ವಸಾಹತುಗಳಿಗೆ ಬೃಹತ್ ಅನುದಾನದ ಬಜೆಟ್‍ಗೆ ಇಸ್ರೇಲ್ ಅನುಮೋದನೆ: ವ್ಯಾಪಕ ಪ್ರತಿಭಟನೆ

Update: 2023-05-24 17:28 GMT

ಜೆರುಸಲೇಂ, ಮೇ 24: ವಸಾಹತುಗಳಿಗೆ, ಸಂಪ್ರದಾಯವಾದಿಗಳಿಗೆ ಬೃಹತ್ ಮೊತ್ತದ ಅನುದಾನ ಕಲ್ಪಿಸುವ ಹೊಸ ಬಜೆಟ್‍ಗೆ ಬುಧವಾರ ಬೆಂಜಮಿನ್ ನೆಥನ್ಯಾಹು ನೇತೃತ್ವದ ಇಸ್ರೇಲ್ ಸರಕಾರ ಅನುಮೋದನೆ ನೀಡಿದ್ದು ಈ ನಡೆಯು ಆಡಳಿತಾರೂಢ ಸಮ್ಮಿಶ್ರ ಸರಕಾರಕ್ಕೆ ಸ್ವಲ್ಪಮಟ್ಟಿನ ಸ್ಥಿರತೆ ತರುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಆದರೆ ಬೆಂಜಮಿನ್ ಸರಕಾರದ ಏಕಪಕ್ಷೀಯ ನಿರ್ಧಾರಗಳು ದೇಶವನ್ನು ವಿಭಜನೆಯತ್ತ ಕೊಂಡೊಯ್ಯುತ್ತಿದೆ ಎಂದು ವ್ಯಾಪಕ ವಿರೋಧ, ಅಸಮಾಧಾನ ವ್ಯಕ್ತವಾಗಿದ್ದು ಸಂಸತ್ ಭವನದ ಎದುರು ಬಜೆಟ್ ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

ಈ ಕ್ರಮದ ಮೂಲಕ  ಸರಕಾರದ ಭಾಗವಾಗಿರುವ ಕಟ್ಟಾ ಸಂಪ್ರದಾಯವಾದಿ, ಅತಿ ರಾಷ್ಟ್ರೀಯವಾದಿ ಪಕ್ಷಗಳ ಮನವೊಲಿಸುವಲ್ಲಿ ನೆತನ್ಯಾಹು ಸಫಲವಾದರೂ ಇಸ್ರೇಲ್‍ನಲ್ಲಿನ ವಿಭಜನೆ(ಭಿನ್ನಾಭಿಪ್ರಾಯ)ಯನ್ನು ಇನ್ನಷ್ಟು ತೀವ್ರಗೊಳಿಸುವ ನಿರೀಕ್ಷೆಯಿದೆ. ಆರ್ಥಿಕತೆ ಮತ್ತು ವಿಶಾಲ ಸಮಾಜಕ್ಕೆ ಕಡಿಮೆ ಪ್ರಯೋಜನ ಹೊಂದಿರುವ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಹೆಚ್ಚಿನ ಖರ್ಚು-ವೆಚ್ಚ ಮಾಡುವ ಮೂಲಕ ಕಟ್ಟಾ ಸಂಪ್ರದಾಯವಾದಿ ಮಿತ್ರಪಕ್ಷಗಳನ್ನು ಸಂತುಷ್ಟಗೊಳಿಸಲು ನೆತನ್ಯಾಹು ಮುಂದಾಗಿದ್ದಾರೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ.

ನೆತನ್ಯಾಹು ಸರಕಾರ ಮಂಡಿಸಿದ ಬಜೆಟ್ ಬಗ್ಗೆ ಇಸ್ರೇಲ್ ಸಂಸತ್ತಿನಲ್ಲಿ ಸುದೀರ್ಘ ಚರ್ಚೆ ನಡೆದು ಬಳಿಕ ಮತಕ್ಕೆ ಹಾಕಿದಾಗ ಬಜೆಟ್ ಪರ 64, ವಿರುದ್ಧ 56 ಮತ ಚಲಾವಣೆಯಾಗಿ ಸರಕಾರ ಮೇಲುಗೈ ಪಡೆದಿದೆ. `ಅಂತಿಮವಾಗಿ ನಮಗೆ ಕೆಲಸ ಮಾಡುವ ಸಾಧನ ದೊರಕಿದೆ. ಇನ್ನು ಮುಂದೆ ಶರ್ಟ್‍ನ ಕೈಯನ್ನು ಮಡಚಿಕಟ್ಟಿ ಕೆಲಸಕ್ಕೆ ಮುಂದಾಗುವುದಷ್ಟೇ ಉಳಿದಿದೆ' ಎಂದು ಇಸ್ರೇಲ್‍ನ ವಿತ್ತಸಚಿವ ಬೆಝಾಲೆಲ್ ಸ್ಮೊಟ್ರಿಚ್ ಮತದಾನದ ಬಳಿಕ ಪ್ರತಿಕ್ರಿಯಿಸಿದ್ದಾರೆ.

