ತಂತ್ರಜ್ಞಾನ ಕುತಂತ್ರಕ್ಕೆ ಬಳಕೆಯಾಗದಿರಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮೂರು ವರ್ಷಗಳ ಹಿಂದೆ ಇಸ್ರೇಲ್‌ನ ಸೈಬರ್ ಭದ್ರತಾ ಸಂಸ್ಥೆ ಅಭಿವೃದ್ಧಿ ಪಡಿಸಿ ಮಾರಾಟ ಮಾಡಿದ್ದ ‘ಪೆಗಾಸಸ್’ ಗೂಢಚಾರಿಕೆಯ ತಂತ್ರಾಂಶ ಭಾರತದಲ್ಲಿ ಭಾರೀ ಸುದ್ದಿ ಮಾಡಿತ್ತು. ಇಸ್ರೇಲ್ ಇದನ್ನು ಕೆಲವು ಸ್ಥಾಪಿತ ಸರಕಾರಗಳಿಗೆ, ಸರಕಾರದ ಗುಪ್ತಚರ ಸಂಸ್ಥೆಗಳಿಗೆ ಮಾರಾಟ ಮಾಡಿರುವುದು ಮಾಧ್ಯಮಗಳಲ್ಲಿ ಬಹಿರಂಗವಾಗಿತ್ತು. ಹಾಗೆ ಕೊಂಡುಕೊಂಡ ದೇಶಗಳಲ್ಲಿ ಭಾರತವೂ ಸೇರಿದೆ ಎನ್ನುವ ಆರೋಪ ಟೀಕೆ-ಪ್ರತಿಟೀಕೆಗಳಿಗೆ ಕಾರಣವಾಗಿತ್ತು. ಪೆಗಾಸಸ್ ತಂತ್ರಾಂಶವನ್ನು ಒಂದು ಫೋನ್ ಕರೆಯ ಮೂಲಕ ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಬಹುದಿತ್ತು. ಬಳಕೆ ದಾರರಿಗೆ ಇದರ ಅರಿವೇ ಇರುವುದಿಲ್ಲ. ಈ ಗೂಢಚರ ತಂತ್ರಾಂಶಗಳು ವಿರೋಧ ಪಕ್ಷ ನಾಯಕರು ಮತ್ತು ಕೆಲವು ಪತ್ರಕರ್ತರ ಮೊಬೈಲ್‌ಗಳಲ್ಲಿ ಅಳವಡಿಕೆ ಮಾಡಿ ಅವರ ಮಾಹಿತಿಗಳನ್ನು ಕದಿಯುವ ಪ್ರಯತ್ನ ನಡೆದಿತ್ತು ಎನ್ನುವುದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರವನ್ನು ಸೃಷ್ಟಿಸಿತ್ತು. ಸರಕಾರದ ನೇತೃತ್ವದಲ್ಲೇ ನಡೆದ ಈ ಬೇಹುಗಾರಿಕೆಯ ಬಗ್ಗೆ ಗಂಭೀರ ತನಿಖೆ ನಡೆಯಬೇಕು ಎಂದು ವಿರೋಧ ಪಕ್ಷ ಒತ್ತಾಯಿಸಿತ್ತು. ಇದರಲ್ಲಿ ತನ್ನ ಪಾತ್ರವನ್ನು ಕೇಂದ್ರ ಸರಕಾರ ಸಾರಾಸಗಟಾಗಿ ನಿರಾಕರಿಸಿತ್ತು.
