ಖಂಡಿತ ಇಲ್ಲ.

ಪಶ್ಚಿಮ ಬಂಗಾಳದಲ್ಲಿ ಈ ಚಿತ್ರ ನಿಷೇಧಿಸಿದ್ದ ಕಾರಣಕ್ಕೆ ಬಿಜೆಪಿ ನಾಯಕ ದಶರಥ್ ಟಿರ್ಕಿ ಬಂಗಾಳದ ಅಲಿಪುರ್ದಾರ್ನ ಚಹಾತೋಟದ 140 ಮಹಿಳೆಯರನ್ನು 120 ಕಿ.ಮೀ. ದೂರದ ಅಸ್ಸಾಮಿನ ನ್ಯೂ ಬೊಂಗೈಗಾಂವ್ಗೆ ಚಿತ್ರ ತೋರಿಸಲೆಂದೇ ಕರೆದೊಯ್ದರು. ಅವರ ಪ್ರಯಾಣದ ವೆಚ್ಚದ ಜೊತೆಗೆ, ಟಿಕೆಟ್ ಮತ್ತು ಊಟದ ವ್ಯವಸ್ಥೆಯನ್ನು ಆ ಬಿಜೆಪಿ ನಾಯಕ ಮಾಡಿದರು. ಏಕೆ? ಈ ಮಹಿಳೆಯರು ಜೀವನೋಪಾಯಕ್ಕಾಗಿ ತಮ್ಮ ಮನೆಗಳಿಂದ ಬೇರೆಡೆಗೆ ಹೋಗುತ್ತಾರೆ. ಅವರ ಸುರಕ್ಷತೆಯ ಬಗ್ಗೆ ಎಚ್ಚರದಿಂದಿರಬೇಕು. ಅವರನ್ನು ಬಲೆಗೆ ಬೀಳಿಸಲು ಕಾದಿರುವ ಅಪಾಯಗಳ ಬಗ್ಗೆ ಅವರು ತಿಳಿದಿರಬೇಕು. ಅವರು ಹೊರಗೆ ಹೋದಾಗ ಅವರು ಎದುರಿಸಬೇಕಾದ ಅಪಾಯಗಳಲ್ಲಿ ಒಂದರ ಬಗ್ಗೆ ಈ ಚಿತ್ರ ಎಚ್ಚರಿಸುತ್ತದೆ. ಆದ್ದರಿಂದ ಒಬ್ಬ ಜನಪ್ರತಿನಿಧಿಯಾಗಿ, ಅವರು ಎದುರಿಸಬಹುದಾದ ಅಪಾಯಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುವುದು ತನ್ನ ಕರ್ತವ್ಯ ಎಂದು ಅವರು ಹೇಳಿಕೊಂಡಿದ್ದಾರೆ.

ಅವರು ಕರೆದುಕೊಂಡು ಹೋದ ಮಹಿಳೆಯರಲ್ಲಿ ಒಬ್ಬಳೇ ಒಬ್ಬ ಮುಸ್ಲಿಮ್ ಮಹಿಳೆಯೂ ಇರಲಿಲ್ಲ ಎಂಬುದನ್ನು ಹೇಳಬೇಕಾಗಿಲ್ಲ. ಹಾಗಾದರೆ ಹಿಂದೂ ಅಥವಾ (ನಮಗೆ ಗೊತ್ತಿಲ್ಲ) ಬುಡಕಟ್ಟು ಮಹಿಳೆಯರು ಯಾವ ಅಪಾಯಗಳ ಬಗ್ಗೆ ಎಚ್ಚರದಿಂದ ಇರಬೇಕಾಗಿದೆ ಎಂದು ಹೇಳುವುದು ಅವರ ಉದ್ದೇಶ? ಏಕೆ ಅವರು ಚಿತ್ರ ವೀಕ್ಷಣೆಗೆ ಮುಸ್ಲಿಮೇತರ ಮಹಿಳೆಯರನ್ನು ಮಾತ್ರ ಕರೆದೊಯ್ದರು? ತಮ್ಮ ಪ್ರದೇಶದ ಉಳಿದ ದುಡಿಯುವ ಮಹಿಳೆಯರ ಸುರಕ್ಷತೆಯ ಬಗ್ಗೆ ಯಾಕೆ ಅವರು ಚಿಂತಿಸುತ್ತಿಲ್ಲ?

