ಸತತ ಎರಡು ತ್ರೈಮಾಸಿಕದಲ್ಲಿ ಜಿಡಿಪಿ ಕುಸಿತ: ಆರ್ಥಿಕ ಹಿಂಜರಿತಕ್ಕೆ ಜಾರಿದ ಜರ್ಮನಿ

Update: 2023-05-25 17:05 GMT

ಬರ್ಲಿನ್, ಮೇ 25: ಸತತ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಕುಸಿದ ಹಿನ್ನೆಲೆಯಲ್ಲಿ  ವಿಶ್ವದ 4ನೇ ಅತೀದೊಡ್ಡ ಆರ್ಥಿಕತೆ ಮತ್ತು ಯುರೋಪ್ ನ ಅತೀ ದೊಡ್ಡ ಆರ್ಥಿಕತೆಯಾಗಿರುವ  ಜರ್ಮನಿ ತಾನು ಆರ್ಥಿಕ ಹಿಂಜರಿತಕ್ಕೆ ಜಾರಿರುವುದಾಗಿ ದೃಢಪಡಿಸಿದೆ.

ಜರ್ಮನಿಯ ಜಿಡಿಪಿ ಅಂಕಿಅಂಶವು ಆಶ್ಚರ್ಯಕರವಾಗಿ ನಕಾರಾತ್ಮಕ ಸಂಕೇತಗಳನ್ನು ದಾಖಲಿಸಿದೆ. ಜರ್ಮನಿಯನ್ನು ಇತರ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳೊಂದಿಗೆ ಹೋಲಿಸಿದಾಗ, ನಮ್ಮ ಆರ್ಥಿಕತೆಯು ಬೆಳವಣಿಗೆಯ ಸಾಮಥ್ರ್ಯವನ್ನು ಕಳೆದುಕೊಳ್ಳುತ್ತಿದೆ ಎಂದು ಜರ್ಮನಿಯ ವಿತ್ತಸಚಿವ ಕ್ರಿಶ್ಚಿಯನ್ ಲಿಂಡ್ ನರ್ ಹೇಳಿದ್ದಾರೆ. ನಮ್ಮನ್ನು ನಾವೇ ಕೊನೆಯ ಸ್ಥಾನಕ್ಕೆ ಕೆಳಗಿಳಿಸುವ ಲೀಗ್ ನಲ್ಲಿ ಜರ್ಮನಿ ಆಡುವುದನ್ನು ನಾನು ಬಯಸುವುದಿಲ್ಲ ಎಂದವರು ಹೇಳಿದ್ದು, 2023ರಲ್ಲಿ ಯುರೋಪಿಯನ್ ದೇಶಗಳಲ್ಲಿ ಜರ್ಮನಿ ಮತ್ತು ಬ್ರಿಟನ್ ನಲ್ಲಿ ಮಾತ್ರ ಆರ್ಥಿಕ ಹಿಂಜರಿತ ಉಂಟಾಗಲಿದೆ ಎಂಬ ಐಎಂಎಫ್ ನ ಮುನ್ಸೂಚನೆಯನ್ನು ಉಲ್ಲೇಖಿಸಿದ್ದಾರೆ.   

2022ರ ಆರ್ಥಿಕ ವರ್ಷದ 4ನೇ ತ್ರೈಮಾಸಿಕದಲ್ಲಿ ಋಣಾತ್ಮಕ ಬೆಳವಣಿಗೆ ನಂತರ ಈ ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ಜರ್ಮನಿಯ ಆರ್ಥಿಕತೆಯು ಸ್ವಲ್ಪಮಟ್ಟಿಗೆ ಸಂಕುಚಿತಗೊಂಡಿದೆ. ಜರ್ಮನಿ ಆರ್ಥಿಕ ಹಿಂಜರಿತಕ್ಕೆ ಜಾರಿರುವುದು ದೃಢಪಡುತ್ತಿದ್ದಂತೆಯೇ ಡಾಲರ್ ಎದುರು  ಯುರೋ ಕರೆನ್ಸಿಯ ಮೌಲ್ಯ ಕುಸಿದಿರುವುದಾಗಿ ರೇಟಿಂಗ್ಸ್ ಏಜೆನ್ಸಿ `ಫಿಚ್'ನ ವರದಿ ಹೇಳಿದೆ.

ಬೆಲೆ ಮತ್ತು ಕ್ಯಾಲೆಂಡರ್ ಪರಿಣಾಮಗಳನ್ನು ಸರಿಹೊಂದಿಸಿದಾಗ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ)ವು ತ್ರೈಮಾಸಿಕದಲ್ಲಿ 0.3%ದಷ್ಟು ಕುಸಿದಿರುವುದು ಆರ್ಥಿಕ ಹಿಂಜರಿತದ ಸಂಕೇತವಾಗಿದೆ. ಎರಡು ಸತತ ತ್ರೈಮಾಸಿಕದಲ್ಲಿ ಜಿಡಿಪಿಯ ಕುಸಿತವು ಆರ್ಥಿಕತೆಯ ಹಿಂಜರಿತದ ಸೂಚನೆಯಾಗಿದೆ .

ಯುದ್ಧನಿರತ ರಶ್ಯದಿಂದ ಇಂಧನ ಪೂರೈಕೆ ಇಳಿಮುಖವಾಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿ ಹಣದುಬ್ಬರವನ್ನು ಪ್ರಚೋದಿಸಿದೆ. ಜತೆಗೆ ಮನೆಬಳಕೆಯು 1.2%ಕ್ಕೆ ಇಳಿಸಿದೆ ಎಂದು ಎಂದು ವರದಿ ಹೇಳಿದೆ. . `ಅಪಾರ ಹಣದುಬ್ಬರದ ಭಾರದಲ್ಲಿ ಜರ್ಮನಿಯ ಗ್ರಾಹಕ ಮೊಣಕಾಲಿಗೆ ಕುಸಿದಿದ್ದಾನೆ. ಜತೆಗೆ ಸಂಪೂರ್ಣ ಅರ್ಥವ್ಯವಸ್ಥೆಯನ್ನೂ ತನ್ನೊಂದಿಗೆ ಎಳೆದುಕೊಂಡಿದ್ದಾನೆ' ಎಂದು ಆರ್ಥಿಕತಜ್ಞ ಆಂಡ್ರಿಯಾಸ್ ಶುವೆರ್ಲೆ ಪ್ರತಿಕ್ರಿಯಿಸಿದ್ದಾರೆ. 

ಅಮೆರಿಕದ ಸಾಲದ ಮಿತಿ ಏರಿಕೆಯ ಬಗ್ಗೆ ಸಂಸದರು ಸಹಮತಕ್ಕೆ ಬರಲು ವಿಫಲವಾಗಿರುವ ಹಿನ್ನೆಲೆಯಲ್ಲಿ  ಅಮೆರಿಕದ `ಎಎಎ' ಸಾಲದ ರೇಟಿಂಗ್ ಅನ್ನು ಋಣಾತ್ಮಕ ವೀಕ್ಷಣೆಯಲ್ಲಿ ಇರಿಸಲಾಗಿದೆ.

Similar News