ಗೋಶಾಲೆಗಳಿಗೆ ನೀಡುವ ಅನುದಾನ 'ಗ್ಯಾರಂಟಿ ಯೋಜನೆ'ಗಳಿಗೆ ಬಳಕೆಯಾಗಲಿ

Update: 2023-05-25 04:42 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

'ನಾಡಿನ ಶಾಂತಿ, ಸುವ್ಯವಸ್ಥೆ ಹದಗೆಟ್ಟರೆ ಹಿರಿಯ ಪೊಲೀಸ್ ಅಧಿಕಾರಿಗಳೇ ಹೊಣೆ' ಎಂದು ಮಂಗಳವಾರ ವಿಧಾನಸೌಧದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ಪೊಲೀಸ್ ಇಲಾಖೆಗಳ ದೌರ್ಬಲ್ಯಗಳ ಅರಿವಿದ್ದಾಗ ಮಾತ್ರ ವಿಭಜನಕಾರಿ ಶಕ್ತಿಗಳು ದುಷ್ಕೃತ್ಯಗಳನ್ನು ಎಸಗುವ ಧೈರ್ಯ ತೋರಿಸುತ್ತಾರೆ. ಒಂದು ಪ್ರದೇಶ ನಿರಂತರವಾಗಿ ಕೋಮುಗಲಭೆಗಳಿಂದ ತತ್ತರಿಸುತ್ತಿದೆಯೆಂದಾದರೆ ಅದರ ಅರ್ಥ, ಕಾನೂನು ಸುವ್ಯವಸ್ಥೆ ಆ ಗಲಭೆಯನ್ನು ವೌನವಾಗಿ ಪೋಷಿಸುತ್ತಿದೆ ಎಂದು. ಗುಜರಾತ್, ಮುಂಬೈ, ದಿಲ್ಲಿ ಗಲಭೆಗಳಲ್ಲಿ ಪೊಲೀಸರ ನೇರ ಪಾತ್ರಗಳನ್ನು ಗುರುತಿಸಲಾಗಿದೆ. ಯಾವಾಗಲ್ಲೆಲ್ಲ ಪೊಲೀಸ್ ಇಲಾಖೆ ಅಸಹಾಯಕತೆ ಪ್ರದರ್ಶಿಸಿದೆಯೋ, ಆ ಸಂದರ್ಭಗಳನ್ನು ದುಷ್ಕರ್ಮಿಗಳು ಸಮಾಜದ ಶಾಂತಿ ಕೆಡಿಸಲು ಬಳಸಿಕೊಂಡಿದ್ದಾರೆ. ಆದುದರಿಂದ, ಯಾವುದೇ ಗಲಭೆಗಳಿಗೆ ಮೊದಲ ಹೊಣೆಗಾರರು ಪೊಲೀಸ್ ಅಧಿಕಾರಿಗಳೇ ಆಗಿರುತ್ತಾರೆ. ಕರ್ನಾಟಕ ಪೊಲೀಸರು ಸಮರ್ಥರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅನೇಕ ಸಂದರ್ಭದಲ್ಲಿ ರಾಜಕೀಯ ಶಕ್ತಿಗಳು ಅವರ ಕೈಗಳನ್ನು ಕಟ್ಟಿ ಹಾಕುತ್ತವೆ. ಪೊಲೀಸ್ ಇಲಾಖೆಯಲ್ಲಿ ರಾಜಕಾರಣಿಗಳು ಹಸ್ತಕ್ಷೇಪ ಮಾಡಿದಷ್ಟು ನಾಡಿನಲ್ಲಿ ಅರಾಜಕತೆ ಹೆಚ್ಚುತ್ತವೆ. ಈ ನಿಟ್ಟಿನಲ್ಲಿ, ಮೊತ್ತ ಮೊದಲಾಗಿ ಸರಕಾರದೊಳಗಿರುವ ರಾಜಕೀಯ ನಾಯಕರು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಅವಕಾಶ ನೀಡಬೇಕು. ಸಮಾಜದ ಶಾಂತಿ ಕಾಪಾಡುವುದಕ್ಕೆ ಪೂರಕವಾಗಿ ಪೊಲೀಸರ ಮೇಲೆ ಒತ್ತಡಗಳಿರಬೇಕೇ ಹೊರತು, ದುಷ್ಕರ್ಮಿಗಳನ್ನು ರಕ್ಷಿಸುವುದಕ್ಕಲ್ಲ. ರಾಜಕಾರಣಿಗಳಿಂದ ಪೊಲೀಸ್ ಇಲಾಖೆಗಳನ್ನು ಸ್ವತಂತ್ರಗೊಳಿಸಿದ ಬಳಿಕ ಬೇಜವಾಬ್ದಾರಿಗಳಿಗೆ ಪೊಲೀಸರನ್ನು ಹೊಣೆ ಮಾಡಬೇಕು.