ಈ ಪ್ರಶ್ನೆಗಳಿಗೆ ಉತ್ತರ ನಮಗೆ ತಿಳಿದಿದೆ. ಕೇರಳ ಸ್ಟೋರಿ ಚಿತ್ರಕ್ಕೆ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳು ತೆರಿಗೆ ವಿನಾಯಿತಿ ನೀಡಿದ್ದು ಏಕೆ ಅಥವಾ ಅದಕ್ಕೂ ಮುಂಚೆ ಕರ್ನಾಟಕ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿ ಈ ಚಿತ್ರದ ಕುರಿತು ಏಕೆ ಪ್ರಚಾರ ಮಾಡಿದರು ಎಂಬ ಪ್ರಶ್ನೆಗಳಿಗೆ ಉತ್ತರ ಗೊತ್ತಿರುವಂತೆ. ‘‘ಈ ಚಿತ್ರದಲ್ಲಿ ಕೇರಳದಲ್ಲಿನ ಅಪಾಯಕಾರಿ ಭಯೋತ್ಪಾದಕತೆಯ ಸಂಚು ಬಯಲಾಗಿದೆ’’ ಎಂದು ಮೋದಿ ಹೇಳಿದರು. ‘‘ಕಾಂಗ್ರೆಸ್ ಈ ಚಿತ್ರದ ವಿರುದ್ಧವಿದೆ, ಅಂದರೆ ಅದು ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ’’ ಎಂದು ಆರೋಪಿಸಿದರು.

ಚಿತ್ರದ ಪರ ವಾದಿಸುವವರು ಹೇಳುತ್ತಿರುವುದು ಇಷ್ಟು: ಈ ಚಿತ್ರ ಭಯೋತ್ಪಾದಕ ಸಂಚಿನ ಕಥೆಯನ್ನು ಕಾಲ್ಪನಿಕ ರೀತಿಯಲ್ಲಿ ಹೇಳುತ್ತಿದೆ. ಆದರೆ ಈ ಸಂಚು ನಿಜವಾಗಿದ್ದು, ಹಿಂದೂ ಮತ್ತು ಕ್ರಿಶ್ಚಿಯನ್ ಮಹಿಳೆಯರನ್ನು ಇಸ್ಲಾಮ್ಗೆ ಪರಿವರ್ತಿಸಿ ಅವರನ್ನು ಭಾರತದಿಂದ ಹೊರಗೆ ಕಳುಹಿಸುವ ಷಡ್ಯಂತ್ರವನ್ನು ಐಸಿಸ್ ಮಾಡುತ್ತಿದೆ. ಈ ಮಹಿಳೆಯರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ನಂತರ ಹೇಗೆ ಮತಾಂತರ ಮಾಡಲಾಗುತ್ತದೆ ಎಂಬುದನ್ನು ಚಿತ್ರ ತೋರಿಸುತ್ತದೆ. ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದವರ ಪ್ರಕಾರ, ಇದು ‘ಲವ್ ಜಿಹಾದ್’. ಕೇರಳ ಈ ಪಿತೂರಿಯ ಕೇಂದ್ರ. ಅಲ್ಲಿಂದ 32,000 ಮಹಿಳೆಯರನ್ನು ಇಸ್ಲಾಮ್ಗೆ ಮತಾಂತರಿಸಲಾಗಿದೆ ಮತ್ತು ಹೊರದೇಶಗಳಿಗೆ ಕಳುಹಿಸಲಾಗಿದೆ. ಈ ದೊಡ್ಡ ಮತ್ತು ಭಯಾನಕ ಪಿತೂರಿ ಮತ್ತು ದುರಂತದ ಕಥೆಯನ್ನು ಈ ಚಿತ್ರ ಹೇಳುತ್ತದೆ.