ಇದೀಗ ಕೇಂದ್ರ ಸರಕಾರ ‘ಸಂಚಾರ್ ಸಾಥಿ’ ಎನ್ನುವ ಆ್ಯಪ್‌ನ್ನು ಅಧಿಕೃತವಾಗಿ ಭಾರತೀಯರ ಮೊಬೈಲ್‌ಗಳಲ್ಲಿ ತುರುಕಿಸಲು ಮುಂದಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಹೊಸದಾಗಿ ತಯಾರಿಸುವ ಎಲ್ಲ ಮೊಬೈಲ್‌ಗಳಲ್ಲಿ ಸರಕಾರಿ ಒಡೆತನದ ಸೈಬರ್ ಸೆಕ್ಯೂರಿಟಿ ಆ್ಯಪ್ ‘ಸಂಚಾರ್ ಸಾಥಿ’ಯನ್ನು ಉಚಿತವಾಗಿ ಅಳವಡಿಸಬೇಕು ಎಂದು ಸ್ಮಾರ್ಟ್ ಫೋನ್ ತಯಾರಕರಿಗೆ ಕೇಂದ್ರ ದೂರಸಂಪರ್ಕ ಸಚಿವಾಲಯ ನಿರ್ದೇಶನ ನೀಡಿದೆ. ಈ ಆ್ಯಪ್‌ನ್ನು ಅನ್ ಇನ್‌ಸ್ಟಾಲ್ ಮಾಡುವ ಆಯ್ಕೆ ನೀಡಬಾರದು ಎಂದೂ ಸಚಿವಾಲಯ ಸೂಚನೆ ನೀಡಿದೆ. ಈಗಾಗಲೇ ಬಳಕೆಯಲ್ಲಿರುವ ಮೊಬೈಲ್‌ಗಳಿಗೆ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಈ ಆ್ಯಪ್ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದೂ ಅದು ತಿಳಿಸಿದೆ. ಆದರೆ ಆ್ಯಪಲ್‌ನಂತಹ ಕಂಪೆನಿಗಳು ಈ ಆದೇಶದ ವಿರುದ್ಧ ತಮ್ಮ ಆಕ್ಷೇಪಗಳನ್ನು ಸಲ್ಲಿಸಿವೆ. ಈ ಆ್ಯಪ್‌ನ್ನು ಕಡ್ಡಾಯಗೊಳಿಸುವುದರಿಂದ ಗೌಪ್ಯತೆ ಮತ್ತು ಭದ್ರತಾ ತತ್ವಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ಅದು ಆತಂಕ ವ್ಯಕ್ತಪಡಿಸಿವೆ. ಜಗತ್ತಿನ ಯಾವುದೇ ದೇಶದಲ್ಲೂ ಇಂತಹ ಕಡ್ಡಾಯ ಪ್ರಿ ಇನ್‌ಸ್ಟಾಲ್ ಇಲ್ಲ ಎಂದಿರುವ ಸಂಸ್ಥೆ, ಇದು ಗ್ರಾಹಕರ ಹಕ್ಕಿನ ಉಲ್ಲಂಘನೆಯೂ ಹೌದು ಎಂದು ಅಭಿಪ್ರಾಯ ಪಟ್ಟಿದೆ. ಕೇಂದ್ರ ಸರಕಾರ ‘ಸಂಚಾರ್ ಸಾಥಿ’ ಅಳವಡಿಕೆಗೆ ಬೇರೆ ಬೇರೆ ನೆಪಗಳನ್ನು ಮುಂದಿಟ್ಟಿದೆ. ಸೈಬರ್ ಅಪರಾಧಗಳನ್ನು ತಡೆಯುವ ಹೆಸರಿನಲ್ಲಿ ಈ ಆ್ಯಪ್‌ನ್ನು ಕಡ್ಡಾಯಗೊಳಿಸಲು ಹೊರಟಿದೆ.
ಆದರೆ ಸಂಚಾರಿ ಸಾಥಿಯನ್ನು ಕಡ್ಡಾಯಗೊಳಿಸುವುದೆಂದರೆ ಪ್ರತಿಯೊಬ್ಬರ ಮೇಲೆ ದೂರಸಂಪರ್ಕ ಇಲಾಖೆಯು ಕಣ್ಗಾವಲನ್ನು ಇಟ್ಟಂತೆಯೇ ಸರಿ. ಈ ಆ್ಯಪ್‌ನ್ನು ಇನ್ನೊಬ್ಬ ವ್ಯಕ್ತಿಯ ಚಲನವಲನಗಳನ್ನು ಗಮನಿಸುವುದಕ್ಕೆ ದುರ್ಬಳಕೆ ಮಾಡುವ ಎಲ್ಲ ಸಾಧ್ಯತೆಗಳಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇಂತಹ ಆ್ಯಪ್‌ಗಳ ಅಗತ್ಯ ತನಗಿದೆಯೋ ಇಲ್ಲವೋ ಎನ್ನುವುದನ್ನು ನಿರ್ಧರಿಸುವ ಹಕ್ಕು ಪ್ರತಿ ಭಾರತೀಯನಿಗೆ ಸೇರಿದ್ದು. ಸರಕಾರ ಇದರ ಬಗ್ಗೆ ಪ್ರಚಾರ ನೀಡಬಹುದು, ಜಾಗೃತಿಯನ್ನು ಹುಟ್ಟಿಸಬಹುದು. ಆದರೆ, ಕಡ್ಡಾಯವಾಗಿ ಅದನ್ನು ಹೇರುವಂತಿಲ್ಲ.