ಇದೇ ಸಂದರ್ಭದಲ್ಲಿ 'ಪೊಲೀಸ್ ಇಲಾಖೆ ಕೇಸರೀಕರಣಗೊಳ್ಳುತ್ತಿರುವುದರ ಬಗ್ಗೆ' ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ರಾಜಕಾರಣಿಗಳ ಒತ್ತಡಗಳಾಚೆ ಸೈದ್ಧಾಂತಿಕವಾಗಿ ಕಲುಷಿತಗೊಂಡ ಒಂದಿಷ್ಟು ಮನಸ್ಸುಗಳು ಪೊಲೀಸ್ ಇಲಾಖೆಯನ್ನು ನಿಯಂತ್ರಿಸಿ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಕೆಡಿಸುತ್ತಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿವೆ. ಸಂಘಪರಿವಾರದ ಕಾರ್ಯಕರ್ತರೊಂದಿಗೆ ಪೊಲೀಸ್ ಇಲಾಖೆ ಹೊಂದಿರುವ ಅನೈತಿಕ ಸಂಬಂಧದ ಕಾರಣಗಳಿಂದಲೇ, ಬೀದಿಗಳಲ್ಲಿ ಅನೈತಿಕ ಪೊಲೀಸರು ವಿಜೃಂಭಿಸುತ್ತಿದ್ದಾರೆ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಸಂಘಪರಿವಾರದ ಕಾರ್ಯಕರ್ತರು ಅಮಾಯಕರಿಗೆ ಥಳಿಸಿ, ಆ ಬಳಿಕ ಅವರನ್ನು ಪೊಲೀಸ್ ಠಾಣೆಗೆ ಕರೆ ತರುತ್ತಾರೆ. ಅಲ್ಲಿ, ಥಳಿತಕ್ಕೊಳಪಟ್ಟ ಸಂತ್ರಸ್ತರ ಮೇಲೆಯೇ ಕೇಸು ದಾಖಲಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಸಾರ್ವಜನಿಕವಾಗಿ ಥಳಿಸಿದ ಸಂಘಪರಿವಾರದ ಕಾರ್ಯಕರ್ತರ ಮೇಲೆ ಪೊಲೀಸರು ಯಾವುದೇ ಕೇಸುಗಳನ್ನು ದಾಖಲಿಸುವುದಿಲ್ಲ. ಪೊಲೀಸ್ ಇಲಾಖೆಯೊಳಗೂ ಕೇಸರಿ ಮನಸ್ಥಿತಿ ತುಂಬಿಕೊಂಡಿರುವ ಕಾರಣದಿಂದ ಇದು ಯಾವುದೇ ಅಡೆತಡೆಗಳಿಲ್ಲದೆ ನಡೆದು ಕೊಂಡು ಬರುತ್ತಿದೆೆ. ಇತ್ತೀಚೆಗೆ ಮಂಡ್ಯದಲ್ಲಿ ಅಮಾಯಕನ ಕೊಲೆ ಆರೋಪದಲ್ಲಿ ಬಂಧಿಸಲ್ಪಟ್ಟ ಪುನೀತ್ ಕೆರೆಹಳ್ಳಿ ಎಂಬ ದುಷ್ಕರ್ಮಿ ಸುಲಭದಲ್ಲಿ ಜಾಮೀನು ಪಡೆದು ಹೊರಬರುವುದಕ್ಕೂ ಪೊಲೀಸರ ನಿಷ್ಕ್ರಿಯತೆಯೇ ಕಾರಣವಾಗಿತ್ತು. ಪೊಲೀಸರು ಈತನ ವಿರುದ್ಧ ಬಲವಾದ ಎಫ್‌ಐಆರ್ ದಾಖಲಿಸಿದ್ದಿದ್ದರೆ, ಸುಲಭದಲ್ಲಿ ಜಾಮೀನು ದೊರಕುತ್ತಿರಲಿಲ್ಲ. ಮಂಡ್ಯದಲ್ಲಿ ನಡೆದ ಕಗ್ಗೊಲೆಯಲ್ಲಿ ಪೊಲೀಸರ ಪಾತ್ರದ ಬಗ್ಗೆಯೂ ಸಾರ್ವಜನಿಕರು ಅನುಮಾನಿಸುತ್ತಿದ್ದಾರೆ. ಈ ಕಾರಣದಿಂದ, ಪೊಲೀಸ್ ಇಲಾಖೆ ಯೊಳಗೆ ತಳಸ್ತರದಲ್ಲಿ ತುಂಬಿಕೊಂಡಿರುವ ಕೇಸರಿ ಮನಸ್ಥಿತಿಗಳನ್ನು ಗುಡಿಸಿ ಹಾಕುವುದು ಗೃಹ ಇಲಾಖೆಯ ಮುಂದಿರುವ ಅತಿ ದೊಡ್ಡ ಸವಾಲಾಗಿದೆ.