ಆದರೆ ಇದು ಸಂಪೂರ್ಣ ಸುಳ್ಳು ಎಂದು ‘ಆಲ್ಟ್ ನ್ಯೂಸ್’ ಸಾಬೀತುಪಡಿಸಿದ ಕೂಡಲೇ, ಚಿತ್ರದ ನಿರ್ದೇಶಕ ಮಾತು ಬದಲಿಸಿದರು. 32 ಸಾವಿರ ಮಹಿಳೆಯರಲ್ಲ, ಮೂವರು ಮಹಿಳೆಯರು ಎಂದರು. ಯಾವಾಗ ತಾವು ಹೇಳಿದ ಸುಳ್ಳು ಜಗಜ್ಜಾಹೀರಾಯಿತೋ ಆಗ, ಸಂಖ್ಯೆ ಮುಖ್ಯವಲ್ಲ, ಅದು ಒಬ್ಬ ವ್ಯಕ್ತಿಯ ವಿಚಾರದಲ್ಲಿ ಸಂಭವಿಸಿದರೂ ಅಷ್ಟೇ ಭಯಾನಕ ಎಂದು ಮಾತು ತಿರುಗಿಸಲಾಯಿತು.

ಮೊದಮೊದಲು ಈ ಸುಳ್ಳನ್ನೇ ಒತ್ತಿ ಒತ್ತಿ ಹೇಳುವುದಕ್ಕೆ ಚಿತ್ರದ ನಿರ್ದೇಶಕ ಕೊಂಚವೂ ಹಿಂಜರಿಯಲಿಲ್ಲ. ನೈತಿಕ ಮುಜುಗರವೂ ಇರಲಿಲ್ಲ. ಸಿಕ್ಕಿಹಾಕಿಕೊಂಡಿದ್ದಕ್ಕೆ ನಾಚಿಕೆಯೂ ಆಗಲಿಲ್ಲ. ಇದು ಕಾಲ್ಪನಿಕ ಎಂದು ಚಿತ್ರದ ಆರಂಭದಲ್ಲಿ ಹೇಳಲಾಗುವುದು ಎಂದು ಅವರು ನ್ಯಾಯಾಲಯದ ಮುಂದೆ ಹೇಳಿದರು. ಆದರೆ, ಇಷ್ಟು ದೊಡ್ಡ ಮತ್ತು ಭಯಂಕರ ಸುಳ್ಳನ್ನು ಮೊದಲು ಏಕೆ ಪ್ರಚಾರ ಮಾಡಲಾಯಿತು ಎಂಬ ಪ್ರಶ್ನೆಯೇ ಏಳದೇ ಹೋಯಿತು.

ಚರ್ಚೆಯ ವೇಳೆ ನ್ಯಾಯಾಧೀಶರು ನಕ್ಕರು ಮತ್ತು ತಮಾಷೆ ಮಾಡಿದರು. ದೆವ್ವ ಮತ್ತು ಆತ್ಮಗಳು ಅಸ್ತಿತ್ವದಲ್ಲಿ ಇಲ್ಲದಿದ್ದರೂ ಅವುಗಳ ಬಗ್ಗೆ ಸಿನೆಮಾ ಮಾಡಲಾಗುತ್ತದಲ್ಲವೆ ಎಂದರು. ಆದರೆ ಈ ಸಿನೆಮಾವನ್ನು ಮುಸಲ್ಮಾನರ ವಿರುದ್ಧ ಹಿಂದೂಗಳ ಪೂರ್ವಾಗ್ರಹ ಇನ್ನೂ ಹೆಚ್ಚುವಂತಾಗಲು ಮಾಡಲಾಗಿದೆ ಎಂಬುದು ಮುಸ್ಲಿಮರಿಗೆ ಮಾತ್ರ ಗೊತ್ತು. ಈ ಚಿತ್ರ ನೋಡಿದ ಮೇಲೆ ಮುಸ್ಲಿಮರ ಬಗ್ಗೆ ಪೂರ್ವಗ್ರಹ ಪೀಡಿತವಾಗುವ ಸಾಮಾನ್ಯ ಹಿಂದೂಗಳ ಸಂಖ್ಯೆ ಹೆಚ್ಚುತ್ತದೆ. ಇದು ಮುಸ್ಲಿಮರನ್ನು ಇನ್ನಷ್ಟು ಅಭದ್ರಗೊಳಿಸಲಿದೆ. ಪ್ರತಿಯೊಬ್ಬ ಮುಸ್ಲಿಮನೂ ಈಗ ಶಂಕಿತ. ಈ ಚಿತ್ರವನ್ನು ನೋಡಿದ ನಂತರ ಬಹುತೇಕ ಪ್ರತಿಯೊಬ್ಬ ವಿಮರ್ಶಕ ಇದು ಮುಸ್ಲಿಮರ ವಿರುದ್ಧ ದ್ವೇಷವನ್ನು ಸೃಷ್ಟಿಸುತ್ತದೆ ಮತ್ತು ಆ ಕಾರಣಕ್ಕಾಗಿ ಇದು ಅಪಾಯಕಾರಿ ಎಂದೇ ಹೇಳಿದ್ದಾರೆ. ಇದು ಸಾಮಾಜಿಕ ಸೌಹಾರ್ದವನ್ನು ಕದಡುತ್ತದೆ ಮತ್ತು ಮುಸ್ಲಿಮರ ಬಗ್ಗೆ ಹಿಂದೂಗಳಲ್ಲಿ ದ್ವೇಷ ಮೂಡಿಸುತ್ತದೆ. ಈ ಅನುಮಾನ ಮತ್ತು ದ್ವೇಷ ಈಗಾಗಲೇ ಸಾಕಷ್ಟಿರುವ ಇಂದಿನ ವಾತಾವರಣದಲ್ಲಿ ಅಂಥ ಮತ್ತೊಂದು ಕೃತ್ಯ ಹೇಗೆ ಸಹನೀಯ?

ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಮತ್ತು ಸರಕಾರ ಈ ಚಿತ್ರವನ್ನು ಏಕೆ ಪ್ರಚಾರ ಮಾಡಬೇಕು ಎಂದು ನ್ಯಾಯಾಲಯ ಕೇಳಲಿಲ್ಲ. ನಿರ್ದಿಷ್ಟ ರಾಜಕೀಯ ಸನ್ನಿವೇಶದಲ್ಲಿ ಚಿತ್ರ ನಿರ್ಮಿಸಲಾಗಿದೆ. ಸನ್ನಿವೇಶ ಬಹುಸಂಖ್ಯಾತರ ದ್ವೇಷದ ರಾಜಕೀಯವಾಗಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಮರ ಆತಂಕಕ್ಕೆ ಕಾರಣವಿದ್ದು, ಇದು ಕಳಕಳಿಯ ವಿಷಯವೆಂಬುದನ್ನು ಕೋರ್ಟ್ ಪರಿಗಣಿಸಲೇ ಇಲ್ಲ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ, ದ್ವೇಷದ ಪ್ರೊಪಗಂಡಾಕ್ಕೆ ಕಾನೂನುಬದ್ಧತೆ ಸಿಕ್ಕಿಬಿಟ್ಟಿತು.

ಚಿತ್ರವನ್ನು ನಿಷೇಧಿಸುವುದರಿಂದ ಏನೂ ಆಗುವುದಿಲ್ಲ ಎಂದು ಹಲವರು ಹೇಳುತ್ತಿರುವುದು ಸರಿಯಿರಬಹುದು. ಆದರೆ ಸಿನೆಮಾ ನೋಡಲು ಇಷ್ಟವಿಲ್ಲದವರು ನೋಡಬಾರದು ಅಥವಾ ಚಿತ್ರ ಕೆಟ್ಟದಾಗಿದ್ದರೆ ಜನರಿಂದ ತಿರಸ್ಕೃತವಾಗುತ್ತದೆ ಎಂದು ಹೇಳುವುದು ಒಂದು ರೀತಿಯ ಬಹುಸಂಖ್ಯಾತ ಅಸೂಕ್ಷ್ಮತೆಯ ಪರಿಣಾಮವಷ್ಟೆ. ಈಗ ಇದು ಆಯ್ಕೆಯ ಪ್ರಶ್ನೆಯಾಗಿ ಉಳಿದಿಲ್ಲ. ಮುಸ್ಲಿಮರು ಇನ್ನಷ್ಟು ನಿಂದನೆಗೊಳಗಾಗಲಿರುವುದು ಮತ್ತಷ್ಟು ಅಸುರಕ್ಷತೆಗೆ ಅವರನ್ನು ತಳ್ಳಲಿದೆ. ಈ ನಿಂದನೆಯ ನಂತರ ಅವರ ವಿರುದ್ಧದ ಹಿಂಸಾಚಾರ ಇನ್ನಷ್ಟು ಹೆಚ್ಚಾಗಬಹುದು. ಮಾತ್ರವಲ್ಲ, ಅದು ನ್ಯಾಯಸಮ್ಮತ ಎಂಬ ತರ್ಕವೂ ಹೆಚ್ಚಾಗುತ್ತದೆ. ಈ ಅಭದ್ರತೆ ಬಹುಶಃ ಇತರರಿಗೆ ಅರ್ಥವಾಗದು ಎಂಬುದೇ ಆತಂಕಕಾರಿ.