ಆದರೆ ಸರಕಾರ ನೇರವಾಗಿ ಕಂಪೆನಿಗಳಿಗೆ ಆದೇಶ ನೀಡುವ ಮೂಲಕ, ಭಾರತೀಯರ ಮೇಲೆ ಇದನ್ನು ಸದ್ದಿಲ್ಲದೆ ಹೇರಲು ಮುಂದಾಗಿದೆ. ಇದರಲ್ಲಿ ಜನರ ಖಾಸಗಿ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದಾದರೆ ಮೊಬೈಲ್ ಕಂಪೆನಿಗಳು ಈ ಬಗ್ಗೆ ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸುವ ಅಗತ್ಯವಿದ್ದಿರಲಿಲ್ಲ. ತನ್ನ ಗ್ರಾಹಕರ ಮಾಹಿತಿಗಳನ್ನು ಕದಿಯುವ ಪ್ರಯತ್ನ ನಡೆಯುತ್ತಿರುವುದರ ಬಗ್ಗೆ ಆ್ಯಪಲ್ ಕಂಪೆನಿ ಈ ಹಿಂದೆಯೂ ಎಚ್ಚರಿಸುತ್ತಾ ಬಂದಿದೆ. ಈ ಸಂಬಂಧ ಗ್ರಾಹಕರಿಗೆ ಸಂದೇಶಗಳನ್ನೂ ನೀಡಿದೆ. ಇದೀಗ ಸರಕಾರದ ನೇತೃತ್ವದಲ್ಲಿ ಅಧಿಕೃತ ಕಳ್ಳತನದ ಬಗ್ಗೆ ಅದು ಕಳವಳ ವ್ಯಕ್ತಪಡಿಸುತ್ತಿದೆ. ‘ಸಂಚಾರ್ ಸಾಥಿ’ ಬಗ್ಗೆ ವಿವಿಧ ಕಂಪೆನಿಗಳಲ್ಲದೆ ದೇಶದ ಜನರು ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದ ಹಾಗೆಯೇ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ‘ಆ್ಯಪ್ ಕಡ್ಡಾಯವಲ್ಲ, ಐಚ್ಛಿಕ’ ಎಂದು ಹೇಳಿಕೆ ನೀಡಿದ್ದಾರೆ. ಆ್ಯಪ್‌ನ್ನು ಅನ್ ಇನ್‌ಸ್ಟಾಲ್ ಮಾಡುವ ಅವಕಾಶ ವಿರುತ್ತದೆ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ. ತೀವ್ರ ವಿರೋಧದ ಬೆನ್ನಿಗೇ ತನ್ನ ಆದೇಶವನ್ನು ಹಿಂದೆಗೆದುಕೊಂಡಿರುವ ಕೇಂದ್ರ ಸರಕಾರ ‘ಆ್ಯಪನ್ನು ಜನರು ಈಗ ಹೆಚ್ಚು ಹೆಚ್ಚುಬಳಸುತ್ತಿದ್ದಾರೆ. ಡೌನ್‌ಲೋಡ್ ಮಾಡುತ್ತಿರುವವ ಸಂಖ್ಯೆ ಹಲವು ಪಟ್ಟು ಹೆಚ್ಚುತ್ತಿರುವುದರಿಂದ ಹಿಂದೆಗೆದುಕೊಂಡಿದ್ದೇವೆ’ ಎಂದು ಸಮರ್ಥನೆ ನೀಡಿದೆ.