ಸರಕಾರ ಬದಲಾಗಿರಬಹುದು. ಆದರೆ ಪೊಲೀಸ್ ಇಲಾಖೆಯಲ್ಲಿ, ಆರೆಸ್ಸೆಸ್‌ನಿಂದ ಮೆದುಳು ತೊಳೆಸಿಕೊಂಡ ದೊಡ್ಡ ಸಂಖ್ಯೆಯ ಸಿಬ್ಬಂದಿಯಿದ್ದಾರೆ. ಸಮಾಜವನ್ನು ಒಡೆಯುವ ಶಕ್ತಿಗಳ ಜೊತೆಗೆ ಇವರು ಪರೋಕ್ಷವಾಗಿ ಕೈ ಜೋಡಿಸುತ್ತಿರುವ ಕಾರಣದಿಂದಾಗಿ ಸರಕಾರ ಯಾವುದೇ ಬಂದರೂ, ಕೆಲವೊಮ್ಮೆ ಗಲಭೆಗಳು ಸಂಭವಿಸುತ್ತವೆ. 'ಪೊಲೀಸ್ ಇಲಾಖೆಯ ಕೇಸರೀಕರಣ'ದ ಬಗ್ಗೆ ಮಾತನಾಡುತ್ತಿ ದ್ದಂತೆಯೇ, ಸಂಘಪರಿವಾರ ಕೆರಳುವುದು ಇದೇ ಕಾರಣಕ್ಕೆ. ಯಾಕೆಂದರೆ ಇಂದು ಸಂಘಪರಿವಾರ ಎಲ್ಲ ದುಷ್ಕೃತ್ಯಗಳನ್ನು ಎಸಗಿಯೂ ಸಮಾಜದಲ್ಲಿ ಯಾವ ಅಂಜಿಕೆಯೂ ಇಲ್ಲದೆ ಓಡಾಡುತ್ತಿರುವುದು ಈ ಪೊಲೀಸ್ ಇಲಾಖೆಯೊಳಗಿರುವ ಮನಸ್ಥಿತಿ ಗಳಿಂದ. ಇವರೇ ಸಂಘಪರಿವಾರದ ನೈತಿಕ ಶಕ್ತಿ. ಆದುದರಿಂದ, ಸಂಘಪರಿವಾರದ ಜೊತೆಗೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿರುವ ಪೊಲೀಸ್ ಸಿಬ್ಬಂದಿಯನ್ನು, ಅಧಿಕಾರಿಗಳನ್ನು ಗುರುತಿಸಿ ಅವರನ್ನು ಪರಿವರ್ತಿಸುವ ಕೆಲಸವನ್ನು ಸರಕಾರ ಮಾಡಬೇಕು. ಇಲ್ಲವಾದರೆ, 'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಲಭೆಗಳು ಸಂಭವಿಸುತ್ತವೆ' ಎನ್ನುವ ಗೃಹ ಸಚಿವ ಅಮಿತ್ ಶಾ ಮಾತುಗಳನ್ನು ಈ ಪೊಲೀಸರೇ ನಿಜ ಮಾಡಿ ತೋರಿಸುತ್ತಾರೆ.