ಈ ಚಿತ್ರ ಮುಸ್ಲಿಮರ ಜೊತೆಗೇ ಕೇರಳದ ಬಗ್ಗೆಯೂ ದ್ವೇಷವನ್ನು ಹುಟ್ಟುಹಾಕುತ್ತದೆ. ಬಿಜೆಪಿ ಈಗಾಗಲೇ ಕೇರಳವನ್ನು ಭಯೋತ್ಪಾದನೆಯ ಕೇಂದ್ರವೆಂದು ಬಿಂಬಿಸುವ ಮೂಲಕ ಉತ್ತರ ಭಾರತದ ಜನರಲ್ಲಿ ದ್ವೇಷ ಪ್ರಚಾರ ಮಾಡುತ್ತಿದೆ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಚುನಾವಣಾ ಪ್ರಚಾರದ ವೇಳೆ ಕೇರಳದ ವಿರುದ್ಧ ಕರ್ನಾಟಕದ ಜನತೆಗೆ ಎಚ್ಚರಿಕೆ ನೀಡಿದ್ದರು.

ಹಿಂದೂ-ಮುಸ್ಲಿಮ್ ಸಂಬಂಧವನ್ನು ಖಾಸಗಿಯದ್ದೆಂದು ಪರಿಗಣಿಸದ ಮತ್ತು ಮುಸ್ಲಿಮ್ ಜನಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಸಂಘಟಿತ ಪಿತೂರಿಯ ಭಾಗವೆಂದು ನಂಬಲಾದ ದೇಶದಲ್ಲಿ, ಈ ಸಿನೆಮಾ ಅಂಥ ಭಾವನೆಯನ್ನು ಇನ್ನಷ್ಟು ಹೆಚ್ಚುವಂತೆ ಮಾಡುತ್ತದೆ. ಈ ಚಿತ್ರವನ್ನು ನೋಡುವ ಯಾವ ಹಿಂದುವೂ ಇತರ ಯಾವುದೇ ಕಾಲ್ಪನಿಕ ಕಥೆಯಂತೆ ಇದನ್ನು ನೋಡುವುದಿಲ್ಲ ಎಂಬುದೂ ಸ್ಪಷ್ಟ.

ಈ ಚಿತ್ರವನ್ನು ನಿಷೇಧಿಸುವ ಬದಲು ‘ಅಫ್ವಾ’ದಂತಹ ಚಿತ್ರಗಳನ್ನು ಪ್ರಚಾರ ಮಾಡಬೇಕು ಅಥವಾ ಕೇರಳದ ಬಗ್ಗೆ ಪರ್ಯಾಯ ಚಿತ್ರಗಳನ್ನು ಪ್ರದರ್ಶಿಸಬೇಕು ಎಂದು ಹೇಳುವುದು ಸಹ ನಿಷ್ಕಪಟವಾಗಿದೆ. ದ್ವೇಷದ ಪ್ರೊಪಗಂಡಾ ಅಡೆತಡೆಯಿಲ್ಲದೆ ನಡೆಯುವುದರ ಅಪಾಯಗಳು ಅದಕ್ಕೆ ಗುರಿಯಾಗುವವರಿಗೆ ಮಾತ್ರ ಗೊತ್ತು. ಅದು ಅವರ ವಿರುದ್ಧ ಹಿಂಸೆಯನ್ನು ಇನ್ನಷ್ಟಾಗಿಸುತ್ತದೆ ಎಂಬುದೇ ಕರಾಳ ಸತ್ಯ.