ಹೊಸ ಬಜೆಟ್‍ನಲ್ಲಿ ಸುಮಾರು 4 ಶತಕೋಟಿ ಡಾಲರ್ ಮೊತ್ತವನ್ನು ವಿವೇಚನಾ ನಿಧಿಯಾಗಿ ಮೀಸಲಿರಿಸಿದ್ದು, ಇದರಲ್ಲಿ ಹೆಚ್ಚಿನ ಪಾಲು ಕಟ್ಟಾ ಸಂಪ್ರದಾಯವಾದಿ ಮತ್ತು ವಸಾಹತುಗಾರರ ಪರವಿರುವ ಪಕ್ಷಗಳಿಗೆ ಸಲ್ಲಲಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.  ಧಾರ್ಮಿಕ ಶಾಲೆಗಳಲ್ಲಿ ಪೂರ್ಣಾವಧಿ ಶಿಕ್ಷಣ ಪಡೆಯುವ ಕಟ್ಟ ಸಂಪ್ರದಾಯವಾದಿ ಪುರುಷರಿಗೆ ಸ್ಟೈಪೆಂಡ್ ನೀಡುವ ವಿವಾದಾತ್ಮಕ ಅಂಶವೂ ಬಜೆಟ್‍ನಲ್ಲಿ ಸೇರಿದೆ.

ಇಸ್ರೇಲ್‍ನಲ್ಲಿ ಪುರುಷರು ಸೇನೆಯಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸುವ ನಿಯಮದಿಂದ ಕಟ್ಟಾ ಸಂಪ್ರದಾಯವಾದಿ ಪುರುಷರಿಗೆ (ಧಾರ್ಮಿಕ ಶಿಕ್ಷಣ ಪಡೆಯುವ) ವಿನಾಯಿತಿ ನೀಡುವ ಉದ್ದೇಶ ಈ ಯೋಜನೆಯ ಹಿಂದಿದೆ ಎಂಬ ಟೀಕೆ ವ್ಯಕ್ತವಾಗಿದೆ. ಅಲ್ಲದೆ, ಈಗಿನ ವ್ಯವಸ್ಥೆಗೆ ಸೂಕ್ತವಾದ ಗಣಿತ ಮತ್ತು ಇಂಗ್ಲಿಷ್ ಕಲಿಸದ, ಕಟ್ಟಾ ಸಂಪ್ರದಾಯವಾದಿಗಳ ಶಾಲೆಗೆ ಹೆಚ್ಚಿನ ಅನುದಾನ ಒದಗಿಸಲಾಗಿದೆ. ಅಲ್ಲದೆ ವಸಾಹತುಗಾರರ ಪರವಿರುವ ಪಕ್ಷಗಳು ತಮ್ಮ ಹಿಡಿತದಲ್ಲಿರುವ ಇಲಾಖೆಗಳ ಮೂಲಕ ಜನಪ್ರಿಯ ಯೋಜನೆಗಳನ್ನು ಅನುಷ್ಟಾನಗೊಳಿಸಲು ಕೋಟ್ಯಾಂತರ ಡಾಲರ್ ನಿಧಿಯನ್ನು ಮೀಸಲಿರಿಸಲಾಗಿದೆ.

ಮುಂದಿನ ವರ್ಷಗಳಲ್ಲಿ ವೆಸ್ಟ್‍ಬ್ಯಾಂಕ್ ಜನಸಂಖ್ಯೆಯನ್ನು ದುಪ್ಪಟ್ಟುಗೊಳಿಸುವ ಆಶಯಕ್ಕೆ ಈ ಬಜೆಟ್ ಪೂರಕವಾಗಿದೆ ಎಂದು ವಿತ್ತಸಚಿವ ಬೆಝನೆಲ್ ಸ್ಮೊಟ್ರಿಚ್ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಬಜೆಟ್ ವಿರೋಧಿಸಿ ಸಂಸತ್ ಭವನದ  ಹೊರಗೆ ಸಾವಿರಾರು ಮಂದಿ ಇಸ್ರೇಲ್‍ನ ಧ್ವಜ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.  ಸರಕಾರದ ಸಂಯೋಜನೆ ಮತ್ತು ಕಾರ್ಯಸೂಚಿಯು ದೇಶವನ್ನು ವಿಭಜಿಸುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ. 

Similar News