ಈ ಹಿಂದೆ ಲಸಿಕೆಯನ್ನು ‘ಐಚ್ಛಿಕ’ ಎನ್ನುತ್ತಲೇ ಈ ದೇಶದ ಜನತೆಯ ಮೇಲೆ ಪರೋಕ್ಷವಾಗಿ ಹೇರಿತು. ಅದರ ಪರಿಣಾಮವನ್ನು ಇಂದು ದೇಶ ಉಣ್ಣುತ್ತಿದೆ. ಎನ್‌ಆರ್‌ಸಿ ಮಾಡುವುದಿಲ್ಲ ಎಂದು ಹೇಳುತ್ತಲೇ ಬೇರೆ ಬೇರೆ ರೂಪಗಳಲ್ಲಿ ಪೌರತ್ವ ಸಾಬೀತು ಮಾಡುವುದನ್ನು ಸರಕಾರ ಕಡ್ಡಾಯಗೊಳಿಸುತ್ತಿದೆ. ಇದೀಗ ವಂಚಕರ ಕಡೆಗೆ ಬೆರಳು ತೋರಿಸುತ್ತ ಸರಕಾರವೇ ಜನರನ್ನು ವಂಚಿಸಲು ನೋಡುತ್ತಿದೆಯೇ ಎನ್ನುವ ಅನುಮಾನ ಜನರಲ್ಲಿ ಮೂಡತೊಡಗಿದೆ. ಈಗಾಲೇ ಮೊಬೈಲ್ ಹ್ಯಾಕರ್‌ಗಳು ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಂದ ಜನರನ್ನು ರಕ್ಷಿಸುವುದು ಸರಕಾರದ ಹೊಣೆಗಾರಿಕೆಯಾಗಿದೆ. ಆದರೆ ಇವರ ಹೆಸರನ್ನು ಬಳಸಿಕೊಂಡು ಸರಕಾರವೇ ಜನರ ಮೊಬೈಲ್ ಒಳಗೆ ಇಣುಕುವುದು ಎಷ್ಟು ಸರಿ? ಸರಕಾರದೊಳಗಿರುವ ಶಕ್ತಿಗಳು ರಾಜಕೀಯ ಕಾರಣಗಳಿಗೆ ತಂತ್ರಜ್ಞಾನವನ್ನು ಕುತಂತ್ರಕ್ಕೆ ಬಳಸುವುದು ಸೈಬರ್ ಅಪರಾಧಿಗಳಿಗೆ ಇನ್ನಷ್ಟು ಕುಮ್ಮಕ್ಕು ನೀಡಿದಂತಾಗಬಹುದು. ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎನ್ನುವುದು ತಿಳಿಯದೆ ಜನರು ಈಗಾಗಲೇ ಆತಂಕದಲ್ಲಿದ್ದಾರೆ. ಇಂತಹ ಹೊತ್ತಿನಲ್ಲಿ ಸಂಚಾರ್ ಸಾಥಿಯಂತಹ ಆ್ಯಪ್‌ಗಳನ್ನು ಜನರ ಮೇಲೆ ಯಾವ ಕಾರಣಕ್ಕೂ ಕಡ್ಡಾಯಗೊಳಿಸಬಾರದು. ಅಗತ್ಯವಿರುವವರು ಈ ಆ್ಯಪ್‌ನ್ನು ಅಳವಡಿಸಿಕೊಳ್ಳಲಿ. ಹಾಗೆಯೇ ಇದನ್ನು ಯಾವಾಗಬೇಕಾದರೂ ಅನ್‌ಇನ್‌ಸ್ಟಾಲ್ ಮಾಡುವ ಅವಕಾಶ ಜನರಿಗೆ ನೀಡಲಿ. ಆಗ ಮಾತ್ರ ಸರಕಾರದ ಪ್ರಯತ್ನದ ಬಗ್ಗೆ ಜನರಲ್ಲಿ ನಂಬಿಕೆ ಮೂಡಬಹುದು.