ನಾಝಿ ಜರ್ಮನಿಯಲ್ಲಿ ಯೆಹೂದಿಗಳ ಹತ್ಯಾಕಾಂಡದ ಮೊದಲು ಮಾಡಿದ ಚಲನಚಿತ್ರಗಳನ್ನು ಕೆಲವು ಬರಹಗಾರರು ನೆನಪಿಸುತ್ತಾರೆ. ಕೇರಳ ಸ್ಟೋರಿ ಮುಸ್ಲಿಮರನ್ನು ಚಿತ್ರಿಸುವ ರೀತಿಯಲ್ಲಿಯೇ ಯೆಹೂದಿಗಳನ್ನು ಅವು ಚಿತ್ರಿಸುತ್ತವೆ. ಈ ಚಿತ್ರದ ಗಳಿಕೆಯಿಂದ ಮತಾಂತರಕ್ಕೆ ಒಳಗಾದ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸುವ ಪ್ರಯತ್ನಗಳಿಗೆ ಸಹಾಯ ಮಾಡುವುದಾಗಿಯೂ ನಿರ್ದೇಶಕ ಘೋಷಿಸಿದ್ದಾರೆ. ಈ ಘೋಷಣೆಯ ಮರ್ಮವನ್ನೂ ಅರ್ಥ ಮಾಡಿಕೊಳ್ಳಬಹುದಾಗಿದೆ.

‘ಕಾಶ್ಮೀರ್ ಫೈಲ್ಸ್’ ನಂತರ ‘ಕೇರಳ ಸ್ಟೋರಿ’ ನಿರ್ಮಾಣ ಕಾಕತಾಳೀಯವಲ್ಲ. ಈಗ ಇಂತಹ ಚಿತ್ರಗಳ ಮೂಲಕ ಹಣ ಗಳಿಸುವ ಸೂತ್ರವನ್ನು ಕಂಡುಕೊಳ್ಳಲಾಗಿದೆ. ಕಡಿಮೆ ಬಜೆಟಿನ ಚಿತ್ರಗಳು ಕಳಪೆ ನಟನೆ ಮತ್ತು ನಿರ್ದೇಶನವಿದ್ದರೂ ಮುಸ್ಲಿಮರ ವಿರುದ್ಧ ದ್ವೇಷದ ಪ್ರೊಪಗಂಡಾ ಇದ್ದರೆ ಉತ್ತಮ ಗಳಿಕೆಯನ್ನು ಮಾಡಬಹುದು. ಏಕೆಂದರೆ ಅಂಥ ಚಿತ್ರಗಳ ಪ್ರಚಾರದಲ್ಲಿ ಸರಕಾರವೇ ತೊಡಗುತ್ತದೆ ಮತ್ತು ಇಡೀ ಬಿಜೆಪಿ ಅದಕ್ಕಾಗಿ ಕೆಲಸ ಮಾಡುತ್ತದೆ. ಬೇರೆ ಯಾವುದೇ ಚಿತ್ರಕ್ಕಾಗಿ ಯಾರೂ ಇದನ್ನು ಮಾಡಲು ಸಾಧ್ಯವಿಲ್ಲ. ಕೇರಳ ಸ್ಟೋರಿ ಸಾಕಷ್ಟು ಗಳಿಸಿದೆ ಎನ್ನಲಾಗುತ್ತಿದೆ. ಇದು ಮುಸ್ಲಿಮ್ ವಿರೋಧಿ ದ್ವೇಷವನ್ನು ಸಿನಿಮೀಯ ಭಾಷೆಯಲ್ಲಿ ಪ್ರಚಾರ ಮಾಡಲು ಹೆಚ್ಚಿನ ಚಲನಚಿತ್ರ ನಿರ್ಮಾಪಕರನ್ನು ಪ್ರೇರೇಪಿಸುತ್ತದೆ. ಈ ಮಧ್ಯೆ, ಈ ಚಿತ್ರಕ್ಕೂ ಮುಸ್ಲಿಮರ ಮೇಲಿನ ಹಿಂಸಾಚಾರದ ಘಟನೆಗಳಿಗೂ ನೇರ ಸಂಬಂಧವಿದೆ ಎಂದು ಯಾರೂ ಹೇಳಕೂಡದು ಎಂಬಂತಾಗಿದೆ.

(ಕೃಪೆ: thewire.in)

Similar News