ಎಲ್ಲ ನಕಲಿ ಗೋರಕ್ಷಣಾ ಪಡೆಗಳನ್ನು ಮಟ್ಟಹಾಕುವ ಕೆಲಸ ಪೊಲೀಸ್ ಇಲಾಖೆಯಿಂದ ನಡೆಯಬೇಕು. ಈ ಪಡೆಗಳಿಗೂ ಗೋರಕ್ಷಣೆಗೂ ಯಾವ ಸಂಬಂಧವೂ ಇಲ್ಲ ಎನ್ನುವುದು ಪೊಲೀಸರಿಗೆ ಚೆನ್ನಾಗಿಯೇ ಗೊತ್ತಿದೆ. ಈ ನಾಡಿನ ನಿಜವಾದ ಗೋರಕ್ಷಕರು ಗೋವುಗಳನ್ನು ಸಾಕುವ ರೈತರು. ಸಂಘಪರಿವಾರದ ಗೋರಕ್ಷಕ ಪಡೆಗಳು ಗೋವುಗಳನ್ನು ಸಾಕುವ ರೈತರಿಗೆ ಮಾರಕವಾಗಿ ಪರಿಣಮಿಸಿದ್ದಾರೆ. ತಮ್ಮದೇ ಗೋವುಗಳನ್ನು ಇನ್ನೊಬ್ಬರಿಗೆ ಮಾರುವ ಹಕ್ಕುಗಳನ್ನು ರೈತರು ಕಳೆದುಕೊಂಡು ನಷ್ಟ ಅನುಭವಿಸಿ ಗೋಸಾಕಣೆಯಿಂದ ದೂರ ಸರಿಯುತ್ತಿದ್ದಾರೆ. ಈ ನಾಡಿನಲ್ಲಿ ಗೋಸಾಕಣೆದಾರರು ಉಳಿಯಬೇಕಾದರೆ, ಹೈನೋದ್ಯಮ ಬೆಳೆಯಬೇಕಾದರೆ ಮೊತ್ತ ಮೊದಲು ಈ ನಕಲಿ ಗೋರಕ್ಷಕ ಪಡೆಗಳನ್ನು ನಿಷೇಧಿಸಬೇಕು. ಗೋವುಗಳನ್ನು ಸಾಗಿಸುವ ಸಂದರ್ಭದಲ್ಲಿ ಗೋರಕ್ಷಕರೆಂದು ಯಾರಾದರೂ ತಡೆದು ರೈತರಿಗೆ, ವ್ಯಾಪಾರಿಗಳಿಗೆ ಕಿರುಕುಳ ನೀಡಿದರೆ ಅವರ ಮೇಲೆ ಗೂಂಡಾಕಾಯ್ದೆಯಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಇದೇ ಸಂದರ್ಭದಲ್ಲಿ ಗೋಹತ್ಯೆ ನಿಷೇಧದ ಹೆಸರಿನಲ್ಲಿ ಅನುಪಯುಕ್ತ ಗೋವುಗಳನ್ನು ಮಾರುವ ಹಕ್ಕನ್ನು ರೈತರಿಂದ ಕಿತ್ತುಕೊಳ್ಳಲಾಗಿದೆ. ಈ ಕಾನೂನನ್ನು ಬಳಸಿಕೊಂಡು ನಕಲಿ ಗೋರಕ್ಷಕ ಪಡೆಗಳು ರೈತರು, ವ್ಯಾಪಾರಿಗಳನ್ನು ಬೆದರಿಸಿ ಅವರ ಮೇಲೆ ಹಲ್ಲೆಗಳನ್ನು ಎಸಗುತ್ತಿದ್ದಾರೆ, ಹೆದ್ದಾರಿ ದರೋಡೆಗಳಿಗೆ ಇಳಿದಿದ್ದಾರೆ. ನಾಡಿನ ನಿಜವಾದ ಗೋರಕ್ಷಕರಿಗೆ, ಗೋಸಾಕಾಣೆಗಾರರಿಗೆ ಈ ನಕಲಿ ಗೋರಕ್ಷಕ ಪಡೆಗಳಿಂದ ಮುಕ್ತಿ ಸಿಗಬೇಕಾದರೆ, ಈ ಗೋಹತ್ಯೆ ನಿಷೇಧವೆನ್ನುವ ಅವೈಜ್ಞಾನಿಕ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು. ತಮ್ಮ ಜಾನುವಾರುಗಳನ್ನು ಸಾಕುವ, ಮಾರಾಟ ಮಾಡುವ ರೈತರ ಹಕ್ಕುಗಳನ್ನು ಅವರಿಗೆ ಮರಳಿಸಬೇಕು. ಈ ಮೂಲಕ ನಷ್ಟದಲ್ಲಿರುವ ಹೈನೋದ್ಯಮಗಳನ್ನು ಮತ್ತೆ ಲಾಭದಾಯಕವನ್ನಾಗಿಸಬೇಕು. ಜೊತೆಗೆ ಅನುಪಯುಕ್ತ ಜಾನುವಾರುಗಳನ್ನು ಸಾಕುವ ಅನಗತ್ಯ ಹೊರೆಯಿಂದ ಸರಕಾರ ಕಳಚಿಕೊಂಡು, ಅಕ್ರಮಗಳ ಬೀಡಾಗಿರುವ ಗೋಶಾಲೆಗಳಿಗೆ ವ್ಯಯ ಮಾಡುವ ಹಣವನ್ನು 'ಗ್ಯಾರಂಟಿ' ಯೋಜನೆಗಳಿಗಾಗಿ ವ್ಯಯ ಮಾಡಬೇಕು.

Similar News