ಅಮೆರಿಕ ಅಧ್ಯಕ್ಷರ ಹತ್ಯೆ ಬೆದರಿಕೆ: ಭಾರತೀಯ ಮೂಲದ ಯುವಕನ ಬಂಧನ

Update: 2023-05-24 13:35 GMT

ವಾಷಿಂಗ್ಟನ್: ಶ್ವೇತ ಭವನದ ಸುತ್ತಲಿನ ಉದ್ಯಾನವನದ ಬಳಿ ಉದ್ದೇಶಪೂರ್ವಕವಾಗಿ ಯು-ಹಾಲ್ ಟ್ರಕ್ ಅನ್ನು ಭದ್ರತಾ ತಡೆಗೋಡೆಗೆ ಗುದ್ದಿದ ಆರೋಪದಲ್ಲಿ ಮಿಸ್ಸೋರಿಯ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು indianexpress.com ವರದಿ ಮಾಡಿದೆ. 

ಬಂಧಿತ ಯುವಕನನ್ನು ಮಿಸೋರಿಯ ಸೇಂಟ್ ಲೂಯಿಸ್ ಉಪನಗರವಾದ ಚೆಸ್ಟರ್‍ ಫೀಲ್ಸ್ ನಿವಾಸಿಯಾದ 19 ವರ್ಷದ ಸಾಯಿ ವರ್ಷಿತ್ ಕಂಡುಲ ಎಂದು ಗುರುತಿಸಲಾಗಿದ್ದು, ಆತ ತನ್ನ ಕಾರನ್ನು ಸೋಮವಾರ ರಾತ್ರಿ 10 ಗಂಟೆಯ ಸಮಯದಲ್ಲಿ ಲಫಯೆಟ್ ಚೌಕದ ಉತ್ತರ ಭಾಗದಲ್ಲಿ ಭದ್ರತಾ ತಡೆಗೋಡೆಗೆ ಗುದ್ದಿಸಿದ ಎಂದು ಪ್ರಕಟಣೆಯಲ್ಲಿ ಸೀಕ್ರೆಟ್ ಸರ್ವಿಸ್ ಹೇಳಿದೆ. ಈ ಘಟನೆಯಲ್ಲಿ ಯಾವುದೇ ವ್ಯಕ್ತಿಗೆ ಗಾಯಗಳಾಗಿಲ್ಲ.

ಭದ್ರತಾ ತಡೆಗೋಡೆಗೆ ಗುದ್ದಿದ ನಂತರ ಕಾರಿನಿಂದ ಕೆಳಗಿಳಿದಿರುವ ಕಂಡುಲ, ಪಾರ್ಕ್ ಪೊಲೀಸರು ಹಾಗೂ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ತನ್ನನ್ನು ಸಮೀಪಿಸುತ್ತಿದ್ದಂತೆಯೆ ನಾಝಿ ಧ್ವಜ ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದ್ದಾನೆ ಎಂದು ಘಟನೆಯ ಪ್ರತ್ಯಕ್ಷದರ್ಶಿಗಳು The Associated Press ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. 

ತನಿಖಾಧಿಕಾರಿಗಳು ಆತನನ್ನು ವಿಚಾರಣೆಗೊಳಪಡಿಸಿದಾಗ, ನಾನು ಸರ್ಕಾರವನ್ನು ವಶಕ್ಕೆ ತೆಗೆದುಕೊಳ್ಳಲು ಬಂದಿದ್ದೇನೆ ಹಾಗೂ ಅಧ್ಯಕ್ಷ ಜೋ ಬೈಡನ್ ಅವರನ್ನು ಹತ್ಯೆಗೈಯ್ಯಲು ಬಯಸಿದ್ದೇನೆ ಎಂದು ಕಂಡುಲ ಉತ್ತರಿಸಿದ್ದಾನೆ. 

ಈ ಕುರಿತು ಯಾವುದೇ ನಿರ್ದಿಷ್ಟ ವಿವರಗಳನ್ನು ಸಾರ್ವಜನಿಕವಾಗಿ ಚರ್ಚಿಸಲು ಅಧಿಕಾರ ನೀಡಲಾಗಿಲ್ಲ ಹಾಗೂ ತಮ್ಮ ಹೆಸರನ್ನು ಗೌಪ್ಯವಾಗಿಡಬೇಕು ಎಂದು ಷರತ್ತು ಒಡ್ಡಿರುವ ತನಿಖಾಧಿಕಾರಿಗಳು The Associated Press ಸುದ್ದಿ ಸಂಸ್ಥೆಗೆ ಈ ಕುರಿತು ಮಾಹಿತಿ ನೀಡಿದ್ದಾರೆ. 

ಯು-ಹಾಲ್ ಟ್ರಕ್ ಅನ್ನು ವರ್ಜಿನಿಯಾದ ಹರ್ನ್‍ಡಾನ್‍ನಿಂದ ಬಾಡಿಗೆ ಪಡೆದಿದ್ದ ಕಂಡುಲ, ಅದಕ್ಕಾಗಿ ಮಾನ್ಯತೆ ಹೊಂದಿರುವ ಗುತ್ತಿಗೆ ಪತ್ರವನ್ನು ತನ್ನ ಹೆಸರಿನಲ್ಲೇ ಹೊಂದಿದ್ದಾನೆ ಎಂದು ಯು-ಹಾಲ್ ಟ್ರಕ್ ತಯಾರಿಕಾ ಸಂಸ್ಥೆ ಸ್ಪಷ್ಟಪಡಿಸಿದೆ. 

ಯು-ಹಾಲ್ ತಯಾರಿಕಾ ಸಂಸ್ಥೆಯ ಪ್ರಕಾರ, ಯು-ಹಾಲ್ ಕಾರನ್ನು ಬಾಡಿಗೆ ಪಡೆಯುವವರು 18 ವರ್ಷ ವಯಸ್ಸಿನ ಮೇಲ್ಪಟ್ಟವರಾಗಿರಬೇಕು ಹಾಗೂ ಆತನ ಗುತ್ತಿಗೆಯನ್ನು ತಡೆಹಿಡಿಯಲು ಆತನ ಬಾಡಿಗೆ ದಾಖಲೆಯಲ್ಲಿ ಯಾವುದೇ ಕೆಂಪು ಎಚ್ಚರಿಕೆ ಇರಲಿಲ್ಲ ಎಂದು ತಿಳಿಸಿದೆ. 

ಘಟನೆಯ ಕುರಿತು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರಿಗೆ ಮಂಗಳವಾರ ಬೆಳಗ್ಗೆ ಸೀಕ್ರೆಟ್ ಸರ್ವಿಸ್ ಹಾಗೂ ಪಾರ್ಕ್ ಪೊಲೀಸರು ವಿವರಿಸಿದ್ದಾರೆ ಎಂದು ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರಿನ್ ಜೀನ್ ಪಿಯರ್ ತಿಳಿಸಿದ್ದಾರೆ.
“ಕಳೆದ ರಾತ್ರಿಯ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲದಿರುವುದರಿಂದ ಆತನನ್ನು ಬಿಡುಗಡೆ ಮಾಡಲಾಗಿದೆ” ಎಂದೂ ಅವರು ತಿಳಿಸಿದ್ದಾರೆ.

Similar News